Advertisement

ರಾಜಧಾನಿಗೆ ಕರಾಳ ಭಾನುವಾರ

06:46 AM Jun 29, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಟ್ಟಾರೆ ದಾಖಲಾದ 1,267 ಕೋವಿಡ್‌ 19 ವೈರಸ್‌ ಸೋಂಕು ಪ್ರಕರಣಗಳಲ್ಲಿ ಸುಮಾರು ಶೇ. 62ರಷ್ಟು ಬೆಂಗಳೂರಿನಲ್ಲೇ ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕು ವಾರಾಂತ್ಯದ ರಜಾ-ಮಜಾಕ್ಕೆ ಸಂಪೂರ್ಣ ಬ್ರೇಕ್‌ ಹಾಕಿದೆ. ದಾಖಲೆಯ 783 ಮಂದಿಯಲ್ಲಿ ವೈರಸ್‌ ಇರುವುದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 3,321ಕ್ಕೆ ಏರಿಕೆಯಾಗಿದ್ದು, ನಗರದಲ್ಲಿ 2,692 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ. ಈ ಮಧ್ಯೆ ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 88ಕ್ಕೇ ಏರಿಕೆಯಾಗಿದೆ.

Advertisement

ಬಿಬಿಎಂಪಿ ಸದಸ್ಯರು ಪೊಲೀಸ್‌ ಇಲಾಖೆ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಗೂ ಸೋಂಕು ತಗುಲಿರುವುದು  ಮತ್ತಷ್ಟು ಆತಂಕ ಉಂಟುಮಾಡಿದೆ. ಸೋಂಕಿತರ ಪ್ರಮಾಣ ಮಾತ್ರವಲ್ಲದೇ ಮೃತರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಭಾನುವಾರ 55 ವರ್ಷದ ಪುರುಷ, 62 ವರ್ಷದ ಪುರುಷ, 65 ವರ್ಷದ ವೃದ್ಧ, 66 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಜೂ.1 ರಿಂದ ಜೂ. 28 ರವರೆಗೆ ಬರೋಬರೀ  78 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯಾದ್ಯಂತ ಗುಣಮುಖರಾಗುತ್ತಿರುವ ಪ್ರಮಾಣ ಶೇ. 50ರಷ್ಟಿದ್ದು, ಬೆಂಗಳೂರಿನಲ್ಲಿ ಶೇ. 15ರಷ್ಟಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ  ಪಡೆಯುತ್ತಿರುವವರ ಸಂಖ್ಯೆ 155 ಆಗಿದೆ.

ಇಎಸ್‌ಐ ಆಸ್ಪತ್ರೆಗೆ ಕೋವಿಡ್‌ 19 ಕಂಟಕ: ಕೋವಿಡ್‌ 19 ವಾರಿಯರ್ಸ್‌ಗಳಿಗೂ ಕೋವಿಡ್‌ 19 ಸೋಂಕು ತಗುಲುತ್ತಿದ್ದು, ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಕಂಟಕ ಎದುರಾಗಿದೆ. ಭಾನುವಾರ 30 ವರ್ಷದ ಶುಶ್ರೂಷಕಿಗೆ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿದ್ದ 20 ಮಂದಿಯನ್ನು  ಕ್ವಾರಂಟೈನ್‌ ಮಾಡಲಾಗಿದೆ. ಈವರೆಗೆ ಆಸ್ಪತ್ರೆಯ 10 ಸಿಬ್ಬಂದಿಗೆ ಪಾಸಿಟಿವ್‌ ವರದಿ ಬಂದಿದೆ. ಇನ್ನೂ 18 ಮಂದಿಯ ವರದಿ ಬರಬೇಕಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ  ತಿಳಿಸಿದ್ದಾರೆ.

ಮೃತದೇಹ ಹಸ್ತಾಂತರಿಸದ ಆಸ್ಪತ್ರೆ: ಸೋಂಕಿನಿಂದ ಮೃತಪಟ್ಟು 3 ದಿನವಾದರೂ ಸೋಂಕಿತನ ಮೃತ ದೇಹವನ್ನು ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಸಿಬ್ಬಂದಿ ಪಾಲಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಿಲ್ಲ. ಚಿಕಿತ್ಸೆ ವೆಚ್ಚ ನೀಡುವವರೆಗೂ ದೇಹ  ನೀಡುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಆರೋಪಿಸಿದ್ದಾರೆ. ವ್ಯಕ್ತಿಯೊಬ್ಬರು ಜೂ. 15ರಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜೂ. 17 ರಂದು ಸೋಂಕು ಇರುವುದು ದೃಢಪಟ್ಟಿದೆ. ಜೂ.  25ರಂದು ಮೃತಪಟ್ಟಿದ್ದು, ಆಸ್ಪತ್ರೆ 2.68 ಲಕ್ಷ ರೂ. ಬಿಲ್‌ ಮಾಡಿದೆ.

