Advertisement

ವೇಗ ಪಡೆದ ಬಾವಿಕೆರೆ ಅಣೆಕಟ್ಟು ನಿರ್ಮಾಣ ಕಾಮಗಾರಿ

01:40 AM Dec 12, 2018 | Karthik A |

ಕಾಸರಗೋಡು: ಪ್ರತಿ ವರ್ಷ ಮಾರ್ಚ್‌ ತಿಂಗಳಿಂದ ಜೂನ್‌ ತಿಂಗಳವರೆಗೆ ಉಪ್ಪು ನೀರು ಸೇವಿಸಬೇಕಾದ ಪರಿಸ್ಥಿತಿಯಿಂದ ಪಾರು ಮಾಡಲು ಯೋಜಿಸಿದ್ದ ಬಾವಿಕೆರೆ ಅಣೆಕಟ್ಟು ನಿರ್ಮಾಣ ಕಾಮಗಾರಿ ವೇಗದಲ್ಲಿ ನಡೆಯುತ್ತಿದ್ದು, ಜನರಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಕಾಸರಗೋಡು ನಗರಸಭೆ ಸಹಿತ ಕೆಲವು ಪಂಚಾಯತ್‌ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪಯಸ್ವಿನಿ ಹೊಳೆಗೆ ಬಾವಿಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಅಣೆಕಟ್ಟು ಯೋಜನೆ ನನೆಗುದಿಗೆ ಬಿದ್ದು ಹಲವು ವರ್ಷಗಳೇ ಸಂದರೂ, ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಬಾವಿಕೆರೆ ಅಣೆಕಟ್ಟು ಎರಡು ವರ್ಷಗಳಲ್ಲಿ ಪೂರ್ತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Advertisement

ಹಲವು ವರ್ಷಗಳ ಹಿಂದೆ ಬಾವಿಕೆರೆ ಅಣೆಕಟ್ಟು ನಿರ್ಮಿಸಲು ಯೋಜಿಸಲಾಗಿದ್ದರೂ, ಹಲವು ಕಾರಣಗಳಿಂದ ಕಾಮಗಾರಿ ಆರಂಭಗೊಂಡು ಹಲವು ಬಾರಿ ಮೊಟಕುಗೊಂಡಿತ್ತು. ಈ ಯೋಜನೆ ಫಲಕಾಣದಿದ್ದಾಗ ಸ್ಥಳೀಯರು ತೀವ್ರ ಪ್ರತಿಭಟನೆ, ಚಳವಳಿ ಕೂಡ ನಡೆಸಿದ್ದರು. ಇದೀಗ 30 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ.

