ಅವತ್ತು 1992ರ ಡಿಸೆಂಬರ್ 6. ಹೇಳಿ ಕೇಳಿ ಭಾನುವಾರ. ಆಗೆಲ್ಲಾ ದೂರದರ್ಶನದ ಪ್ರಭೆ ಇದ್ದ ಕಾಲ. ದೂರದರ್ಶನದಲ್ಲಿ ಬೆಳಗಿನ ಸೀರಿಯಲ್‌ಗಳನ್ನು ನೋಡುವ ಚಟ ಅಂಟಿಸಿಕೊಂಡಿದ್ದವರು ಟಿವಿ ಮುಂದೆ ವಿರಾಜಮಾನರಾಗಿದ್ದರೆ, ಹಲವಾರು ಮಂದಿ ಹಾಗೇ ಅಡ್ಡಾಡುತ್ತಾ, ಓಡಾಡುತ್ತಾ ಕಾಲ ಕಳೆಯುತ್ತಿದ್ದರು. ಇಡೀ ದೇಶದ ಕಣ್ಣು ದೂರದ ಉತ್ತರ ಪ್ರದೇಶದ ಮೇಲಿತ್ತು.
ಅಯೋಧ್ಯೆಯಲ್ಲಿ ರಾಮಕೋಟ್ ಎಂಬ ಪುಟ್ಟದೊಂದು ದಿಬ್ಬ. ಅದರ ಸುತ್ತಲೂ ಲಕ್ಷೊಪಲಕ್ಷ ಜನ. ಅವರೆಲ್ಲರೂ, ಕರಸೇವಕರು ಎಂದು ಗುರುತಿಸಿಕೊಂಡವರು. ಅವರೆಲ್ಲರೂ ರಥಯಾತ್ರೆಗೆ ಮನಸೋತು ತಮ್ಮ ಊರು, ಕೇರಿಗಳನ್ನು ಬಿಟ್ಟು ಬಂದಿದ್ದವರು. ಕೈಗಳಲ್ಲಿ ಗುದ್ದಲಿ, ಸುತ್ತಿಗೆ, ಕೊಡಲಿಯಂಥ ಸಾಮಗ್ರಿಗಳಿದ್ದವು. ಅವರೆಲ್ಲರೂ ದೃಷ್ಟಿ ನೆಟ್ಟಿದ್ದು ಒಂದೇ ಕಡೆ… ಆ ದಿಬ್ಬದ ಮೇಲಿದ್ದ ಕಟ್ಟಡದ ಮೇಲೆ. ಬಾಯಿಂದ ಎಲ್ಲರ ಬಾಯಲ್ಲೂ “ಇದೇ ಜಾಗದಲ್ಲಿ ನಾವು ರಾಮಮಂದಿರ ಕಟ್ಟುತ್ತೇವೆ. ರಾಮಮಂದಿರ ಕಟ್ಟುತ್ತೇವೆ’ ಎಂಬ ಘೋಷವಾಕ್ಯ ಹೊರಬರುತ್ತಿತ್ತು. ಯಾರಿಗೂ ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ.
ದಿಬ್ಬದ ತಪ್ಪಲಿನ ಸುತ್ತಲೂ ತಂತಿ ಬೇಲಿ… ಸಾಲದ್ದಕ್ಕೆ ಸಾವಿರಾರು ಪೊಲೀಸರ ಪಹರೆ. ಊಹೂnಂ… ಅಲ್ಲಿಗೆ ಒಂದೇ ಒಂದು ನರಪಿಳ್ಳೆಯೂ ತಲುಪುವ ಹಾಗಿರಲಿಲ್ಲ. ಅಲ್ಲಿ ನೆರೆದಿದ್ದ ಕರಸೇವಕರನ್ನು ಕರೆತಂದಿದ್ದ ನಾಯಕರು ತಮ್ಮ ಭಾಷಣಗಳಿಂದ, ಘೋಷ ವಾಕ್ಯಗಳಿಂದ ಅವರನ್ನು ಹುರಿದುಂಬಿಸುತ್ತಿದ್ದರು. ಇತ್ತ, ಕರಸೇವಕರು ಬೇಲಿ ದಾಟಿ ಬಂದರೆ, ಅವರನ್ನು ಖಂಡಿತ ತಡೆಯುತ್ತೇವೆ ಎಂಬ ವಿಶ್ವಾಸದಲ್ಲಿ ಇತ್ತು ತಂತಿ ಬೇಲಿಯ ಮಗ್ಗುಲಲ್ಲಿ ನಿಂತಿದ್ದ ಪೊಲೀಸ್ ಪಡೆ!
