Advertisement

ಕೋವಿಡ್‌ ತಪಾಸಣೆ ಚುರುಕಿಗೆ ಡಿಸಿ ಸೂಚನೆ

02:18 PM May 01, 2020 | Suhan S |

ಧಾರವಾಡ: ಜಿಲ್ಲೆಯ ಸುಮಾರು 1200 ಔಷಧ ಅಂಗಡಿಗಳಲ್ಲಿ ಔಷಧಿ ಖರೀದಿಸುತ್ತಿರುವ ಗ್ರಾಹಕರ ಮಾಹಿತಿ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿ ಸಂಗ್ರಹವಾಗುತ್ತಿದೆ. ಈ ದತ್ತಾಂಶವನ್ನು ವಿಶ್ಲೇಷಣೆ ಮಾಡಿ, ತೀವ್ರ ಉಸಿರಾಟದ ತೊಂದರೆ ಹಾಗೂ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳಿರುವವರನ್ನು ಗುರುತಿಸಿ ಕೋವಿಡ್‌ ತಪಾಸಣೆಗೊಳಪಡಿಸುವ ಕಾರ್ಯ ಚುರುಕುಗೊಳಿಸಬೇಕು ಎಂದು ಡಿಸಿ ದೀಪಾ ಚೋಳನ್‌ ಸೂಚಿಸಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಕೆಮಿಸ್ಟ್‌ ಮತ್ತು ಡ್ರಗ್ಗಿಸ್ಟ್‌ ಗಳು ತಮ್ಮ ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಖರೀದಿಸಿರುವ ಔಷಧಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸುತ್ತಿದ್ದಾರೆ. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿ ಕ್ರೋಢೀಕರಣವಾಗುತ್ತಿದೆ. ಈ ಮಾಹಿತಿಯನ್ನು ಫಾರ್ಮಸಿ ಕಾಲೇಜುಗಳ ಪ್ರಾಧ್ಯಾಪಕರು, ಸಿಬ್ಬಂದಿ ನೆರವಿನೊಂದಿಗೆ ವಿಶ್ಲೇಷಣೆ ಮಾಡಿ, ಸಾಮಾನ್ಯ ಜ್ವರ ಮತ್ತು ಸಾಮಾನ್ಯ ನೆಗಡಿ ಹೊರತುಪಡಿಸಿ ತೀವ್ರ ಉಸಿರಾಟದ ತೊಂದರೆ ಹಾಗೂ ತೀವ್ರ ಜ್ವರ, ಶೀತ, ಕೆಮ್ಮು ಇದ್ದವರ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸಿ ಕೋವಿಡ್‌ ತಪಾಸಣೆಗೆ ಅವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಬೇಕು. ಹೋಂ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ತನುಜಾ ಮಾತನಾಡಿ, ಜಿಲ್ಲಾದ್ಯಂತ ಕ್ಯಾನ್ಸರ್‌, ಮಧುಮೇಹ, ಗರ್ಭಿಣಿ, ನವಜಾತ ಶಿಶುಗಳಂತಹ ದುರ್ಬಲ ಗುಂಪಿನ ಆರೋಗ್ಯ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರ ಮೂಲಕ ಸಂಗ್ರಹಿಸಲಾಗಿದೆ. ಈಗಾಗಲೇ ಜಿಲ್ಲೆಯ 3.98 ಲಕ್ಷ ಮನೆಗಳಿಗೆ ಭೇಟಿ ನೀಡಿ ಸುಮಾರು 16 ಲಕ್ಷ ಜನರ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್‌ ತಜ್ಞ ವೈದ್ಯ ಡಾ| ಲಕ್ಷ್ಮೀಕಾಂತ, ಡಿಎಚ್‌ಒ ಡಾ| ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ| ಸುಜಾತಾ ಹಸವೀಮಠ ಇದ್ದರು.

ಮೂಗು ಮತ್ತು ಗಂಟಲು ದ್ರವ ಪರೀಕ್ಷೆಗೆ ಒಳಪಡುವ ಎಲ್ಲ ಸಾರ್ವಜನಿಕರ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ, ಆಧಾರ ಸಂಖ್ಯೆ ಮತ್ತಿತರ ಮಾಹಿತಿಯನ್ನು ಆರ್‌ ಟಿಪಿಸಿಆರ್‌ ಮೊಬೈಲ್‌ ಆ್ಯಪ್‌ಗೆ ಅಳವಡಿಸಬೇಕು. ಇದಕ್ಕಾಗಿ ಅಧಿಕೃತ ವ್ಯಕ್ತಿಗಳನ್ನು ಎಲ್ಲ ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳಲ್ಲಿ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. -ಡಾ| ಬಿ.ಸಿ. ಸತೀಶ, ಜಿಪಂ ಸಿಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next