1995ರಲ್ಲಿ ಯೋಜನೆ ಎಸ್ಟಿಮೇಟ್‌ ತಯಾರಿಸುವಾಗ ಕುಡಿಯುವ ನೀರಿಗೆ ಉಪ್ಪು ನೀರು ಸೇರುವುದನ್ನು ತಡೆಯಲು ಅಣೆಕಟ್ಟು ನಿರ್ಮಾಣ ಉದ್ದೇಶ ಹೊಂದಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿದ್ದರೂ ಇಬ್ಬರು ಗುತ್ತಿಗೆದಾರರು ಅರ್ಧದಲ್ಲಿ ಕೈಬಿಟ್ಟ ಹಿನ್ನೆಲೆಯಲ್ಲಿ ಗಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಆ ಬಳಿಕ ಹಲವು ಬಾರಿ ಯೋಜನೆ ಎಸ್ಟಿಮೇಟ್‌ ಬದಲಾಯಿಸುತ್ತಲೇ ಹೋಗಿದ್ದರೂ, ಅಣೆಕಟ್ಟು ನಿರ್ಮಾಣ ಕಾಮಗಾರಿ ವಹಿಸಿಕೊಳ್ಳಲು ಯಾರೂ ಮುಂದೆ ಬಂದಿರಲಿಲ್ಲ. ಇದೇ ವೇಳೆ ಅಣೆಕಟ್ಟಿನ ಜತೆಯಲ್ಲಿ ಸೇತುವೆಯನ್ನೂ ನಿರ್ಮಿಸಬೇಕೆಂದು ಸ್ಥಳೀಯರು ಬೇಡಿಕೆಯನ್ನು ಮುಂದಿಟ್ಟರೂ, ಸಂಬಂಧಪಟ್ಟವರು ಕಿವಿಗೊಡಲಿಲ್ಲ. ಪ್ರಥಮವಾಗಿ ಎಸ್ಟಿ ಮೇಟ್‌ ತಯಾರಿಸುವ ಸಂದರ್ಭದಲ್ಲಿ ಯೋಜನೆ ಪ್ರದೇಶಕ್ಕೆ ಸಾಗಲು ಎರಡೂ ಕಡೆಯಿಂದಲೂ ರಸ್ತೆ ಇರಲಿಲ್ಲ. ಆದರೆ ಇದೀಗ ಇಕ್ಕೆಲಗಳಿಂದಲೂ ಸಾಕಷ್ಟು ಅಗಲದಲ್ಲಿ ರಸ್ತೆಯಾಗಿದೆ. ರಸ್ತೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ಉಚಿತವಾಗಿ ಸ್ಥಳ ನೀಡಿದ್ದರು. ಚೆಮ್ನಾಡ್‌ ಪಂಚಾಯತ್‌ನ ಮಹಾಲಕ್ಷ್ಮೀಪುರದಿಂದ ಚಟ್ಟಂಚಾಲ್‌ ರಾಷ್ಟ್ರೀಯ ಹೆದ್ದಾರಿಗೂ, ಮುಳಿಯಾರು ಪಂಚಾಯತ್‌ನ ಬಾವಿಕೆರೆಯಿಂದ ಬೋವಿಕ್ಕಾನಕ್ಕೆ ಈ ರಸ್ತೆಗಳು ಸಾಗುತ್ತವೆ. ಇದೀಗ ಹೊಳೆ ದಾಟಲು ದೋಣಿಯನ್ನು ಆಶ್ರಯಿಸಿದ್ದಾರೆ.

ಅಗಲ ಹೆಚ್ಚುಗೊಳಿಸಿ: ಸ್ಥಳೀಯರು
ಎಂಟು ಮೀಟರ್‌ ಅಗಲದಲ್ಲಿ ಹೊಳೆಗೆ ನಿರ್ಮಾಣವಾಗುವ ಅಣೆಕಟ್ಟಿಗೆ ಕಾಂಕ್ರೀಟ್‌ (ಪೈಲಿಂಗ್‌) ನಡೆಸಲಾಗುತ್ತಿದೆ. ಇದರೊಂದಿಗೆ ನಾಲ್ಕು ಮೀಟರ್‌ ಹೆಚ್ಚುವರಿ ಮಾಡಿದರೆ ಟ್ರಾಕ್ಟರ್‌ ವೇ ಸಾಧ್ಯವಾಗಲಿದೆ ಎಂದು ಸ್ಥಳೀಯರು ವಾದಿಸುತ್ತಿದ್ದಾರೆ. ಈ ಹಿಂದೆ ನಿರ್ಮಾಣವಾಗಿದ್ದ ಭಾಗದಲ್ಲಿ ನೀರಿನ ಹರಿವು ನಿಂತಿರುವುದರಿಂದ ಪೈಲಿಂಗ್‌ ನಿರ್ಮಾಣ ಸುಲಭವಾಗಲಿದೆ. ಇದೀಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಭಾಗಕ್ಕೆ ನೀರಿನ ಹರಿವು ತಡೆಯಲು ತಾತ್ಕಾಲಿಕ ತಡೆಗೋಡೆ ಸಿದ್ಧಪಡಿಸಲಾಗಿದೆ. ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ತಡೆಗೋಡೆ ನಿರ್ಮಿಸಲಾಗಿದೆ.