ಪತ್ರಕರ್ತರಿಗೆ ಬಂತು ಸಂದೇಶ: ಇಂಥದ್ದೊಂದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ, ಊಟ, ತಿಂಡಿ, ನಿದ್ರೆಗಳನ್ನು ಬಿಟ್ಟು ಕಾಯುತ್ತಿದ್ದವರೆಂದರೆ ಅದು ಪತ್ರಕರ್ತರು! ಈಗೇನಾಗುತ್ತೋ, ಇನ್ನೊಂದು ಕ್ಷಣದಲ್ಲೇನಾಗುತ್ತೋ ಅಂತ ಕಾಯುತ್ತಾ ಕುಳಿತಿದ್ದ ಅವರ ಸಮೂಹಕ್ಕೆ ಬೆಳಗ್ಗೆ 10 ಗಂಟೆ ಸುಮಾರಿಗೆ ಒಂದು ಸಂದೇಶ ಬಂತು. “ಪರಿಸ್ಥಿತಿ ಎಲ್ಲವೂ ಹತೋಟಿಯಲ್ಲಿದೆ. ಗಂಟೆಗಟ್ಟಲೆ ನಿಂತು ದಣಿದಿದ್ದೀರಿ. ಹೋಗಿ ಒಂದಿಷ್ಟು ಆರಾಮ ಮಾಡಿಕೊಂಡು ಕೆಲ ಸಮಯದ ನಂತರ ಬನ್ನಿ’. ಅದು ಫೈಜಾಬಾದ್ ಜಿಲ್ಲೆಯ ಎಸ್‌ಪಿ ಕಚೇರಿಯಿಂದ ಬಂದ ಮಾಹಿತಿಯಾದ್ದರಿಂದ ಪತ್ರಕರ್ತರಲ್ಲಿ ಬಹುತೇಕರು ಕೊಂಚ ಮೈ, ಮನಸ್ಸು ಸಡಿಲಿಸಿ ಆಚೀಚೆ ಚದುರಿದರು.
ಎಲ್ಲಿಂದ ತೂರಿ ಬಂದ ಅವನು?: ಶ್ರೀರಾಮನ ಹೆಸರಲ್ಲಿ ಜಯಕಾರ ಹಾಕುತ್ತಾ, ತೆರಳುತ್ತಿದ್ದ ಕರಸೇವಕರಲ್ಲಿದ್ದ ಯಾವನೋ ಒಬ್ಬ ಅದು ಹೇಗೋ, ಏನೋ ಪೊಲೀಸರ ಸರ್ಪಗಾವಲನ್ನೂ ದಾಟಿ ಆ ಕಟ್ಟಡದ ಅರ್ಧಕ್ಕೇರಿ ನಿಂತು ಕೇಸರಿ ಬಾವುಟವನ್ನು ಹಾರಿಸಲಾರಂಭಿಸಿದ! ಅದನ್ನು ನೋಡಿದ್ದೇ ತಡ, ಆ ಲಕ್ಷಾಂತರ ಕರಸೇವಕರು ಕೆರಳಿದರು. ರಾಮಕೋಟ್ ದಿಬ್ಬದತ್ತ . ಸುನಾಮಿ ಅಲೆಗಳಂತೆ ಬಂದು ಅಪ್ಪಳಿಸಿದ ಲಕ್ಷಾಂತರ ಕರಸೇವಕರನ್ನು ಹಿಡಿಯಲು ಬಡಪಾಯಿ ಸಾವಿರಾರು ಪೊಲೀಸರಿಗೆ ಸಾಧ್ಯವಾಗಲೇ ಇಲ್ಲ.
ಹಾಗೆ ಬೇಲಿ ದಾಟಿ ಕಟ್ಟಡವನ್ನು ಹತ್ತಿದ ಕರಸೇವಕರು, ಕೈಯ್ಯಲ್ಲಿದ್ದ ತಮ್ಮ ಹಾರೆ, ಗುದ್ದಲಿಯಂಥ ಸಾಮಗ್ರಿಗಳಿಂದ ನೋಡ ನೋಡುತ್ತಿದ್ದಂತೆ ಆ ಕಟ್ಟಡವನ್ನು ಒಡೆದು ಹಾಕಿದರು. ಅದರ ಮೂರು ಗುಂಬಜ್‌ಗಳೂ ಧೊಪ್ಪನೆ ನೆಲಕ್ಕುರುಳಿಬಿದ್ದವು. ಸಂಜೆ 4:30ರ ಹೊತ್ತಿಗೆ ಇಡೀ ಪ್ರಾಂತ್ಯ ಅವಶೇಷಗಳಿಂದ ಹೊರಬಂದ ಕೆಮ್ಮಣ್ಣಿನ ಧೂಳಿನಿಂದ ಆವೃತವಾಯಿತು. ಅದರ ಜತೆಯಲ್ಲೇ, ಕರಸೇವಕರ ಜಯಘೋಷಗಳು ಮುಗಿಲನ್ನು ಮುಟ್ಟಿದ್ದವು: “ಜೈ ಶ್ರೀರಾಮ್, ಜೈ ಶ್ರೀರಾಮ್’!