Advertisement

ಮಾವಿನಕಟ್ಟೆಯ ಹೆದ್ದಾರಿ ತಿರುವಿಗೆ ಬೇಕು ತಡೆಬೇಲಿ

03:00 AM Jul 17, 2017 | Karthik A |

ಸುಳ್ಯ: ಜಾಲ್ಸುರು- ಸುಬ್ರಹ್ಮಣ್ಯ ಹೆದ್ದಾರಿಯ ಮಾವಿನಕಟ್ಟೆ ಬಳಿ ಅಪಾಯಕಾರಿ ತಿರುವು ಇದ್ದು ಅನಾಹುತ ತಡೆಗಾಗಿ ರಸ್ತೆಯಂಚಿನಲ್ಲಿ ಅಗತ್ಯ ತಡೆಬೇಲಿ ನಿರ್ಮಾಣವಾಗಬೇಕಾಗಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುವಾಗ ಮಾವಿನ ಕಟ್ಟೆಯಿಂದ ಅರ್ಧ ಕಿ.ಮೀ. ಮುಂದಕ್ಕೆ ಇಳಿಜಾರಿನಿಂದ ಕೂಡಿದ ಕಡಿದಾದ ತಿರುವುಗಳು ಎದುರಾಗುತ್ತವೆ. ಈ ಅಪಾಯಕಾರಿ ತಿರುವು ಮುಂದೆ ಹಾಗೂ ಹಿಂದಕ್ಕೆ ತಡೆಬೇಲಿ ಅಳವಡಿಸಿದ್ದರೂ ಅಪಾಯಕಾರಿ ತಿರುವು ಇರುವಲ್ಲಿ ತಡೆಬೇಲಿಯೇ ಅಳವಡಿಸಿಲ್ಲ.

Advertisement

ಒಂದೆಡೆ ಇಳಿಜಾರಾದ ಹೆದ್ದಾರಿ, ಮತ್ತೂಂದೆಡೆ ಅತೀ ದೊಡ್ಡ ತಿರುವು, ಎಡಭಾಗದಲ್ಲಿ ಮನೆಯೊಂದಕ್ಕೆ ತೆರಳುವ ರಸ್ತೆಯಿದ್ದು ಇದು ಅತ್ಯಂತ ಆಳವಾದ ಪ್ರದೇಶ. ಇಳಿಜಾರಿನಲ್ಲಿ ವೇಗವಾಗಿ ಆಗಮಿಸುವ ಘನವಾಹನಗಳು ಸೈಡ್‌ ಕೊಡುವ ನೆಪದಲ್ಲಿ ರಸ್ತೆಯ ಪಕ್ಕಕ್ಕೆ ಸರಿದರೆ ಅಪಾಯ ಖಂಡಿತ. ಈ ಭಾಗದಲ್ಲಿ ನೈಸರ್ಗಿಕ ಉಬ್ಬುಗಳಾಗಲಿ, ಮರಗಿಡಗಳಾಗಲಿ ಇಲ್ಲ. ಹಗಲಿನ ವೇಳೆಯೇ ಎಡಮಗ್ಗುಲಲ್ಲಿರುವ ಈ ಆಳ ಪ್ರದೇಶ ಪಕ್ಕನೆ ಅರಿವಿಗೆ ಬರುವುದಿಲ್ಲ. ಇನ್ನು ರಾತ್ರಿ ಹಾಗೂ ಜೋರು ಮಳೆಯ ಸಂದರ್ಭ ಗೋಚರವಾಗುವುದಿಲ್ಲ. ವಾಹನಗಳು ಸ್ವಲ್ಪ ಜಾರಿದರೂ ಆಳಭಾಗದಲ್ಲಿರುವ ತೋಟಕ್ಕೆ ಉರುಳಿ ಅನಾಹುತವಾಗುವುದು ಖಂಡಿತ.

ಯಾವುದೇ ಅಡೆತಡೆಯಿಲ್ಲ
ಹೆದ್ದಾರಿ ಡಾಮರು ಕಾಮಗಾರಿ ಕೈಗೊಂಡು ರಸ್ತೆ ಉತ್ತಮವಾಗಿದೆ. ಹೀಗಾಗಿ ವಾಹನಗಳು ಅತೀ ವೇಗವಾಗಿ ದಾವಿಸುತ್ತಿವೆ. ಈ ಇಳಿಜಾರು ಪ್ರದೇಶ ದಲ್ಲಿ ತಿರುವು -ಮುರುವಿನಿಂದ ಕೂಡಿದ್ದು ರಸ್ತೆಯಂಚಿನಲ್ಲಿ ಯಾವುದೇ ಅಡೆತಡೆಯಿಲ್ಲ. ವಾಹನ ಕೊಂಚ ಜಾರಿದರೆ ಪಕ್ಕದ ಆಳ ಪ್ರದೇಶಕ್ಕೆ ಉರುಳಲಿದೆ. ಸಂಬಂಧಪಟ್ಟವರು ಅಪಾಯಕ್ಕೆ ಮುನ್ನ ಅಗತ್ಯ ತಡೆಬೇಲಿ ನಿರ್ಮಿಸಲಿ ಎಂದು ಸ್ಥಳೀಯ ನಿವಾಸಿ ದುರ್ಗೇಶ್‌ ಪಾರೆಪ್ಪಾಡಿ ಅವರ ಆಗ್ರಹಿಸಿದ್ದಾರೆ.

ಕ್ರಮಕ್ಕೆ ಸೂಚಿಸುವೆ
ಇದು ರಾಜ್ಯ ಹೆದ್ದಾರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
– ಅಂಗಾರ, ಶಾಸಕರು, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next