ಪ್ರೀತಿ… ಎಂಥ ಕಠೋರನ ಮನಸ್ಸನ್ನೂ ಶಾಂತಗೊಳಿಸುವ ಜಗತ್ತಿನ ಅದ್ಭುತ ಸೃಷ್ಟಿ. ಪ್ರೀತಿಯಿಂದ ಯಾವುದನ್ನಾದರೂ ಪ್ರೀತಿಸಿ, ಯಾರನ್ನಾದರೂ ಪ್ರೀತಿಸಿ, ಪ್ರೀತಿಸುತ್ತಲೇ, ಪ್ರೀತಿಯೆಂದರೆ ಪಡೆದುಕೊಳ್ಳಲೇ ಬೇಕೆಂಬುದಲ್ಲ. ಪ್ರೀತಿಯೆಂದರೆ ಇನ್ನೊಬ್ಬರಿಗಾಗಿ ಇರುವುದು, ನಮ್ಮವವರಿಗಾಗಿ ಇರುವುದು.
ಪ್ರೀತಿಯ ಬಗ್ಗೆ ಹೇಳುತ್ತಲೇ, ಜಗತ್ತನ್ನೇ ಪ್ರೀತಿಯಿಂದ ಗೆದ್ದ ಸಾಧಕರು ನೆನಪಾಗುತ್ತಾರೆ, ಪ್ರೀತಿಗಾಗಿಯೇ ಮಡಿದವರ ನೆನಪಾಗುತ್ತದೆ, ಪ್ರೀತಿಸುತ್ತಲೇ ಅಳಿದವರು ನೆನಪಾಗುತ್ತಾರೆ, ಪ್ರೀತಿಯ ಸಾಮ್ರಾಜ್ಯ ಕಟ್ಟಿದವರ ನೆನಪಾಗುತ್ತಾರೆ, ಮನೆ ಕಟ್ಟಿದವರು ನೆನಪಾಗುತ್ತಾರೆ, ಪ್ರೀತಿಗಾಗಿಯೇ ಮನೆ ಬಿಟ್ಟು ಹಠ ತೀರಿಸಿದವರು ನೆನಪಾಗುತ್ತಾರೆ. ಪ್ರೀತಿಯೆಂದರೆ ಎಷ್ಟೊಂದು ನೆನಪು..!
ಗಡಿಯಾಚೆಗಿನ ಪ್ರೇಮ ಕಥೆಯಿದು. ಇಂದಿನ ಕಾಲದಲ್ಲಿ ಬರಿವೊಂದು ಮೆಸೇಜ್ ಗೆ ಪ್ರತಿಕ್ರಿಯೆ ಬರದ್ದಿದ್ದಕ್ಕೆ, ಸಣ್ಣ ಪುಟ್ಟ, ವಿಷಯಕ್ಕೆ ದೊಡ್ಡ ರಾದ್ಧಾಂತವಾಗಿ ಮುಗಿಯುವ ಕೆಲ ಸಂಬಂಧಗಳ ನಡುವೆ ಈ ಪ್ರೇಮ ಕಥೆ ಎಂಥ ಮನಸ್ಸನ್ನೂ ತಟ್ಟುತ್ತದೆ.
ದಾವೂದ್ ಸಿದ್ದೀಕಿಯ ಜೀವನದಲ್ಲಿ ಖುಷಿಯ ಕ್ಷಣಗಳು ಜಾರಿಯಿದ್ದ ದಿನಗಳು ಅವು. ಸಂಬಂಧದಲ್ಲೇ ಚೆಂದದವಳಾಗಿದ್ದ ಹುಡುಗಿ ಸನಾ ಮುಸ್ತಾಕ್ ಳೊಂದಿಗಿನ ಕಣ್ಣ ನೋಟದಲ್ಲೇ ಪರಸ್ಪರ ಭಾವನೆಗಳು ಬದಲಾಗಿ ಸ್ನೇಹ ಬಂಧ ದಾಟಿ ಪ್ರೀತಿಯ ಮೋಹಕ್ಕೆ ತಿರುಗಿತ್ತು. ಫೋನಿನಲ್ಲಿ ಮಾತು, ಮಾತಿನಲ್ಲೇ ಕಳೆದು ಹೋಗುವ ಹಗಲು – ರಾತ್ರಿ, ನಿದ್ದೆಯಲ್ಲೂ ಸನಾಳ ಮುಖ ಕಾಡಿ ಕಚಗುಳಿಯಿಡುವ ದಿನಗಳಲ್ಲಿ ದಾವೂದ್ ನಲ್ಲಿದ್ದ ಖುಷಿ ಅಕ್ಷರದಲ್ಲಿ ಅನುಭವಕ್ಕೆ ಸಿಗದು.
