Advertisement

ಡೇ-ನೈಟ್‌ ಟೆಸ್ಟ್‌ : ಮೊದಲ ದಿನ ಮೆರೆದ ಬೌಲರ್ ಮತ್ತು ಅಯ್ಯರ್‌

11:19 PM Mar 12, 2022 | Team Udayavani |

ಬೆಂಗಳೂರು: “ಪಿಂಕ್‌ ಬಾಲ್‌’ ಎನ್ನುವುದು ಬ್ಯಾಟರ್‌ಗಳನ್ನೆಲ್ಲ ಮಂಕಾಗುವಂತೆ ಮಾಡಿದೆ. ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶನಿವಾರ ಮೊದಲ್ಗೊಂಡ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಇವರ ಮೆರೆದಾಟದ ನಡುವೆ ಶ್ರೇಯಸ್‌ ಅಯ್ಯರ್‌ ಶತಕ ವಂಚಿತರಾದ ವಿದ್ಯಮಾನವೂ ಸಂಭವಿಸಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 252 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಶ್ರೀಲಂಕಾ 6 ವಿಕೆಟಿಗೆ 86 ಮಾಡಿ ದಿನದಾಟ ಮುಗಿಸಿದೆ. ಮೊದಲ ದಿನವೇ 16 ವಿಕೆಟ್‌ ಉರುಳಿದ್ದು, ಪಂದ್ಯ ಬಹಳ ಬೇಗನೇ ಮುಗಿಯುವ ಸೂಚನೆ ಲಭಿಸಿದೆ.

ಆಪದ್ಬಾಂಧವ ಅಯ್ಯರ್‌
ಬೌಲರ್‌ಗಳ ದಾಳಿಯ ನಡುವೆಯೂ ಶ್ರೇಯಸ್‌ ಅಯ್ಯರ್‌ 92 ರನ್‌ ಹೊಡೆದು ಆಧರಿಸಿ ನಿಂತ ಪರಿಣಾಮ ಭಾರತದ ಮೊತ್ತ 250ರ ಗಡಿ ದಾಟಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಅಯ್ಯರ್‌ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು. ಆದರೆ ಶತಕ ಕೈಕೊಟ್ಟಿತು. 92 ರನ್‌ ಮಾಡಿದ ವೇಳೆ ಸ್ಟಂಪ್ಡ್ ಆಗಿ ನಡೆದರು. ಅಲ್ಲಿಗೆ ಭಾರತದ ಇನ್ನಿಂಗ್ಸ್‌ ಕೂಡ ಕೊನೆಗೊಂಡಿತು. 98 ಎಸೆತಗಳ ಈ ಆಕರ್ಷಕ ಆಟದ ವೇಳೆ ಅಯ್ಯರ್‌ 10 ಫೋರ್‌, 4 ಸಿಕ್ಸರ್‌ ಸಿಡಿಸಿ ರಂಜಿಸಿದರು.

ಅಯ್ಯರ್‌ ಹೊರತುಪಡಿಸಿದರೆ ರಿಷಭ್‌ ಪಂತ್‌ ಆಟ ಗಮನಾರ್ಹ ಮಟ್ಟದಲ್ಲಿತ್ತು. 26 ಎಸೆತ ಎದುರಿಸಿದ ಪಂತ್‌ 39 ರನ್‌ ಹೊಡೆದರು (7 ಬೌಂಡರಿ), ಹನುಮ ವಿಹಾರಿ 31, ವಿರಾಟ್‌ ಕೊಹ್ಲಿ 23 ರನ್‌ ಮಾಡಿದರು.

ಮಾಯಾಂಕ್‌ ರನೌಟ್‌
ಮಾಯಾಂಕ್‌ ಅಗರ್ವಾಲ್‌ ನೋ ಬಾಲ್‌ ಒಂದಕ್ಕೆ ರನೌಟ್‌ ಆಗುವ ಮೂಲ ಈ ಪಂದ್ಯಕ್ಕೆ ವಿಲಕ್ಷಣ ಆರಂಭ ಸಿಕ್ಕಿತು. ವಿಶ್ವ ಫೆರ್ನಾಂಡೊ ಎಸೆತವೊಂದು ಅಗರ್ವಾಲ್‌ ಕಾಲಿಗೆ ಬಡಿದಾಗ ಬಲವಾದ ಲೆಗ್‌ ಬಿಫೋರ್‌ ಅಪೀಲ್‌ ಮಾಡಲಾಯಿತು. ಅಂಪಾಯರ್‌ ಅನಿಲ್‌ ಚೌಧರಿ ಇದಕ್ಕೆ ಸ್ಪಂದಿಸಲಿಲ್ಲ. ಆಗ ಚೆಂಡು ಕವರ್‌ ವಿಭಾಗದತ್ತ ಹೋದುದನ್ನು ಕಂಡ ಅಗರ್ವಾಲ್‌ ಓಡಲಾರಂಭಿಸಿದರು.

Advertisement

ಅಪಾಯವರಿತ ನಾಯಕ ರೋಹಿತ್‌ ಶರ್ಮ, ಅಗರ್ವಾಲ್‌ ಅವರನ್ನು ವಾಪಸ್‌ ಹೋಗುವಂತೆ ಸೂಚಿಸಿದರು. ಅವರು ಮರಳುವಷ್ಟರಲ್ಲಿ ಜಯವಿಕ್ರಮ ಚೆಂಡನ್ನೆಸೆದು ಕೀಪರ್‌ ಡಿಕ್ವೆಲ್ಲ ಕೈಗೆ ರವಾನಿಸಿದರು. ಅಗರ್ವಾಲ್‌ ರನೌಟಾದರು. ಆದರೆ, ಫೆರ್ನಾಂಡೊ ಅವರ ಆ ಎಸೆತ ನೋಬಾಲ್‌ ಆಗಿತ್ತು!

