Advertisement

ಗಾಂಧೀಜಿಯವರಲ್ಲೂ ಇದ್ದವು ಅನೇಕ ವೈರುಧ್ಯ

03:20 PM Oct 03, 2018 | |

ದಾವಣಗೆರೆ: ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ ನಿವಾರಣೆಗೆ ಆಗಬೇಕೆಂಬ ಗುಣ ಹೊಂದಿದ್ದ ಮಹಾತ್ಮ ಗಾಂಧೀಜಿ ಅವರು ಅನೇಕ ವೈರುಧ್ಯಗಳನ್ನೂ ಹೊಂದಿದ್ದರು ಎಂದು ರಾಜ್ಯಸಭಾ ಸದಸ್ಯ ಡಾ| ಎಲ್‌. ಹನುಮಂತಯ್ಯ ತಿಳಿಸಿದ್ದಾರೆ.

Advertisement

ಎ.ವಿ. ಕಮಲಮ್ಮ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯನ್ನು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೈವಾರಾಧಕ, ಆಧ್ಯಾತ್ಮಿಕವಾದಿ ಹಿಂದೂ ಧರ್ಮ, ಪರಂಪರೆಯಲ್ಲಿ ಅಪಾರ ನಂಬಿಕೆ, ಭಕ್ತಿ ಇಟ್ಟುಕೊಂಡಿದ್ದವರು ಮಹಾತ್ಮ ಗಾಂಧೀಜಿ. ಹಾಗಾಗಿ ಅವರಿಗೆ ಹಿಂದೂ ಧರ್ಮದ ಒಳ್ಳೆಯ ಗುಣಗಳು ಕಂಡು ಬಂದಷ್ಟು ಅಸಮಾನತೆ ಗುಣ ಕಾಣಲಿಲ್ಲ ಎಂದರು. ಸನಾತನ ಧರ್ಮ ಪರಮ ಶ್ರೇಷ್ಠ, ಪವಿತ್ರ ಎಂದು ಭಾವಿಸಿದ್ದ ಅವರು ತಾರತಮ್ಯದ ಗುಣಗಳನ್ನು ಎಲ್ಲಿಯೂ ಪ್ರಸ್ತಾಪ ಮಾಡಲು ಹೋಗುವುದಿಲ್ಲ. ನಮ್ಮಲ್ಲಿದ್ದ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಈ ಗುಣಗಳು ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕೆ ಮೂಲ ಕಾರಣವಾದ ಸನಾತನ ಅಥವಾ ಹಿಂದೂ ಧರ್ಮ ಕಾರಣ ಅಂಥಾ ಎಲ್ಲಿಯೂ ಒಪ್ಪುವುದಿಲ್ಲ. ಹೀಗೆ ಅನೇಕ ವೈರುಧ್ಯಗಳು ಗಾಂಧೀಜಿಯವರಲ್ಲಿದ್ದವು ಎಂದು ತಿಳಿಸಿದರು.

ಗಾಂಧೀಜಿ ಅನೇಕ ರೀತಿಯ ವಿರುದ್ಧ ದಿಕ್ಕಿನಲ್ಲಿ ಚಿಂತನೆ ಮಾಡುವ ವ್ಯಕ್ತಿತ್ವ ಹೊಂದಿದ್ದರು. ಅವರು ನೇರವಾಗಿ ಯಾರಿಗೂ ಅರ್ಥ ಆಗದವರು. ಎಲ್ಲಾ ಮನುಷ್ಯರು ಮಾಡುವಂತೆ ತಪ್ಪು ಮಾಡಿ ಪಶ್ಚಾತ್ತಾಪ ಮಾಡಿಕೊಂಡ ವ್ಯಕ್ತಿತ್ವ ಅವರದಾಗಿತ್ತು. ಆದರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಎಲ್ಲಾ ಜನರನ್ನು ಸಂಘಟಿಸಿದ್ದು ಅವರ ಬಹುಮುಖ ವ್ಯಕ್ತಿತ್ವವೇ ಸರಿ ಎಂದು ಸ್ಮರಿಸಿದರು.

ಈ ಹಿಂದೆ ವರ್ಣಭೇದ ನೀತಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿತ್ತು. ಅದೇ ರೀತಿ ನಮ್ಮಲ್ಲೂ ಸ್ವಲ್ಪ ಹಿಂದೆ ಅದೇ ಪರಿಸ್ಥಿತಿ ಇತ್ತು. ಕೆಲವೇ ಬಸ್ಸುಗಳ ಸಂಪರ್ಕವಿದ್ದಾಗ ಅಸ್ಪೃಶ್ಯರು ಟಿಕೆಟ್‌ ಖರೀದಿಸಿ ಪ್ರಯಾಣ ಮಾಡಿದರೂ ಕೂಡ ಊರಿನ ಪಟೇಲ ಬಂದರೆ ಸೀಟು ಬಿಟ್ಟು ಕೊಡುವ ಮಟ್ಟಿಗೆ ಅಸ್ಪೃಶ್ಯತೆ ಆವರಿಸಿತ್ತು. ಅಂತಹ ಅನುಭವವನ್ನು ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮತ್ತು ಬಿಳಿಯರ ಮಧ್ಯೆ ಇದ್ದದ್ದು ಕಾಣುವ ಜೊತೆಗೆ ಅನುಭವಿಸಿದ್ದರು. ಹಾಗಾಗಿ ನಂತರ ಇಂತಹ ಅನಿಷ್ಠ ಪದ್ಧತಿ ವಿರುದ್ಧ ಹೋರಾಟಕ್ಕೆ ಮುಂದಾದರು ಎಂದರು.

