Advertisement
ಸೋಮವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ) ನಿಯಮಾವಳಿ ಪ್ರಕಾರ ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀಟರ್ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಮಧ್ಯಭಾಗದಿಂದ 25 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ. ಆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಿದರೆ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಗತ್ಯವೆನಿಸಿದಾಗ ಕಟ್ಟಡ ತೆರವಿಗೆ ಪರಿಹಾರ ನೀಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ ಎಂದು ತಿಳಿಸಿದರು.
Related Articles
ಕೆಲ ಭೂಮಾಲೀಕರು ನ್ಯಾಯಾಲಯ ಮೊರೆ ಹೋಗಿ ಹೆದ್ದಾರಿ ಅಂಚಿನಿಂದ ಆರು ಮೀಟರ್ ಮೀರಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ಆದರೆ ಇದನ್ನು ಕೆಲವೆಡೆ ಪಾಲಿಸುತ್ತಿದ್ದರೆ, ಇನ್ನೂ ಕೆಲವೆಡೆ ಪಾಲಿಸುತ್ತಿಲ್ಲ. ಒಂದೊಂದು ಜಿಲ್ಲೆ, ರಸ್ತೆಗೆ ಒಂದೊಂದು ಕಾನೂನು ಇದೆಯೇ? ಎಂದು ಪ್ರಶ್ನೆ ಮಾಡಿದರು.
Advertisement
ಬಿಜೆಪಿಯ ಗೂಳಿಹಟ್ಟಿ ಶೇಖರ್, ಗ್ರಾಮ ಪಂಚಾಯ್ತಿ, ಪುರಸಭೆ ವ್ಯಾಪ್ತಿಯಲ್ಲಿ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಿಗೂ ನಿರ್ದಿಷ್ಟ ನಿರ್ಬಂಧ ವ್ಯಾಪ್ತಿಯಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ ಖಾತಾ ಕೂಡ ನೀಡಲಾಗುತ್ತಿದ್ದು, ಅನಧಿಕೃತ ಕಟ್ಟಡಗಳು ತಲೆಯೆತ್ತುತ್ತಿವೆ ಎಂದು ಹೇಳಿದರು. ಬಿಜೆಪಿಯ ಬಿ.ಸಿ. ನಾಗೇಶ್, ನಂಜೇಗೌಡ ಇತರರು ದನಿಗೂಡಿಸಿದರು.
ಬಳಿಕ ಉತ್ತರಿಸಿದ ಗೋವಿಂದ ಕಾರಜೋಳ, ಒಂದೊಂದು ರಾಜ್ಯ, ಜಿಲ್ಲೆ, ರಸ್ತೆಗೊಂದು ಕಾನೂನು ಇರಲು ಸಾಧ್ಯವಿಲ್ಲ. ದೇಶ, ರಾಜ್ಯಕ್ಕೆ ಒಂದೇ ಕಾನೂನು. ನಿಯಮ ಮೀರಿ ಕಟ್ಟಡ ನಿರ್ಮಿಸಿದರೆ ಒತ್ತುವರಿಯಾಗುತ್ತದೆ. ಯಾವುದಾದರೂ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ ಮಾಹಿತಿ ನೀಡಿದರೆ ಪರಿಶೀಲಿಸಿ ಉತ್ತರ ನೀಡಲಾಗುವುದು. ಇಂದಿನ ಬೆಳವಣಿಗೆ, ವಾಹನಗಳ ಸಂಖ್ಯೆ ಗಮನಿಸಿದರೆ ಹೆದ್ದಾರಿ, ಮುಖ್ಯ ರಸ್ತೆಯ ವಿಸ್ತರಣೆ, ಅಭಿವೃದ್ಧಿ ಅಗತ್ಯವಿದೆ ಎಂದು ಹೇಳಿದರು.
ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ನಿರ್ಬಂಧಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, ಖಾತಾ ನೀಡಿಕೆ ಇತರೆ ವಿಚಾರ ಕುರಿತಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.