ಸ್ಪಿನ್ನರ್‌ಗಳ ಮೆರೆದಾಟ
ಶ್ರೀಲಂಕಾದ ತ್ರಿವಳಿ ಸ್ಪಿನ್‌ ದಾಳಿ ಆತಿಥೇಯರಿಗೆ ಘಾತಕವಾಗಿ ಪರಿಣಮಿಸಿತು. ಎಡಗೈ ಸ್ಪಿನ್ನರ್‌ಗಳಾದ ಲಸಿತ್‌ ಎಂಬುಲೆªàನಿಯ, ಪ್ರವೀಣ್‌ ಜಯವಿಕ್ರಮ ಮತ್ತು ಬಲಗೈ ಆಫ್‌ಸ್ಪಿನ್ನರ್‌ ಧನಂಜಯ ಡಿ ಸಿಲ್ವ ಸೇರಿಕೊಂಡು 8 ವಿಕೆಟ್‌ ಉಡಾಯಿಸಿದರು.

ಮೊದಲ ಅವಧಿಯಲ್ಲೇ 4 ವಿಕೆಟ್‌ ಕಳೆದುಕೊಂಡ ಭಾರತ ಸಂಕಟಕ್ಕೆ ಸಿಲುಕಿತ್ತು. ಅಗರ್ವಾಲ್‌ ಬೆನ್ನಲ್ಲೇ ರೋಹಿತ್‌ ಶರ್ಮ (15), ಹನುಮ ವಿಹಾರಿ ಮತ್ತು ವಿರಾಟ್‌ ಕೊಹ್ಲಿ ಆಟ ಮುಗಿಸಿದ್ದರು.

ಮೊಹಾಲಿ ಪಂದ್ಯದ ಹೀರೋ ರವೀಂದ್ರ ಜಡೇಜ ಗಳಿಕೆ ಕೇವಲ 4 ರನ್‌. ಅಶ್ವಿ‌ನ್‌ 13, ಅಕ್ಷರ್‌ ಪಟೇಲ್‌ 9 ರನ್‌ ಮಾಡಿ ನಿರ್ಗಮಿಸಿದರು. ಆದರೂ ಇವರೆಲ್ಲರ ಅಲ್ಪ ಬೆಂಬಲ ಪಡೆದ ಶ್ರೇಯಸ್‌ ಅಯ್ಯರ್‌ ಇನ್ನಿಂಗ್ಸ್‌ ಕಟ್ಟಿದ ರೀತಿ ಅದ್ಭುತವಾಗಿತ್ತು. ಅಯ್ಯರ್‌ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದಿದ್ದರು ಎಂಬುದನ್ನು ಮರೆಯುವಂತಿಲ್ಲ!

ವೇಗಿಗಳ ದರ್ಬಾರು
ಲಂಕಾ ಸರದಿಯಲ್ಲಿ ಸ್ಪಿನ್ನರ್ ಘಾತಕವಾಗಿ ಎರಗಿದರೆ, ಭಾರತದ ಕಡೆಯಿಂದ ವೇಗಿಗಳು ಮಿಂಚಿನ ದಾಳಿ ಸಂಘಟಿಸಿದರು. ಬುಮ್ರಾ 3, ಶಮಿ 2 ವಿಕೆಟ್‌ ಉಡಾಯಿಸಿದರು. ಒಂದು ವಿಕೆಟ್‌ ಅಕ್ಷರ್‌ ಪಟೇಲ್‌ ಪಾಲಾಯಿತು. 50 ರನ್‌ ಆಗುವಷ್ಟರಲ್ಲಿ ಲಂಕೆಯ ಅರ್ಧ ಇನ್ನಿಂಗ್ಸ್‌ ಮುಗಿದಿತ್ತು.

ಅನುಭವಿ ಬ್ಯಾಟರ್‌ ಏಂಜೆಲೊ ಮ್ಯಾಥ್ಯೂಸ್‌ (43) ಹೋರಾಟದ ಸೂಚನೆ ನೀಡಿದರೂ ದಿನದಾಟದ ಕೊನೆಯಲ್ಲಿ ಬುಮ್ರಾ ಬುಟ್ಟಿಗೆ ಬಿದ್ದರು.

ಸಂಕ್ಷಿಪ್ತ ಸ್ಕೋರ್‌
ಭಾರತ-252 (ಅಯ್ಯರ್‌ 92, ಪಂತ್‌ 39, ವಿಹಾರಿ 31, ಕೊಹ್ಲಿ 23, ರೋಹಿತ್‌ 15, ಜಯವಿಕ್ರಮ 81ಕ್ಕೆ 3, ಎಂಬುಲೆªàನಿಯ 94ಕ್ಕೆ 3, ಧನಂಜಯ 32ಕ್ಕೆ 2). ಶ್ರೀಲಂಕಾ-6 ವಿಕೆಟಿಗೆ 86 (ಮ್ಯಾಥ್ಯೂಸ್‌ 43, ಡಿಕ್ವೆಲ್ಲ ಬ್ಯಾಟಿಂಗ್‌ 13, ಧನಂಜಯ 10, ಬುಮ್ರಾ 15ಕ್ಕೆ 3, ಶಮಿ 18ಕ್ಕೆ 2, ಅಕ್ಷರ್‌ 21ಕ್ಕೆ 1).

 

Advertisement

Udayavani is now on Telegram. Click here to join our channel and stay updated with the latest news.

Next