ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆ ತಯಾರಿಯಲ್ಲಿ ಓಡಾಡುತ್ತಿದ್ದಾರೆ. ತನ್ನ ಮುದ್ದಿನ ಮಗಳ ಮದುವೆಯನ್ನು ಅದ್ಭುತವಾಗಿ ಮಾಡುವ ಕನಸು ಕಂಡಿರುವ ರವಿಚಂದ್ರನ್, ಅದಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದಾರೆ. ಅದು ಮದುವೆ ಆಹ್ವಾನ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪದವರೆಗೂ ರವಿಚಂದ್ರನ್ ಅವರ ಕನಸು ಎದ್ದು ಕಾಣಲಿದೆ. ಇತ್ತೀಚೆಗೆ ಮಾಧ್ಯಮದವರೊಂದಿಗೆ ತಮ್ಮ ಮಗಳ ಮದುವೆ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದು ಅವರ ಮಾತುಗಳಲ್ಲೇ …
ಗಾಜಿನ ಮಂಟಪ: ಮಗಳ ಮದುವೆ ಮಂಟಪ ಹೇಗಿರಬೇಕೆಂದು ಸಾಕಷ್ಟು ತಲೆಕೆಡಿಸಿಕೊಂಡಿದ್ದು ನಿಜ. ತುಂಬಾ ಡಿಸೈನ್‌ಗಳನ್ನು ಮಾಡಿದರೂ ಯಾವುದೂ ಫೈನಲ್ ಆಗಲಿಲ್ಲ. ಈಗ ಅಂತಿಮವಾಗಿ ಒಂದು ಡಿಸೈನ್ ಫೈನಲ್ ಆಗಿ, ಅದರ ಕೆಲಸ ನಡೆಯುತ್ತಿದೆ. ಗಾಜಿನ ಮಂಟಪವಿರುತ್ತದೆ. ಖಂಡಿತಾ ತುಂಬಾ ಭಿನ್ನವಾಗಿರುತ್ತದೆ. ನೋಡಿದ ಕೂಡಲೇ ಒಂದು ಹೊಸ ಫೀಲ್ ಸಿಗಲಿದೆ. ಹೂವಿನ ಅಲಂಕಾರ ಮಾಡುವುದಿಲ್ಲ. ಆಮಂತ್ರಣ ಪತ್ರಿಕೆಯಿಂದ, ಸ್ಟೇಜ್, ಕಾಸ್ಟೂಮ್ ಎಲ್ಲವೂ ನನ್ನ ಕಾನ್ಸೆಪ್ಟ್.
ಮದುವೆಗೆ ಬೆಲೆ ಕಟ್ಟಬೇಡಿ: ನನ್ನ ಮಗಳ ಮದುವೆ ಆಮಂತ್ರ ಪತ್ರಿಕೆಯಿಂದಲೇ ಕೆಲವರು ಅಷ್ಟು ಖರ್ಚಾಗಿದೆ, ಇಷ್ಟು ಖರ್ಚಾಗಿದೆ ಎಂದು ಬೆಲೆ ಕಟ್ಟಲಾರಂಭಿಸಿದ್ದಾರೆ. ದಯವಿಟ್ಟು, ಈ ಮದುವೆಗೆ ಬೆಲೆ ಕಟ್ಟಬೇಡಿ. ಅಷ್ಟು ಕೋಟಿ ಖರ್ಚಾಯಿತಂತೆ, ಇಷ್ಟು ಕೋಟಿ ಖರ್ಚಾಯಿತಂತೆ … ಎಂದು. ಅಷ್ಟೊಂದು ಖರ್ಚು ಮಾಡಲು ನನ್ನ ಬಳಿ ಕಾಸಿಲ್ಲ. ಹಾಗಂತ ಆ ಕೊರತೆಯನ್ನು ನನ್ನ ಸ್ನೇಹಿತರು, ಹಿತೈಷಿಗಳು ನೀಗಿಸಿದ್ದಾರೆ. ಕೆಲವು ಸ್ನೇಹಿತರ ಮನೆಗೆ ನಾನು ಮದುವೆ ಪತ್ರಿಕೆ ಹಂಚಲು ಹೋದಾಗ, ಅವರಾಗಿಯೇ ತಂದು ಒಂದಷ್ಟು ಹಣ ಕೊಟ್ಟಿದ್ದಾರೆ. “ನಾವು ಗಿಫ್ಟ್ ಕೊಡುವ ಬದಲು ನಿನ್ನ ಮಗಳಿಗೆ ಏನು ಬೇಕೋ ಅದನ್ನು ನೀನೇ ಕೊಡಿಸು’ ಎಂದು. ಅದು ನಾನು ಸಂಪಾದಿಸಿದ ಸ್ನೇಹ, ಪ್ರೀತಿ.
