Advertisement
ಒಂದು ಸಣ್ಣ ಕಥೆಯನ್ನು ತಲ್ಲೀನತೆಯಿಂದ ಓದಿದಾಗ ಅದರಲ್ಲಿ ಸಂಭವಿಸುವ ಘಟನೆಗಳು ನಮ್ಮ ಮನಸ್ಸಿನಲ್ಲಿ ಒಂದು ಪುಟ್ಟ ಚಿತ್ರಲೋಕವನ್ನು ಸೃಷ್ಟಿಸುತ್ತವೆ. ಒಬ್ಬೊಬ್ಬರ ಮನಸ್ಸಿನೊಳಗೆ ಸೃಷ್ಟಿಯಾಗುವ ಲೋಕ ಒಂದೊಂದು ರೀತಿಯದ್ದಾಗಿರುತ್ತದೆ. ಈ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಂಗ ನಿರ್ದೇಶಕ ವಾಸುದೇವ ಗಂಗೇರ ಅವರು ತೇಜಸ್ವಿಯವರ ಸಣ್ಣಕಥೆ “ನಿಗೂಢ ವಿಶ್ವ’ದ ಒಂದು ಸನ್ನಿವೇಶಕ್ಕೆ ರಂಗ ರೂಪವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ನಾಟಕದಲ್ಲಿರುವಂತೆಯೇ ಪಾತ್ರಧಾರಿಗಳಿದ್ದಾರೆ.
ಹಿನ್ನೆಲೆ ಸಂಗೀತವೂ ಇವೆಲ್ಲಕ್ಕೆ ಪೂರಕವಾಗಿರುತ್ತದೆ. ಆದರೆ ಒಂದು ನಾಟಕಕ್ಕಿಂತ ಭಿನ್ನವಾಗಿ ಇಲ್ಲಿ ಪಾತ್ರಗಳ ಹಂಚಿಕೆಯಿಲ್ಲ. ಯಾರು ಯಾವ ಪಾತ್ರ ಬೇಕಾದರೂ ಆಗಬಹುದು. ಒಟ್ಟಿನಲ್ಲಿ ಕಥಾವಾಚನವೆಂಬ ಪ್ರವಾಹ ಹರಿಯುತ್ತಲೇ ಇರಬೇಕು. ಇದೊಂದು ರೀತಿಯ ಪರಿಣಾಮಕಾರಿ ಓದನ್ನು ಹೇಳಿಕೊಡುವ ವಿಧಾನ. ರಂಗದ ತುಂಬ ಲವಲವಿಕೆಯಿಂದ ಓಡಾಡಿದ ಶಿವಾನಂದ ಕೋಟೇಶ್ವರ, ಅಶೋಕ್ ತೆಕ್ಕಟ್ಟೆ, ಸಚಿನ್ ಅಂಕೋಲಾ, ರವಿ ಕಟೆರೆ, ಸಂದೇಶ ವಡೇರಹೋಬಳಿ, ಪ್ರಾರ್ಥನಾ, ಸ್ಮಿತಾ ಮತ್ತಿತರ ಕಲಾವಿದರು ಈ ಪ್ರಸ್ತುತಿಗೆ ಕಳೆಯಿತ್ತರು. ಕತ್ತಲ ಹಾಡು ಕಳೆದ ಐದಾರು ವರ್ಷಗಳಿಂದ ರಾಜ್ಯದಾದ್ಯಂತ ಗಾಯನ ಪ್ರಯೋಗದ ಮೂಲಕ ಹೆಸರಾದ ನಾದ ಮಣಿನಾಲ್ಕೂರು ಅವರು ನಡೆಸಿಕೊಟ್ಟ ಕಾರ್ಯಕ್ರಮ. ಎಲ್ಲರೂ ಬೆಳಕನ್ನೇ ಪ್ರೀತಿಸುತ್ತ ಬೆಳಕಿನಲ್ಲಿ ತಮ್ಮನ್ನು ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ದಿನಗಳಲ್ಲಿ ತಾನು ಕತ್ತಲಲ್ಲಿ ಕುಳಿತು ಹಾಡಬಯಸಿದ್ದಕ್ಕೆ ಕಾರಣವನ್ನು ಹೇಳುತ್ತ ನಾದ ಹೇಳಿದರು : ಬಣ್ಣ ಬಣ್ಣದ ಬೆಳಕು, ಕಿವಿಗಡಚಿಕ್ಕುವ ಶಬ್ದಗಳ ನಡುವೆ ನಮಗೆ ನಮ್ಮ ಒಳದನಿಯೇ ಮರೆತು ಹೋಗುವ ಭಯವಿದೆಯೆಂದೆನ್ನಿಸಿತು. ಇವೆಲ್ಲವುಗಳಿಂದ ದೂರ ಎಲ್ಲೋ ಏಕಾಂತದ ಕತ್ತಲ ಮೌನದಲ್ಲಿ ಧ್ಯಾನಸ್ಥಿತಿಯಲ್ಲಿ ಕುಳಿತು ಹಾಡಿ, ನನ್ನೊಂದಿಗೆ ನಾನು ಸಂವಾದ ನಡೆಸಬೇಕು ಅನ್ನಿಸಿತು. ಈ ಸಮಾಜದಲ್ಲಿ ನಡೆಯುವ ಅನ್ಯಾಯ, ಮೋಸ,ವಂಚನೆ, ಸ್ವಾರ್ಥಪೂರಿತ ರಾಜಕೀಯಿವೆಲ್ಲವುಗಳಿಂದ ದೂರವಾದ ಮತ್ತು ಭಿನ್ನವಾದ ಒಂದು ಹೊಸ ಲೋಕವನ್ನು ಕಟ್ಟಿಕೊಳ್ಳಬೇಕು ಅನ್ನಿಸಿತು. ನನ್ನ ಆಸೆಗೆ ಈ ನನ್ನ ದೇಸಿ ತಂಬೂರಿ ಬೆಂಬಲವನ್ನಿತ್ತಿತು. ನನ್ನೆಲ್ಲ ಹಾಡುಗಳನ್ನೂ ನನ್ನಂತೆಯೇ ನಿರ್ಲಕ್ಷ್ಯಕ್ಕೊಳಗಾದ ದೇಸಿ ಬದುಕಿನಿಂದ ಆಯ್ದುಕೊಳ್ಳಬೇಕು ಮತ್ತು ದಮನಕ್ಕೊಳಗಾದ ಜನಪದರ ನೋವುಗಳಿಗೆ ಧ್ವನಿಯಾಗಬೇಕೆಂದು ನಾನು ನಿರ್ಧರಿಸಿದೆ.
Related Articles
Advertisement
ಭಾಷೆಯಲ್ಲಿ ಹುದುಗಿದ ಲಿಂಗ ತಾರತಮ್ಯವನ್ನು ಎರಡೂ ಲಿಂಗಗಳನ್ನು ಬಳಸುವ ಮೂಲಕವೂ, ಧಾರ್ಮಿಕ ಅಸಮಾನತೆಯನ್ನು ವಿವಿಧ ಧರ್ಮಗಳಿಗೆ ಅನ್ವಯವಾಗುವ ಪದಗಳನ್ನು ಬಳಸುವ ಮೂಲಕವೂ ಸರಿಪಡಿಸಿದರು. ಅವರ ಧ್ವನಿಯಲ್ಲಿ ಮಿಳಿತವಾಗಿದ್ದ ಆರ್ತ ಮತ್ತು ಆದ್ರìಭಾವ ಕೇಳುಗರ ಹೃದಯಕ್ಕೆ ನಾಟುವಂತಿತ್ತು.ವೇದಿಕೆಯಲ್ಲಿ ಝಗಮಗಿಸುವ ವಿದ್ಯುದ್ದೀಪಗಳಿಲ್ಲದೆ ಮೇಣದ ಬತ್ತಿಯ ಮಿಣುಕು ಬೆಳಕಷ್ಟೇ ಇದ್ದದ್ದರಿಂದ ಅವರ ಮುಖಭಾವ ಹೇಗಿದೆಯೆಂಬುದನ್ನು ಕಾಣಲಾಗಲಿಲ್ಲ. ಪ್ರತಿಭಾನ್ವಿತ ಕಲಾವಿದರು ತಮ್ಮ ಸ್ವಯಂ ಪ್ರದರ್ಶನಕ್ಕೇ ಹೆಚ್ಚು ಪ್ರಾಧಾನ್ಯ ನೀಡುವ ಇಂದಿನ ದಿನಗಳಲ್ಲಿ ನಾದ ಮಣಿನಾಲ್ಕೂರು ಅವರು ನೀಡಿದ ಗಾಯನ ಕಾರ್ಯಕ್ರಮವು ಯಾವುದೋ ಲೋಕಕ್ಕೆ ಕೊಂಡೊಯ್ದು ಅತ್ಯಂತ ವಿಶಿಷ್ಟ ಅನುಭವ ನೀಡಿತು. ಕತ್ತಲ ಹಾಡು ಎಂಬ ಶೀರ್ಷಿಕೆಯನ್ನು ಹೊಂದಿದ್ದರೂ ಅದು ಶ್ರೋತೃಗಳನ್ನು ಬೆಳಕಿನತ್ತ ಒಯ್ಯುವ ಶಕ್ತಿಯನ್ನು ಹೊಂದಿತ್ತು.
ಪಾರ್ವತಿ ಜಿ.ಐತಾಳ್