ಸಂಭ್ರಮದಲ್ಲಿ ಮಡುಗಟ್ಟಿದ ದುಃಖ..
ಅದು ದಾವೂದ್ ಮನೆಯಲ್ಲಿ ಸಂಭ್ರಮದ ದಿನವಾಗಿತ್ತು. ಬಿರಿಯಾನಿಯೂಟದ ಜತೆ ಬಂದ ನೆಂಟರೆಲ್ಲ ಹರಟೆಯೊಂದಿಗೆ ಕೂತು ಕಳೆಯುವ ದಿನ ಅದು. ದಾವೂದ್ ನ ಮನಸ್ಸು ಕದ್ದ , ಅವರ ಅಂಕಲ್ ಮಗಳು ಸನಾಳು ಕೂಡ ದಾವೂದ್ ಮನೆಗೆ ಬಂದು ಮನಕ್ಕೆ ಮತ್ತಷ್ಟು ಹತ್ತಿರವಾಗಿದ್ದಳು. ದಾವೂದ್ ಅತ್ತ ಇತ್ತ ಹೋಗುತ್ತಾ, ಸಂಜೆಯೂಟಕ್ಕೆ ಸಿದ್ದತೆ ನಡೆಸುತ್ತಾ ಇದ್ದರು. ಅದೇ ಸಂದರ್ಭದಲ್ಲಿ ದಾವೂದ್ ರ ಅಪ್ಪನ ಮನೆಯ ಅಂಗಳದಲ್ಲಿದ್ದ ದೊಡ್ಡ ಕಬ್ಬಿಣದ ರಾಡ್ ನ್ನು ಮನೆಯ ಮೇಲ್ಛಾವಣಿಗೆ ಹಾಕಲು ಸೂಚನೆ ನೀಡುತ್ತಾರೆ. ಗಡಿ ಬಿಡಿಯಲ್ಲಿದ್ದ ದಾವೂದ್ ಅಪ್ಪನ ಮಾತಿಗೆ ಬೆಲೆಕೊಟ್ಟು, ದೊಡ್ಡ ರಾಡ್ ನ್ನು ಇಟ್ಟುಕೊಂಡು, ಮನೆಯ ಮೇಲೆ ಹೋಗುತ್ತಾರೆ.
ದಾವೂದ್ ತನ್ನ ಕೈಯಲ್ಲಿ ಹಿಡಿದ ಜೀವನದ ಕೊನೆಯ ಸಾಮಾಗ್ರಿಯೇ ಈ ರಾಡ್ .! ರಾಡ್ ಹಿಡಿದುಕೊಂಡು ಹೋಗುವ ದಾವೂದ್ ನಿಂದ ರಾಡ್ ಅಲ್ಲೇಯಿದ್ದ ಹೈ ಟೆನ್ಷನ್ ವೈಯರ್ ಗೆ ತಾಗುತ್ತದೆ. ವಿದ್ಯುತ್ ರಭಸಕ್ಕೆ ದಾವೂದ್ ಅಲ್ಲೇ ಕುಸಿದು, ಮೈ ಕೈಗೆ ಬೆಂಕಿ ಹತ್ತಿಕೊಳ್ಳುತ್ತದೆ. ದಾವೂದ್ ಕಿರುಚಾಟಕ್ಕೆ ಓಡಿ ಬರುವ ಮನೆಯವರು ಕೂಡಲೇ ಬೆಂಕಿಯಿಂದ ಒದ್ದಾಡುತ್ತಿದ್ದ ದಾವೂದ್ ಮೈಗೆ ಮರಳು ಹಾಕಿ, ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.