ಅದರಲ್ಲಿ 1.80 ಲಕ್ಷ ರೂ. ವಿಮಾ ಹಣ ಬಂದಿದೆ. ಉಳಿದ ಮೊತ್ತ ನೀಡಿದ ನಂತರವೇ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ  ಸಿಬ್ಬಂದಿ ತಿಳಿಸಿದ್ದಾರೆ. ಈ  ಮಧ್ಯೆ ಮೃತನ ಪತ್ನಿಗೂ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನನ್ನು ಕ್ವಾರಂಟೈನ್‌ ಮಾಡಲಾಗಿದೆ. ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಇದ್ದು, ಹಣ ನೀಡಿಲ್ಲ. ಈ ಸಂಬಂಧ ಮೃತನ ಮಗ  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

Advertisement

ಪಾಲಿಕೆ ಸದಸ್ಯೆಗೆ ಸೋಂಕು ದೃಢ: ಪಾಲಿಕೆಯ ಮತ್ತೂಬ್ಬ ಸದಸ್ಯರಿಗೆ ಸೋಂಕು ದೃಢಪಟ್ಟಿದೆ. ಜಗಜೀವನ್‌ ರಾಮ್‌ನಗರ ವಾರ್ಡ್‌ನ ಸದಸ್ಯೆ ಸೀಮಾ ಅಲ್ತಾಫ್ ಖಾನ್‌ ಅವರಿಗೆ ಸೋಂಕು ದೃಢಪಟ್ಟಿದ್ದು,ವಿಕ್ಟೋರಿಯಾ ಆಸ್ಪತ್ರೆಗೆ  ಸೇರಿಸಲಾಗಿದೆ.ಸೀಮಾ ಅಲ್ತಾಫ್ ಖಾನ್‌ ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ, ಪರೀಕ್ಷೆಗೆ ಒಳಪಟ್ಟಿದ್ದು, ಜಗಜೀವನ್‌ ರಾಮ್‌ನಗರದ ವಾರ್ಡ್‌ ಸದಸ್ಯೆ ಸೀಮಾ ಅಲ್ತಾಫ್ ಖಾನ್‌ ಹಾಗೂ ಅವರ ಪತಿ ಅಲ್ತಾಫ್  ಖಾನ್‌ ಸೇರಿದಂತೆ ಕುಟುಂಬದ 14 ಮಂದಿಗೆ ಸೋಂಕು ದೃಢವಾಗಿದೆ. ಸಂಪರ್ಕ ದಲ್ಲಿದ್ದವರನ್ನು ಪತ್ತೆ ಹಚ್ಚಿದ್ದು ಅವ ರನ್ನು ಕ್ವಾರಂಟೈನ್‌ ಮಾಡಲಾಗಿದೆ.

485 ಕಂಟೈನ್ಮೆಂಟ್‌ ವಲಯ: ಗರದಲ್ಲಿ ಕೋವಿಡ್‌ 19 ಸ್ಫೋಟಗೊಂಡಿದ್ದು, ಕಂಟೈನ್ಮೆಂಟ್‌ ವಲಯಗಳು ಹೆಚ್ಚಳವಾಗಿವೆ. 198 ವಾರ್ಡ್‌ಗಳಿಗೂ ಸೋಂಕು ಹರಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜೂ. 20ರಂದು 437 ಕಂಟೈನ್ಮೆಂಟ್‌  ವಲಯಗಳಿದ್ದು, ಭಾನುವಾರದ ವೇಳೆಗೆ 485 ವಲಯ ಗುರುತಿಸಲಾಗಿದೆ. 65 ಸ್ಥಳ ಕಂಟೈನ್ಮೆಂಟ್‌ ಮುಕ್ತ ವಲಯವಾಗಿವೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಸೋಂಕಿತರು ಇರುವುದಾಗಿ  ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಡ್‌ ಖಾಲಿ ಇಲ್ಲ!: ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಭರ್ತಿಯಾ ಗಿದ್ದು, ಪಾಲಿಕೆ ಕ್ರೀಡಾಂಗಣ ಹಾಗೂ ಹಜ್‌ ಭವನದಲ್ಲಿ ವ್ಯವಸ್ಥೆ ಮಾಡುತ್ತಿದೆ. ಆದರೆ, ಕೋವಿಡ್‌ 19 ಪಾಸಿಟಿವ್‌ ವರದಿ ಬಂದ ವ್ಯಕ್ತಿಗಳನ್ನು  ಆಸ್ಪತ್ರೆಗೆ ಕರೆದೊಯ್ದು ಹೋಗಿ ಚಿಕಿತ್ಸೆ ನೀಡಬೇಕಾಗಿರುವುದು ಪಾಲಿಕೆ ಅಧಿಕಾರಿಗಳ ಜವಾಬ್ದಾರಿ. ಆದರೆ, ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇಲ್ಲ ಎಂದು ಹೇಳುತ್ತಾ ನಿರ್ಲಕ್ಷ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next