ಕಾಸು ಕೂಡಿಡಬೇಕಿತ್ತು ಅನಿಸಿತು …: ನಾನು ಇಷ್ಟು ದಿನ ಯಾವತ್ತೂ ಹಣದ ಬಗ್ಗೆ, ಹಣ ಕೂಡಿಡಬೇಕು, ಮುಂದೆ ನನ್ನ ಮಕ್ಕಳಿಗೆ, ಭವಿಷ್ಯಕ್ಕೆ ಬೇಕು ಎಂದು ಯೋಚಿಸಿರಲಿಲ್ಲ. ಆದರೆ, ಈಗ ಮಗಳ ಮದುವೆ ಸಮಯದಲ್ಲಿ “ನಾನು ಸ್ವಲ್ಪ ಹಣ ಉಳಿಸಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಮುಂದೆ ಹಣ ಉಳಿಸಬೇಕು’ ಎಂದು ತೀರ್ಮಾನಿಸಿದ್ದೇನೆ. ನನಗೆ ಬ್ಯಾಂಕ್‌ನಲ್ಲಿ ಸ್ವಲ್ಪ ದುಡ್ಡು ಜಾಸ್ತಿ ಇದೆ ಎಂದರೆ ಅದನ್ನು ಖರ್ಚು ಮಾಡುತ್ತಿದ್ದೆ. ಮಕ್ಕಳಿಗೆ ಯಾವತ್ತೂ ಯಾವ ಕೊರತೆಯೂ ಬಾರದಂತೆ ನೋಡಿಕೊಂಡಿದ್ದೇನೆ. ಅವರು ಯಾವುದನ್ನು ಕೇಳುವ ಮುನ್ನವೇ ತಂದುಕೊಡುತ್ತಿದ್ದೆ.
ವ್ಯವಹಾರವಿಲ್ಲದ ಮದುವೆ: ಸಾಮಾನ್ಯವಾಗಿ ಮದುವೆ ಎಂದರೆ ಅಲ್ಲಿ ವ್ಯವಹಾರ ಬರುತ್ತದೆ. ಕೊಟ್ಟು-ತೆಗೆದುಕೊಳ್ಳುವ ಮಾತು ಬರುತ್ತದೆ. ಆದರೆ, ಈ ಮದುವೆಯಲ್ಲಿ ನಾವು ವ್ಯವಹಾರ ಮಾತನಾಡಿಲ್ಲ. ನನ್ನ ಮಗಳ ಫೋಟೋ ನೋಡಿ ಅವರಿಗೆ ಇಷ್ಟವಾಗಿ, ಬಂದು ಹೆಣ್ಣು ಕೇಳಿದರು. ನಮಗೂ ಇಷ್ಟವಾಯಿತು. ಅವರ ಫ್ಯಾಮಿಲಿ ಚೆನ್ನಾಗಿತ್ತು. “ನಿಮ್ಮ ಮನೆ ಮಹಾಲಕ್ಷ್ಮೀನಾ ನಮ್ಮ ಮನೆಗೆ ಕಳುಹಿಸಿ ಕೊಡಿ’ ಎಂದಷ್ಟೇ ಹೇಳಿದರು. ತುಂಬಾ ಒಳ್ಳೆಯ ಕುಟುಂಬ ಅವರದು. ಅಳಿಯ ಅಜಯ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದು, ಪೀಣ್ಯಾ ಬಳಿ ಫ್ಯಾಕ್ಟರಿ ಇದೆ. ಜೊತೆಗೆ ಇನ್ನೊಂದಷ್ಟು ಬಿಝಿನೆಸ್ ಇದೆ. ಯಲಹಂಕ ಬಳಿ ವಿಲ್ಲಾವಿದೆ. ಗೋವಾಗೆ ಹೋಗಿಬರುವಾಗಲೆಲ್ಲಾ ಮಗಳ ಮನೆಗೆ ಹೋಗಬಹುದು ಅಥವಾ ಮಗಳ ಮನೆಗೆ ಹೋಗಬೇಕು ಎಂಬ ಕಾರಣಕ್ಕೆ ಗೋವಾಗೆ ಹೋಗಬಹುದು. ನನ್ನ ಅಳಿಯ ಇದುವರೆಗೆ ನನ್ನ ಸಿನಿಮಾಗಳನ್ನು ನೋಡಿಲ್ಲವಂತೆ. “ನೋಡದ್ದೇ ಒಳ್ಳೆಯದಾಯ್ತು ಬಿಡು’ ಅಂದೆ.