ಭರವಸೆ ತುಂಬದ ವೈದ್ಯರ ಮಾತು :
ದಾವೂದ್ ರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸತತ ಎಂಟು ಗಂಟೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಟ್ರೀಟ್ ಮೆಂಟ್ ನಡೆಯುತ್ತದೆ. ವೈದ್ಯರು ದಾವೂದ್ ರನ್ನು ಉಳಿಸಲು ಒಂದು ಕಠೋರ ನಿರ್ಧಾರವನ್ನು ಹೇಳುತ್ತಾರೆ. ಅದುವೇ ದಾವುದ್ ರ ಎರಡು ಕೈ ಹಾಗೂ ಒಂದು ಕಾಲನ್ನು ಕತ್ತರಿಸುವುದು.! ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ದಾವೂದ್ ರ ಎರಡು ಕೈ ಹಾಗೂ ಒಂದು ಕಾಲನ್ನು ಕತ್ತರಿಸಿ ಬದುಕಿಗೊಂದು ಹೊಸ ಕರಾಳ ಜೀವವನ್ನು ನೀಡುತ್ತಾರೆ ವೈದ್ಯರು. ದಾವೂದ್ ಬದುಕುತ್ತಾರೆ ಆದರೆ ನಡೆಯಲ್ಲ, ಎದ್ದು ತನ್ನ ಕಾಲಿನ ಮೇಲೆ ನಿಲ್ಲಲು ಅವರ ಬಳಿ ಇರುವುದು ಒಂದೇ ಕಾಲು.
ಪ್ರೀತಿಯಿಂದ ಪ್ರೀತಿಸಿದವನನ್ನು ಪಡೆದ ಸನಾ! :
ದಾವೂದ್ ರ ಅಪಘಾತವನ್ನು ತಿಳಿದ ಸನಾ ಕೂಡಲೇ ಆಸ್ಪತ್ರೆಗೆ ಹೋಗುತ್ತಾರೆ. ಯಾರಿಗೂ ತಿಳಿಯದ ಹಾಗೆ ಆಸ್ಪತ್ರೆಗೆ ಹೋಗಿ ದಾವೂದ್ ಬ್ಯಾಂಡೇಜ್ ಹಾಕಿ ಇಡೀ ಮೈಯನ್ನು ನೋಡಿ ಅಳುತ್ತಾರೆ, ಮರುಕ್ಷಣವೇ ಆತ್ಮ ವಿಶ್ವಾಸದಿಂದ ದಾವೂದ್ ರಲ್ಲಿ ಸ್ಪೂರ್ತಿ ತುಂಬಿ ತಾನಿದ್ದೇನೆ ಎನ್ನುತ್ತಾರೆ. 40 ದಿನದ ಬಳಿಕ ವೈದ್ಯರು ದಾವೂದ್ ಇನ್ನು ನೋವು ಸಹಿಸಿಕೊಂಡು ಬದುಕುವುದು ಕಷ್ಟ ಎನ್ನುತ್ತಾರೆ. ವೈದ್ಯರ ಮಾತನ್ನು ಕೇಳಿ ಕೋಪಕೊಂಡ ಸನಾ ವೈದ್ಯರೊಂದಿಗೆ ವಾದಕ್ಕಿಳಿದು, ದೇವರಲ್ಲಿ ದಾವೂದ್ ರನ್ನು ಉಳಿಸಲು ಪ್ರಾರ್ಥಿಸುತ್ತಾಳೆ.
ದಾವೂದ್ ಸ್ಥಿತಿ ನೋಡಿ ಎಂಥವರಿಗೂ ಮರುಕ ಹುಟ್ಟ ಬಹುದು. ಮದುವೆ ಬಿಡಿ, ಅವರ ಹತ್ತಿರ ಹೋಗಿ ಒಂದು ಕ್ಷಣ ಮಾತು ಆಡೋಕ್ಕೂ ಮಕ್ಕಳಲ್ಲಿ ಭೀತಿ ಹುಟ್ಟುತ್ತದೆ. ಅಂಥ ಪರಿಸ್ಥಿತಿಯಲ್ಲಿ ದಾವೂದ್ ಇರುತ್ತಾರೆ. ಇದೇ ಸಂದರ್ಭದಲ್ಲಿ ಸನಾ ದಾವೂದ್ ಗಾಗಿ ತನ್ನ ಮನೆಯನ್ನೇ ಬಿಟ್ಟು ಬರಲು ಸಿದ್ದರಾಗುತ್ತಾರೆ.
