ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್ ಜೋಡಿಗಳು ಸಿಗುತ್ತವೆ. ಇತ್ತೀಚೆಗೆ ಈ ಸಾಲಿನಲ್ಲಿ ಕೇಳಿಬರುವ ಹೆಸರು “ಡಾರ್ಲಿಂಗ್’ ಕೃಷ್ಣ- ಮಿಲನಾ. ರೀಲ್ ಲೈಫ್ನಿಂದ ರಿಯಲ್ ಲೈಫ್ನಲ್ಲೂ ಜೋಡಿಯಾಗಿರುವ ಕೃಷ್ಣ-ಮಿಲನಾ ಈಗಾಗಲೇ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಈ ಜೋಡಿ ಮತ್ತೂಮ್ಮೆ ತೆರೆಮೇಲೆ ಬರಲು ಸಿದ್ಧವಾಗಿದೆ. ಅದು “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೂಲಕ.
ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ಕೃಷ್ಣ ಹೀರೋ. ಆದರೆ, ಈ ಚಿತ್ರದಲ್ಲಿ ಮಿಲನಾ ಕೂಡಾ ನಟಿಸಿದ್ದಾರೆ ಎಂಬ ವಿಚಾರವನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದ ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಮೂಲಕ ಬಿಟ್ಟುಕೊಟ್ಟಿದೆ.
ಈಗಾಗಲೇ ಬೃಂದಾ ಈ ಚಿತ್ರದ ನಾಯಕಿಯಾಗಿದ್ದಾರೆ. ಹಾಗಾದರೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರಾ ಅಥವಾ ಮಿಲನಾ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರಾ ಎಂಬ ಕುತೂಹಲ ಅನೇಕರಿಗಿದೆ. ಈ ಕುತೂಹಲಕ್ಕೆ ಜು.28ಕ್ಕೆ ಉತ್ತರ ಸಿಗಲಿದೆ.
ಮಿಲನಾ ಅವರ ಆಯ್ಕೆ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್, “ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ಬಹಳ ಕಾಂಪ್ಲೆಕ್ಸ್ ಆದ ಪಾತ್ರ ಅದು. ಮಿಲನಾ ನನ್ನ ನಿರೀಕ್ಷೆಗೂ ಮೀರಿ ಬಹಳ ಚೆನ್ನಾಗಿ ನಟಿಸಿದ್ದಾರೆ’ ಎನ್ನುತ್ತಾರೆ.
ಇದನ್ನೂ ಓದಿ:Team India:ರಾಹುಲ್, ಬುಮ್ರಾ, ಅಯ್ಯರ್, ಪ್ರಸಿಧ್, ಪಂತ್ ಫಿಟ್ನೆಸ್ ಅಪ್ಡೇಟ್ ಕೊಟ್ಟ ಬಿಸಿಸಿಐ
“ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್ ಸಿನಿಮಾಸ್ ಮತ್ತು ಕೌರವ ಪಿಕ್ಚರ್ ಹೌಸ್ ಮೂಲಕ ಶಶಾಂಕ್ ಹಾಗೂ ಬಿ.ಸಿ. ಪಾಟೀಲ್ ಜಂಟಿಯಾಗಿ ನಿರ್ಮಿಸಿದ್ದಾರೆ. ಇನ್ನು, ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶಶಾಂಕ್ ಅವರೇ ಬರೆದಿದ್ದಾರೆ. ಕೃಷ್ಣಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಮಿಕ್ಕಂತೆ ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ್, ಮಿಲನಾ ನಾಗರಾಜ್ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.