ಆನಂದಭಾಷ್ಪವೇ ಉಡುಗೊರೆ: ಅನೇಕರು ಮಗಳಿಗೆ ಏನು ಉಡುಗೊರೆ ಕೊಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಅದಕ್ಕೆ ನನ್ನ ಉತ್ತರ ಆನಂದಭಾಷ್ಪ. ಆನಂದಭಾಷ್ಪವೇ ನನ್ನ ಉಡುಗೊರೆ. ಇದುವರೆಗೆ ನಾನು ಫ್ಯಾಮಿಲಿ ಮುಂದೆ ಅತ್ತಿಲ್ಲ. ಎಷ್ಟೇ ನೋವಿದ್ದರೂ ಅದನ್ನು ನಾನೇ ನುಂಗಿದ್ದೇನೆಯೇ ಹೊರತು ಫ್ಯಾಮಿಲಿ ಮುಂದೆ ತೋರಿಸಿಕೊಂಡಿಲ್ಲ.
ಖುಷಿಯಿಂದ ಮದುವೆ ನಡೆಯಬೇಕು: ನನಗೆ ಒಂದು ಬೇಸರವಿದೆ, ಸೆಲೆಬ್ರೆಟಿಗಳ ಮದುವೆಗೆ ಹೋದರೆ ಅಲ್ಲಿ ಬೌನ್ಸರ್‌ಗಳೇ ತುಂಬಿರುತ್ತಾರೆ. ಅವರೇ ಕರೆದುಕೊಂಡು ಹೋಗಿ, ಮತ್ತೆ ತಂದು ಕಾರಿಗೆ ಕೂರಿಸಿ ಬಿಡುತ್ತಾರೆ.ಉಸಿರುಕಟ್ಟಿಕೊಂಡು ಹೋಗಿ ಬರಬೇಕು. ನಮ್ಮ ಜೊತೆ ಬಂದ ಮನೆಯವರು ಕೂಡಾ ಆ ನೂಕುನುಗ್ಗಲಿನಲ್ಲಿ ಎಲ್ಲೋ ಇರುತ್ತಾರೆ. ನಾನು ಸೆಲೆಬ್ರೆಟಿ ಎಂಬ ಕಾರಣಕ್ಕೆ ನಮ್ಮ ಮನೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಯಾಕೆ ತೊಂದರೆಯಾಗಬೇಕು. ನನಗೆ ಅದು ಇಷ್ಟವಿಲ್ಲ. ಬೌನ್ಸರ್‌ಗಳಿಲ್ಲದೇ, ಎಲ್ಲರೂ ಖುಷಿಯಾಗಿ ಬಂದು ಹೋಗಬೇಕು. ಸುಖಾಸುಮ್ಮನೆ ನೂಕುನುಗ್ಗಲು ಮಾಡೋದು, ಫೋಟೋಗೆ ನುಗ್ಗೊàದನ್ನು ಮಾಡದೇ ಮದುವೆಗೆ ಬರಬೇಕೆಂಬುದು ನನ್ನ ಆಸೆ. ಅದಕ್ಕೆ ಎಲ್ಲರೂ ಸಾಥ್ ಕೊಡುತ್ತಾರೆಂದು ಭಾವಿಸಿದ್ದೇನೆ.
ಹುಟ್ಟುಹಬ್ಬ ಆಚರಿಸುವುದಿಲ್ಲ: ಮಗಳ ಮದುವೆ ಆಗಷ್ಟೇ ಮುಗಿದಿರುತ್ತದೆ. ಮನೆ ತುಂಬಾ ನೆಂಟರಿರುತ್ತಾರೆ. ನನ್ನ ಮಗಳ ಮದುವೆ ಸಂಭ್ರಮಕ್ಕಿಂತ ನನ್ನ ಹುಟ್ಟುಹಬ್ಬ ದೊಡ್ಡದಲ್ಲ. ಹಾಗಾಗಿ, ಈ ಬಾರಿ ನಾನು ಹುಟ್ಟುಹಬ್ಬ (ಮೇ 30) ಆಚರಿಸುವುದಿಲ್ಲ. ಅಭಿಮಾನಿಗಳು ಮನೆ ಬಳಿ ಬರೋದು ಬೇಡವೆಂದು ಮನವಿ ಮಾಡುತ್ತೇನೆ.
ಎಲ್ಲರನ್ನು ಆಹ್ವಾನಿಸಿದ್ದೇನೆ: ಮದುವೆಗೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅದು ಅಮಿತಾಬ್ ಬಚ್ಚನ್‌ರಿಂದ ಹಿಡಿದು, ಚಿರಂಜೀವಿ, ರಜನಿ ಸೇರಿದಂತೆ ಎಲ್ಲರಿಗೂ ಆಮಂತ್ರಣ ಪತ್ರಿಕೆ ನೀಡಿದ್ದೇನೆ. ಅವರವರ ಸಮಯ, ಸಂದರ್ಭ ಹೇಗಿರುತ್ತೋ, ಯಾರ್ಯಾರು ಬರುತ್ತಾರೋ ಗೊತ್ತಿಲ್ಲ.