Advertisement
ದೆಹಲಿ ಮೂಲದ ಸತೀಶ್ ಚಾಂದ್ ಶರ್ಮಾ ಬಂಧಿತ ಆರೋಪಿ. ಸತೀಶ್ ಚಾಂದ್ ಶರ್ಮಾ, ಆದಾಯ ತೆರಿಗೆ ಇಲಾಖೆಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತನಗೆ ಆತ್ಮೀಯರಾಗಿದ್ದು, ಖಾಸಗಿ ಕಂಪನಿಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ಐಟಿ ಅಧಿಕಾರಿಗಳಿಗೆ ಲಂಚ ನೀಡಿ ಮುಚ್ಚಿ ಹಾಕಿಸುವುದಾಗಿ ಹೇಳಿಕೊಂಡು ಡೀಲಿಂಗ್ ನಡೆಸುತ್ತಿದ್ದ. ಶಾಂತಿ ಪಾನ್ ಮಸಾಲ, ಎಂಟಿ ಟೊಬ್ಯಾಕೊ, ಎಸ್‌ಎಸ್ ಎಸ್ಸೆನ್ಸ್ ಸಂಸ್ಥೆಗಳು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣರದ್ದು ಗೊಳಿಸುವಂತೆ ಈತನ ಮೊರೆ ಹೋಗಿದ್ದವು. ಈ ವಿಚಾರದಲ್ಲಿ ಉದ್ಯಮಿ ಕೃಷ್ಣಚೌರಾಸಿಯಾ, ಆರೋಪಿ ಸತೀಶ್ ಚಾಂದ್ ಶರ್ಮಾನ ನೆರವು ಕೋರಿದ್ದ ಎಂದು ಹೇಳಲಾಗಿದೆ. ಅದರಂತೆ ಆ.30ರಂದು ಬೆಂಗಳೂರಿಗೆ ಬಂದಿದ್ದ ಸತೀಶ್‌ಚಾಂದ್ ಶರ್ಮಾ ಕ್ರೆಸೆಂಟ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ತಾನು ಐಟಿ ಅಧಿಕಾರಿಗಳಿಗೆ 35 ಲಕ್ಷ ರೂ. ತಲುಪಿಸಬೇಕಿದ್ದು, ಹಣ ಕಳುಹಿಸಿಕೊಡುವಂತೆ ಕೃಷ್ಣ ಚೌರಾಸಿಯಾಗೆ ತಿಳಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಸಿಬಿಐ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಕೃಷ್ಣ ಚೌರಾಸಿಯಾ ನಡೆಸುತ್ತಿದ್ದ ಉದ್ಯಮಗಳ ಮೇಲೆ ದಾಖಲಾದ ಪ್ರಕರಣಗಳನ್ನು ಮುಚ್ಚಿಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸತೀಶ್ ಚಾಂದ್ ಶರ್ಮಾ, ಈ ಕಾರ್ಯಕ್ಕೆ ಹಲವು ಬಾರಿ ಕೊಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು ಐಟಿ ಘಟಕದ ಹಲವು ಅಧಿಕಾರಿಗಳ ಜತೆ ಚರ್ಚೆ
ನಡೆಸಿದ್ದಾನೆ. ಜತೆಗೆ ಈ ಕಾರ್ಯಕ್ಕೆ ಕೊಲ್ಕತ್ತಾ ಐಟಿ ಅಧಿಕಾರಿಗಳಿಗೆ ಆಗಸ್ಟ್ 2ರಂದು, ಆ.16ರಂದು ಚೆನೈ, ಆ.17ರಂದು ಮುಂಬೈನ ಉನ್ನತ ಐಟಿ ಅಧಿಕಾರಿಗಳಿಗೆ ತಲಾ 30 ಲಕ್ಷ ರೂ. ಲಂಚ ನೀಡಿರುವ ಬಗ್ಗೆ ಮಾಹಿತಿಯಿದೆ. ಅಲ್ಲದೆ ಸದ್ಯದ ಲ್ಲಿಯೇ ಬೆಂಗಳೂರು ಐಟಿ ಇಲಾಖೆ ಅಧಿಕಾರಿಗಳಿಗೂ ಲಂಚ ಸಂದಾಯ ವಾಗಿರುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಆರೋಪಿ ಬಂಧನವಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.