Advertisement
ಇತ್ತೀಚೆಗೆ ಹಿನ್ನೀರಿನಲ್ಲಿ ನೀರು ಕುಡಿಯಲು ಹೋಗಿದ್ದ ಜಿಂಕೆಗಳ ಕೊಂಬಿಗೆ ಮೀನಿನ ಬಲೆ ಸಿಲುಕಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಜಿಂಕೆಗಳಿಗೆ ಘಾಸಿಯಾಗದಂತೆ ಅರವಳಿಕೆ ಚುಚ್ಚು ಮದ್ದು ನೀಡಿ ಹಿಡಿದು ಬಲೆಯನ್ನು ತೆರವುಗೊಳಿಸಿದ್ದನ್ನು ಸ್ಮರಿಸಬಹುದು.
ಇದೀಗ ಕಬಿನಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿದ್ದು, ನೀರಿನಲ್ಲಿರುವ ಒಣಗಿದ ಮರದ ಕೊಂಬೆಗಳಿಗೆ ಅಲ್ಲಲ್ಲಿ ಮೀನಿನ ಬಲೆ ಸಿಲುಕಿದ್ದನ್ನು ಗಮನಿಸಿದ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದರವರು ವನ್ಯಪ್ರಾಣಿಗಳಿಗೆ ತೊಂದರೆಯಾಗಬಾರದೆಂದು ಬೋಟ್ ಮೂಲಕ ತೆರಳಿ ಮರಗಳಲ್ಲಿ ಸಿಲುಕಿರುವ ಬಲೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿಕಾರಿ ಮಧು ನೇತೃತ್ವದಲ್ಲಿ ಮಾಸ್ತಿಗುಡಿ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿಗಳು ಇಲಾಖೆ ಬೋಟಿನ ಸಹಾಯದಿಂದ ಕಬಿನಿ ಹಿನ್ನೀರಿನ ಉದ್ಬೂರು ಎ.ಪಿ.ಸಿ.ಯಿಂದ ಮಾಸ್ತಿಗುಡಿವರೆಗಿನ ಸುಮಾರು ೮ಕಿ.ಮೀ.ವರೆಗೆ ಒಣ ಮರಗಳಿಗೆ ಸಿಕ್ಕಿಕೊಂಡ ಹಾಗೂ ನದಿಯ ದಡದಲ್ಲಿ ಬಿದ್ದ ಮೀನಿನ ಬಲೆಗಳನ್ನು ಕಾರ್ಯಾಚರಣೆ ನಡೆಸಿ ತೆರುವುಗೊಳಿಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ಮಾಹಿತಿ ನೀಡಿದರು. ಮೀನು ಬೇಟೆಗೆ ನಿಷೇಧ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ವನ್ಯಜೀವಿ ಕಾಯ್ದೆಯನ್ವಯ ಮೀನು ಬೇಟೆ ಮಾಡುವಂತಿಲ್ಲ. ಕೆಲವೊಮ್ಮೆ ಕೇರಳದಿಂದಲೂ ಹಾಗೂ ನದಿ ಅಂಚಿನ ಗ್ರಾಮಗಳವರು ನದಿಗೆ ಬಲೆ ಬಿಡುತ್ತಿದ್ದು, ಮಳೆ ಬಂದವೇಳೆ ಪ್ರವಾಹದ ನೀರಿನೊಂದಿಗೆ ಬಲೆಗಳೊ ಕೊಚ್ಚಿಕೊಂಡು ಹಿನ್ನೀರಿಗೆ ಬರುವ ಸಾಧ್ಯತೆ ಹೆಚ್ಚಿದ್ದು, ನೀರು ಕುಡಿಯಲು ಬರುವ ವನ್ಯಪ್ರಾಣಿಗಳಿಗೆ ಅಪಾಯವಾಗುವ ಸಂಭವವಿದ್ದು, ಹೀಗಾಗಿ ಜನರು ನದಿಗೆ ಬಲೆ ಬಿಡದಂತೆ ಡಿಸಿಎಫ್ ಮನವಿ ಮಾಡಿದ್ದಾರೆ.