Advertisement

ಕೈಗಾರಿಕಾ ಕ್ರಾಂತಿ ಆಗದಿದ್ದರೆ ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಅಸಾಧ್ಯ ಎಂದು ನೆಹರೂ ಅವರ ಅಭಿಪ್ರಾಯವಾಗಿತ್ತು. ಆದರೆ, ದೇಶದ ಪ್ರಗತಿಗೆ ಬೇಕಾಗಿರುವುದು ಗುಡಿ ಕೈಗಾರಿಕೆ ವಿನಹ ಬೃಹತ್‌ ಕೈಗಾರಿಕೆ ಅಲ್ಲ. ದೇಶ ಗ್ರಾಮ ಸ್ವರಾಜ್ಯ ಆಗಬೇಕು ಎಂಬುದು ಗಾಂಧೀವಾದವಾಗಿತ್ತು ಎಂದು ಹೇಳಿದರು. ಖಾದಿಬಟ್ಟೆ ತೊಡುವುದು, ಮದ್ಯ ಸೇವನೆ ಮಾಡದಿರುವುದು, ಅಸ್ಪೃಶ್ಯರ ಮನೆಯ ಹೆಣ್ಣು ಮಗುವನ್ನು ಪೋಷಣೆ ಮಾಡುವವರಿಗೆ ಮಾತ್ರ ಅಂದು ಕಾಂಗ್ರೆಸ್‌ನ ಸದಸ್ಯತ್ವ ನೀಡಲಾಗುವುದು ಎಂಬ ದೃಢ ನಿರ್ಧಾರವನ್ನ ಕೈಗೊಂಡಿದ್ದರು. ಆ ಮೂಲಕ ದೇಶದಲ್ಲಿ ನೈತಿಕವಾಗಿ ಭಯದ ಹತೋಟಿಯಲ್ಲಿ ಇಡುವಂತ ಶಕ್ತಿ ಹೊಂದಿದ್ದರು. ಆದರೆ, ಎಲ್ಲೂ ಕೂಡ ಅಹಿಂಸೆ ಮಾರ್ಗ ಬಿಡಲಿಲ್ಲ. ಅಂಬೇಡ್ಕರ್‌ ಅವರು ಸಾಕಷ್ಟು ಟೀಕೆ ಮಾಡಿದರೂ ಕೂಡ ಎಂದಿಗೂ ಅವರ ಮೇಲೆ ಗಾಂಧೀಜಿ ಕೋಪಗೊಳ್ಳಲಿಲ್ಲ . ಅಂತಹ ಶಾಂತಿಧೂತ ಅವರಾಗಿದ್ದರು ಎಂದರು.

ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಅನುಸರಿಸಿಕೊಂಡವರು ಗಾಂಧೀಜಿ. ಪ್ರತಿಯೊಬ್ಬರ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಅವರ ಆತ್ಮ ಚರಿತ್ರೆಗಿದೆ. ಹಾಗಾಗಿ ಎಲ್ಲರೂ ಕೂಡ ಅವರ ಆತ್ಮಚರಿತ್ರೆ ಓದಬೇಕು ಎಂದು ಮನವಿ ಮಾಡಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಡಾ| ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ಕಾರ್ಯದರ್ಶಿ ಎಲ್‌. ಎಚ್‌. ಅರುಣ್‌ಕುಮಾರ್‌, ನಾಗರತ್ನಮ್ಮ, ಬಸವರಾಜ್‌, ಕುಮಾರ್‌ ಉಪಸ್ಥಿತರಿದ್ದರು. ಮಯೂರಿ, ಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ. ಪಿ.ಎಸ್‌. ಶಿವಪ್ರಕಾಶ್‌ ಸ್ವಾಗತಿಸಿದರು. ಅನುರಾಧ ನಿರೂಪಿಸಿದರು. ಡಾ| ಕೆ. ಹನುಮಂತಪ್ಪ ವಂದಿಸಿದರು.

ತ್ಯಾಗ-ಬಲಿದಾನದ  ಪರಿಚಯ ಆಗಲಿ
ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ. ಇಂತಹ ಮಹಾನೀಯರ ಆಚರಣೆಯನ್ನು ಕೇವಲ ಚಾಕಲೇಟ್‌ ಹಂಚಿ ಸಂಭ್ರಮಿಸುವುದಲ್ಲ. ಇನ್ನೂ ಸರ್ಕಾರಿ ಹಾಗೂ ಐಟಿ, ಬಿಟಿ ಕ್ಷೇತ್ರದವರು ಒಂದು ದಿನದ ಪ್ರವಾಸ ಕೈಗೊಂಡು ರಜೆಯ ಮಜೆ ಅನುಭವಿಸುವುದಲ್ಲ. ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಅವಿರತ ಹೋರಾಟದ ಸ್ಮರಣೀಯ ಘಟನೆಗಳನ್ನು ಪರಿಚಯಿಸುವ ಕೆಲಸ ಇಂದಿನ ಶಿಕ್ಷಣದ್ದಾಗಬೇಕು.
. ಡಾ| ಎಲ್‌. ಹನುಮಂತಯ್ಯ,
ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next