Advertisement
ದೇವತೆಗಳಿಗೆ ಅಮರತ್ವವಿದೆ ಎಂದು ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಇಂಥ ಅಮರ ಜೀವಿಯೊಂದು ಭೂಮಿಯಲ್ಲಿದೆ ಎಂದರೆ ನಂಬುತ್ತೀರಾ? ಸಾಗರಜೀವಿ ಯಾದ “ಟುರ್ರಿಟೋಪ್ಪಿಸ್ ನ್ಯೂಟ್ರಿಕ್ಯೂಲಾ’ ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿ ಫಿಶ್) ವಿಶ್ವದ ಏಕಮಾತ್ರ ಚಿರಂಜೀವಿಯಾಗಿದೆ..!! ಆಡು ಭಾಷೆಯಲ್ಲಿ ಇದನ್ನು “ಅಂಬಲಿ ಮೀನು’ ಎಂದು ಕರೆಯಲಾಗುತ್ತದೆ.ಎಲ್ಲರಂತಲ್ಲ ಈ ಮೀನು
ಅಂಬಲಿ ಮೀನನ್ನು ಎಲ್ಲಾ ಮೀನುಗಳಂತೆ ಎಂದುಕೊಂಡು ಹಿಡಿಯಲು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಹೆಸರಲ್ಲಿ ಮೀನು ಪದ ಇದ್ದರೂ ಇದು ಸಾಮಾನ್ಯ ಮೀನಲ್ಲವೇ ಅಲ್ಲ. ಇವುಗಳಲ್ಲಿ ವಿವಿಧ ಗಾತ್ರಗಳಿದ್ದು ಅವು ನದಿ ಮತ್ತು ಕಡಲುಗಳಲ್ಲಿ ತೇಲಾಡುತ್ತಿರುತ್ತವೆ. ಕವುಚಿದ ಬಟ್ಟಲಂತಿರುವ, ಅಂಬಲಿಯ ಮುದ್ದೆಯಂತೆಯೇ ಕಾಣಿಸುವ ಇವುಗಳು ನೋಡಲು ವಿಚಿತ್ರವಾಗಿರುತ್ತವೆ. ಅವುಗಳ ಕವುಚು ಬಟ್ಟಲಿನ ಕೆಳಭಾಗದ ನಟ್ಟ ನಡುವೆ ಬಾಯಿ ಇರುತ್ತದೆ. ಬಟ್ಟಲ ಅಂಚಿನ ಸುತ್ತಲೂ ಜೋತಾಡಿಕೊಂಡಿರುವ ಹಲವಾರು ಬಳ್ಳಿಗಾಲುಗಳಿವೆ. ಅಂಬಲಿ ಮೀನು ತನ್ನ ಬಳ್ಳಿಗಾಲುಗಳ ಸಹಾಯದಿಂದ ತಮ್ಮ ಸಮೀಪಕ್ಕೆ ಸಿಗುವ ಕ್ರಿಮಿಗಳನ್ನು ಹಿಡಿದು ತಿನ್ನುತ್ತವೆ.
ಬಳ್ಳಿಗಾಲುಗಳಲ್ಲಿ ತೀಕ್ಷ್ಣ ನಂಜನ್ನು ಕಾರಬಲ್ಲ ಗ್ರಂಥಿಗಳಿದ್ದು ಅವುಗಳ ಸ್ಪರ್ಶಕ್ಕೆ ಸಿಕ್ಕ ಜೀವಿಗಳು ಪಾರಾಗುವುದು ಅಸಾಧ್ಯ. ಬಳ್ಳಿಗಾಲುಗಳು ತಮ್ಮ ಹಿಡಿತಕ್ಕೆ ಸಿಗುವ ಜೀವಿಯನ್ನು ಬಾಯೊಳಗೆ ತುರುಕುತ್ತವೆ. ಹೊಟ್ಟೆ ಸೇರಿದ ಮೇಲೆ ಆಹಾರವನ್ನು ಅಂಬಲಿ ಮೀನು ಜೀರ್ಣಿಸಿಕೊಳ್ಳುತ್ತದೆ. ವಿಜ್ಞಾನಿಗಳು ಇದುವರೆಗೂ ನಡೆಸಿರುವ ಪರೀಕ್ಷೆ ಹಾಗೂ ಸಂಶೋಧನೆಗಳಲ್ಲಿ ಅಂಬಲಿ ಮೀನು ಸಾವನ್ನಪ್ಪಿದ ಬಗ್ಗೆ ಒಂದೇ ಒಂದು ಉದಾಹರಣೆಯೂ ಲಭ್ಯವಾಗಿಲ್ಲ. ಹೀಗಾಗಿ ಅಮರತ್ವ ಹೊಂದಿರುವ ಜೀವಿ ಇದೆಂದು ಹೇಳಿದರೂ ತಪ್ಪಾಗಲಾರದು. ಅಂಬಲಿ ಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸ ಹೊಂದಿದೆ. ಬರೀಗಣ್ಣಿನಿಂದಲೂ ಇದನ್ನು ನೋಡಬಹುದು. ಹೆಚ್ಚಿನ ಸಂಖ್ಯೆಯ ಲೋಳೆ ಮೀನು ಆಸ್ಟ್ರೇಲಿಯಾದ ಬಳಿ ಕಾಣಸಿಗುತ್ತವೆ.
ಇವುಗಳ ಹುಟ್ಟಿನ ಹಿಂದಿನ ರಹಸ್ಯ ಮರುಹುಟ್ಟು. ಅದರೆ ಇವುಗಳು ಟ್ರಾನ್ಸಿಫರೇನ್ಸಿಯೇಷನ್ ಪ್ರಕ್ರಿಯೆಯ ಮೂಲಕ ಹಾಳಾದ ದೇಹದ ಕೋಶಗಳನ್ನು ರಿಪೇರಿ ಮಾಡಿಕೊಂಡು ಹೊಸತಾಗುತ್ತದೆ. ಈ ಸಮೂಹ ಒಂದಕ್ಕೊಂದು ಅಂಟಿಕೊಂಡು ನೂತನ ಜೀವಿ ಉತ್ಪತ್ತಿಯಾಗುತ್ತದೆ. ಹೀಗೆ ಮರುಹುಟ್ಟು ಪಡೆದ ಹೊಸಜೀವಿ ಹೊಸ ಸಮೂಹ ರಚಿಸಲು ಆರಂಭಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ.
Related Articles
Advertisement
ಪ.ನಾ.ಹಳ್ಳಿ.ಹರೀಶ್ ಕುಮಾರ್