Advertisement

ದಾವಣಗೆರೆ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದ್ದು ವಿವಿಧ ಮತಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳ “ರಾಜಕಾರಣ’ ಶುರುವಾಗಿದೆ. ತಾವು ಸ್ಪರ್ಧಾಕಾಂಕ್ಷಿ ಎಂಬುದನ್ನೇ ಬಿಂಬಿಸಲು ನಾನಾ ಕಸರತ್ತು ನಡೆಸಿದ್ದು ಭಾರೀ ಕುತೂಹಲ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭೆ ಕ್ಷೇತ್ರಗಳಿದ್ದು ಪ್ರಸ್ತುತ ಐವರು ಬಿಜೆಪಿ (ದಾವಣಗೆರೆ ಉತ್ತರ, ಚನ್ನಗಿರಿ, ಹೊನ್ನಾಳಿ, ಜಗಳೂರು, ಮಾಯ­ಕೊಂಡ-ಮೀಸಲು) ಶಾಸಕರು, ಇಬ್ಬರು ಕಾಂಗ್ರೆಸ್‌ (ದಾವಣಗೆರೆ ದಕ್ಷಿಣ ಹಾಗೂ ಹರಿಹರ) ಶಾಸಕರಿ­ದ್ದಾರೆ. ಈ ಬಾರಿ ಚುನಾವಣೆಯಲ್ಲಿ ಯಾವುದೇ ಶಾಸಕರ ಕ್ಷೇತ್ರ ಬದಲಾವಣೆ, ಪ್ರಮುಖರ ಪಕ್ಷ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿಲ್ಲ. ಆದರೆ ಕೆಲ ಕ್ಷೇತ್ರಗಳಲ್ಲಿ ಹೊಸಬರ ಕಣ ಪ್ರವೇಶ ಮಾಡುವ ಸಾಧ್ಯತೆಯಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಸಿಗುವುದಿಲ್ಲ, ಯಾರಿಗೆ ಟಿಕೆಟ್‌ ಖಚಿತ, ಯಾರು ಚುನಾವಣ ರಾಜಕೀಯದಿಂದ ನಿವೃತ್ತಿಯಾಗುತ್ತಾರೆ, ನಿವೃತ್ತಿಯಾದವರ ಸ್ಥಾನದಿಂದ ಸ್ಪರ್ಧಿಸಲು ಯಾರಿಗೆಲ್ಲ ಅವಕಾಶಗಳಿವೆ ಎಂಬುದರ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಹರಿಹರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಟ್ಟ ಇತಿಹಾಸವಿದ್ದು, ಈ ಎರಡು ಪಕ್ಷಗಳ ನಡುವೆಯೇ ಸ್ಪರ್ಧೆ ಮುಂದುವರಿಯುವ ಸಾಧ್ಯತೆಯಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಡಜನ್‌ ಸಮೀಪಿಸಿದೆ. ಬಿಜೆಪಿಗೆ ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಹಾಗೂ ಮಾಯಕೊಂಡ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಅದೇ ರೀತಿ ಕಾಂಗ್ರೆಸ್‌ನಲ್ಲಿ ಮಾಯಕೊಂಡ, ಹೊನ್ನಾಳಿ ಹಾಗೂ ಚನ್ನಗಿರಿ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವುದೇ ದೊಡ್ಡ ಸವಾಲಾಗಲಿದೆ.

ವಯಸ್ಸು-ವರ್ಚಸ್ಸು: ಬಿಜೆಪಿಯಲ್ಲಿ ವಯಸ್ಸಿನ ಕಾರಣದಿಂದ ಈ ಬಾರಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್‌.ಎ. ರವೀಂದ್ರನಾಥ್‌ ಅವರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಚರ್ಚೆ ನಡೆದರೆ, ಕಾಂಗ್ರೆಸ್‌ನಲ್ಲಿ ಹಿರಿಯ ರಾಜಕಾರಣಿ 92 ವರ್ಷದ ಶಾಮನೂರು ಶಿವಶಂಕರಪ್ಪ ಈ ಬಾರಿಯೂ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಲೆಕ್ಕಾಚಾರ ಇದೆ. ಈ ನಡುವೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆಗಿಳಿಯುತ್ತಾರೆಂಬ ವಿಚಾರ ಇನ್ನೂ ಜೀವಂತವಾಗಿದೆ.

ಕುತೂಹಲ ಕೆರಳಿಸುವ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಈ ಬಾರಿಯೂ ಮಾಜಿ ಸಚಿವ ಎಸ್‌.ಎಂ. ಮಲ್ಲಿಕಾರ್ಜುನ ಸ್ಪರ್ಧೆಗಿಳಿಯಲಿದ್ದು, ಅವರು ಸಹ ಈಗ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಇಲ್ಲವೇ ಪ್ರಧಾನ ಮಂತ್ರಿಯೇ ಸ್ಪರ್ಧಿಸಲಿ, ಸಮರ್ಥವಾಗಿ ಎದುರಿಸುತ್ತೇನೆ ಎನ್ನುವ ಮೂಲಕ ಚುನಾವಣಾ ರಾಜಕಾರಣಕ್ಕೆ ಚುರುಕು ಮೂಡಿಸಿದ್ದಾರೆ.

Advertisement

ಆಕಾಂಕ್ಷಿಗಳ ಚಟುವಟಿಕೆ ಜೋರು
ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳ ಪ್ರಚಾರ ಚಟುವಟಿಕೆ ಜೋರಾಗಿದೆ. ಆಕಾಂಕ್ಷಿಗಳು ತಮ್ಮ ಪರಿಚಯ, ಸಾಧನೆಗಳ ಪಟ್ಟಿ ಸಿದ್ಧಪಡಿಸಿ ಮುಖಂಡರಿಗೆ ತಲುಪಿಸುವ, ಮಾಧ್ಯಮಗಳ ಮೂಲಕ ತಾವೂ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಗ್ರಾಮಗಳಲ್ಲಿ “ತಮ್ಮ ಸೇವಾಕಾಂಕ್ಷಿ’ ಎಂಬ ಬರಹವಿರುವ ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಕರಪತ್ರ, ದಿನದರ್ಶಿಕೆ, ಡೈರಿ ಮುದ್ರಿಸಿ ಮನೆ ಮನೆಗೆ ಹಂಚುತ್ತಿದ್ದಾರೆ. ಊರಿನ ಜಾತ್ರೆ, ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ, ಊರ ಹಬ್ಬಗಳಿಗೆ ಗುಪ್ತ ದಾನದ ಹೆಸರಲ್ಲಿ ಆರ್ಥಿಕ ಸಹಾಯ ನೀಡಿ ಜನರನ್ನು ಸೆಳೆಯುವ ಪ್ರಯತ್ನಕ್ಕೂ ಇಳಿದಿದ್ದಾರೆ. ಜಿಲ್ಲೆಯ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಆಕಾಂಕ್ಷಿಗಳ ಆರ್ಭಟ ಜೋರಾಗಿದೆ. ಒಟ್ಟಾರೆ ಸದ್ಯ ಜಿಲ್ಲೆಯಲ್ಲಿ ವಿವಿಧ ಮತಕ್ಷೇತ್ರಗಳಲ್ಲಿ ಸ್ಪರ್ಧಾ ಆಕಾಂಕ್ಷಿಗಳದ್ದೇ “ಹವಾ’ ಹೆಚ್ಚಾಗಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next