ಸನಾ ಮನೆಯವರ ಬಳಿ ತಾನು ದಾವೂದ್ ರನ್ನು ಮದುವೆಯಾಗುತ್ತೇನೆ , ಅವರನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗಲ್ಲ ಎಂದಾಗ, ಮಾತಿನಲ್ಲಿ ಅಪ್ಪ ಬುದ್ದಿ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಸನಾಳ ಬದುಕು ದಾವೂದ್ ರ ಜತೆ ಇದ್ದಾಗ ಸನಾ ಅಪ್ಪನ ಮಾತನ್ನು ಕೇಳಲು ತಯಾರಿರುವುದಿಲ್ಲ. ಮನೆಯೊಳಗಿನ ಮಾತುಗಳು ವಿಕೋಪಕ್ಕೆ ತಿರುಗಿ, ಸನಾ ಮನೆ ಬಿಟ್ಟು ದಾವೂದರ ಬಳಿ ಬರುತ್ತಾರೆ. ದಾವೂದ್ ನೋವಿನ ಸ್ಥಿತಿಯಲ್ಲಿ, ಸನಾಳನ್ನು ವಾಪಸ್ ಹೋಗಿ ಬೇರೆ ಮದುವೆ ಆಗಿ ಖುಷಿಯಾಗಿರು ಎನ್ನುತ್ತಾರೆ. ಸನಾ ಮಾತ್ರ ಹಠ ಹಿಡಿದು, ದಾವೂದ್ ರ ಜೊತೆನೇಯಿದ್ದು, ರಿಜಿಸ್ಟರ್ಡ್ ಮ್ಯಾರೇಜ್ ಆಗುತ್ತಾರೆ.
ಮಗುವಿನಂತೆ ಪ್ರೀತಿಸಿ, ಆರೈಸುವ ಹೆಂಡತಿ :
ಸನಾ ಮದುವೆ ಆಗಿ ದಾವೂದ್ ರನ್ನು ನೋಡಿಕೊಳ್ಳುವ ರೀತಿ ಯಾವ ಕಾಲಕ್ಕೂ, ಪ್ರೀತಿಯ ವಿಷಯದಲ್ಲಿ ಮಾದರಿಯಾಗಬಲ್ಲದು. ಪ್ರತಿ ನಿತ್ಯ ತನ್ನ ಗಂಡನ ಬಟ್ಟೆಯಿಂದಿಡಿದು, ಶೌಚ, ಸ್ವಚ್ಛ ಎಲ್ಲವನ್ನೂ ಸನಾ ಮಾಡುತ್ತಾರೆ. ದಾವೂದ್ ಗೆ ದೈಹಿಕ ದೌರ್ಬಲ್ಯಯಿದೆ ಎನ್ನುವ ಯಾವ ಭಾವನೆಯನ್ನು ಸನಾ ದಾವೂದ್ ರಲ್ಲಿ ಹುಟ್ಟಲು ಬಿಡುವುದಿಲ್ಲ. ದಾವೂದ್ ಸನಾ ಪರಸ್ಪರ ಪ್ರೀತಿಸುತ್ತಾರೆ. ಅದು ಪ್ರೀತಿಸುತ್ತಲೇ ಇರುವ ಪ್ರೀತಿ. ಪ್ರೀತಿಯಿಂದನೇ ಎಲ್ಲವನ್ನೂ ಕಾಣುವ ಪ್ರೀತಿ.
ದಾವೂದ್ – ಸನಾಳ ಪ್ರೇಮ್ ಕಹಾನಿ ಈಗ ಎಲ್ಲೆಡೆ ವೈರಲ್ ಆಗಿದೆ. ಬಹುತೇಕ, ಪತ್ರಿಕೆ, ಮಾಧ್ಯಮದಲ್ಲಿ ಇವರಿಬ್ಬರ ಪ್ರೀತಿಯೇ ಚರ್ಚಾ ವಿಷಯವಾಗಿದೆ. ಅಂದ ಹಾಗೆ ದಾವೂದ್ ಮತ್ತೆ ಮೊದಲಿನ ಹಾಗೆ ನಡೆಯಬಹುದೆನ್ನುವ ವಿಶ್ವಾಸ ಸನಾಳಲ್ಲಿ ಇದೆ. ಅದಕ್ಕಾಗಿ ಖರ್ಚಾಗುವ ಭಾರೀ ಮೊತ್ತವೂ ಇವರಿಬ್ಬರ ಪ್ರೀತಿಯ ಮುಂದೆ ಶೂನ್ಯವಾಗಿ ಕಂಡು ಎಲ್ಲೆಡೆಯಿಂದ ಸಂಗ್ರಹವಾಗುತ್ತಿದೆ.
-ಸುಹಾನ್ ಶೇಕ್