ಕಾರ್ಕಳ: ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಸಾಮಾನ್ಯ ಕುಟುಂಬದ ಓರ್ವ ಕೃಷಿಕ. ತನ್ನಲ್ಲಿರುವ ಅಲ್ಪ ಜಮೀನಿನಲ್ಲಿ ನೀರಿನ ಆಸರೆ ಇಲ್ಲ ಎಂದಾದಾಗ ದೂರುತ್ತ ಕುಳಿತುಕೊಳ್ಳದೆ ಹಗಲು ಕೂಲಿಕಾರನಾಗಿ ರಾತ್ರಿ ಛಲ ಬಿಡದೆ ಕುಟುಂಬ ಸದಸ್ಯರ ಜತೆಗೆ ನೀರಿಗಾಗಿ ಸುರಂಗ ತೋಡಿದಂತಹ ಅಪರೂಪದ ವ್ಯಕ್ತಿ. ಅವರು ಹಗಲು ಕೂಲಿಕಾರ ರಾತ್ರಿ ಛಲಗಾರ ಎಂದು ಸಚಿವ ವಿ. ಸುನಿಲ್‌ಕುಮಾರ್ ಹೇಳಿದರು.
ಕಾರ್ಕಳ ಮತ್ತು ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅವರಿಗೆ ನಡೆದ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಾಠಿ ಸಮುದಾಯಕ್ಕೆ ವ್ಯವಸ್ಥಿತ ಸಮುದಾಯ ಭವನಕ್ಕೆ ನಿವೇಶನಕ್ಕೆ ಜಾಗ ಗುರುತಿಸುವ ಕೆಲಸ ಆದಲ್ಲಿ ಅನುದಾನ ಒದಗಿಸಲಾಗುವುದು ಎಂದರು.
ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಮಹಾಲಿಂಗ ನಾಯ್ಕ… ಅವರಲ್ಲಿ ಪ್ರಶಸ್ತಿಯ ಯಾವ ಚಿಂತನೆಯೂ ಇದ್ದಿರಕಿಲ್ಲ. ಸತ್ಯದ ಸೇವೆಗಾಗಿ ದೊರೆತ ಫಲವಿದು ಎಂದರು. ಕಾರ್ಕಳ ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ…, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕ…, ಮುಂಬಯಿ ಉದ್ಯಮಿ ಅಜೆಕಾರು ಕುರ್ಪಾಡಿ ಸುಧಾಕರ ನಾಯ್ಕ… ಉಪಸ್ಥಿತರಿದ್ದರು.
ಕಾರ್ಕಳ ಮತ್ತು ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ… ದುರ್ಗ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಸುಗಂಧಿ, ಕೋಶಾಧಿಕಾರಿ ಕೆ.ಪಿ. ನಾಯ್ಕ…, ಸಂಘದ ಗೌರವಾಧ್ಯಕ್ಷ ಶೇಖರ್ ನಾಯ್ಕ… ಮುದ್ರಾಡಿ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ನಾಯ್ಕ… ಕಡ್ತಲ, ಸಂಘಟನ ಕಾರ್ಯದರ್ಶಿ ನಾಗೇಂದ್ರ ನಾಯ್ಕ…, ಪ್ರಮೀಳಾ, ಯುವ ವೇದಿಕೆ ಅಧ್ಯಕ್ಷ ಪವನ್ ನಾಯ್ಕ…, ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜಶ್ರೀ, ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ನಾಯ್ಕ…, ರಾಘವ ನಾಯ್ಕ… ಉಪಸ್ಥಿತರಿದ್ದರು. ಶೇಖರ್ ಕಡ್ತಲ ಸ್ವಾಗತಿಸಿ, ಸಂಘದ ಪ್ರ. ಕಾರ್ಯದರ್ಶಿ ಹರೀಶ್ ನಾಯ್ಕ… ವಂದಿಸಿದರು.
ಪದ್ಮಾಕರ ನಾಯ್ಕ… ಕಾರ್ಯಕ್ರಮ ನಿರೂಪಿಸಿದರು.
ಮೂದಲಿಕೆ ನೀರು ಕೊಡಿಸಿತು!
ಸಮ್ಮಾನ ಸ್ವೀಕರಿಸಿದ ಮಹಾಲಿಂಗ ನಾಯ್ಕ ಮಾತನಾಡಿ, ಹಗಲು-ರಾತ್ರಿ ನೀರಿಗಾಗಿ ಅಲ್ಲಲ್ಲಿ ಗುಹೆ ತೋಡುತ್ತಿದ್ದಾಗ ಕೆಲವರು ನನ್ನನ್ನು ನೋಡಿ ಅವನು ಅಲ್ಲಲ್ಲಿ ಎಷ್ಟು ಗುಂಡಿ ತೋಡುತ್ತಾನೆ. ಎಷ್ಟು ತೋಡಿದರೂ ಅಷ್ಟೇ ಎಂದು ಹೇಳುತ್ತಿದ್ದರು. ಅದೇ ಮೂದಲಿಕೆ ನನಗೆ ನೀರು ಕೊಡಿಸಿತು ಎಂದು ಮಾರ್ಮಿಕವಾಗಿ ಹೇಳಿದರು. ದೇವರು, ಹಿರಿಯರ ಆಶೀರ್ವಾದಿಂದ ತನ್ನ ಶ್ರಮಕ್ಕೆ ಫಲ ದೊರಕಿದೆ. ಜೀವನಕ್ಕೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಕೃಷಿಯೂ ಮುಖ್ಯ ನೀರನ್ನು ಹಿತಮಿತವಾಗಿ ಬಳಸಿ, ನೀರಿಂಗಿಸುವ ಕೆಲಸ ಮಾಡಬೇಕು ಎಂದರು.