ಕುಂಡಂಗುಳಿ ಪಾಂಡಿಕಂಡದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ತಡೆಗೋಡೆ ಮತ್ತು ಸೇತುವೆಯನ್ನು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಾವಿಕೆರೆಯಲ್ಲಿ 30 ಕೋಟಿ ರೂ. ವೆಚ್ಚ ಭರಿಸಿ ಅಣೆಕಟ್ಟು ನಿರ್ಮಿಸುತ್ತಿದ್ದರೂ ಸೇತುವೆ ಇಲ್ಲದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಸರಕಾರ ಇಚ್ಛಾಶಕ್ತಿ ತೋರಿದರೆ ಈ ಎರಡೂ ಪಂಚಾಯತ್‌ಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಾಣವಾದರೆ ಪ್ರಯೋಜನವಾಗಲಿದೆ ಎಂಬುದು ಸ್ಥಳೀಯರ ಅಂಬೋಣ. ಸೇತುವೆ ಸಾಧ್ಯವಾದಲ್ಲಿ ಸ್ಥಳೀಯರ ನಿರೀಕ್ಷೆ ಈಡೇರಬಹುದು.

Advertisement

ಶಾಸಕರ ಬೇಡಿಕೆ : ಬಾವಿಕೆರೆಯಲ್ಲಿ ಅಣೆಕಟ್ಟಿನ ಜತೆ ಟ್ರ್ಯಾಕ್ಟರ್‌ ವೇ ಕೂಡಾ ನಿರ್ಮಿಸಬೇಕೆಂದು ಶಾಸಕ ಕೆ. ಕುಂಞ ರಾಮನ್‌ ಸಚಿವರಿಗೆ ಈ ಮೊದಲು ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಸಭೆ ಕರೆದಿದ್ದರು. ಟ್ರ್ಯಾಕ್ಟರ್‌ ವೇ ನಿರ್ಮಾಣಕ್ಕೆ ಸ್ಥಳೀಯರು ಕ್ರಿಯಾ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಈಗಿರುವ ವಿನ್ಯಾಸ ಪ್ರಕಾರ ಟ್ರಾಕ್ಟರ್‌ ವೇಗೆ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಶಾಸಕರನ್ನು ಸಂಪರ್ಕಿಸಿದಾಗ ಅವರು ವಿಷಯ ತಿಳಿಸಿದ್ದು, ಅದರಂತೆ ಟ್ರ್ಯಾಕ್ಟರ್‌ ವೇ ಬಗ್ಗೆ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ. ಡಿ. 12ರಂದು ಇನ್‌ವೆಸ್ಟಿಗೇಶನ್‌ ಎಸ್ಟಿಮೇಟ್‌ ಸಿದ್ಧಪಡಿಸಿ ಸಲ್ಲಿಸಲು ಮತ್ತು ಡಿ. 15ರಂದು ಈ ಎಸ್ಟಿಮೇಟ್‌ಗೆ ಎಂಜಿನಿಯರ್‌ ಆರ್ಥಿಕ ಅನುಮತಿ ನೀಡಲು ಹಾಗೂ ಡಿ. 26ರ ಮುಂಚಿತ ಟೆಂಡರ್‌ ಕ್ರಮ ಪೂರ್ತಿಗೊಳಿಸಲು ತೀರ್ಮಾನಿಸಲಾಯಿತು.

ಸೇತುವೆ ನಿರ್ಮಾಣಕ್ಕೆ ಆಗ್ರಹ 
ಬಾವಿಕೆರೆ ಯೋಜನೆಗಾಗಿ ನವೀಕೃತ ಅಂದಾಜು ಮೊತ್ತ ನಿರ್ಣಯಿಸಲು ಹಿರಿಯ ಅಧಿಕಾರಿಗಳ ನಿಯೋಗ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಈ ಯೋಜನೆಯಲ್ಲಿ  ಸೇತುವೆ ಇಲ್ಲದ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ತಡೆಗೋಡೆಯೊಂದಿಗೆ ಟ್ರಾಕ್ಟರ್‌ ವೇ ನಿರ್ಮಿಸುವ ಮೂಲಕ ಸ್ಥಳೀಯರಿಗೆ ಸಾಕಷ್ಟು ಪ್ರಯೋ ಜನವಾಗಲಿದೆ ಎಂದೂ ಸ್ಥಳೀಯರ ಕ್ರಿಯಾ ಸಮಿತಿ ಮನವರಿಕೆ ಮಾಡಿತ್ತು.

ಟ್ರ್ಯಾಕ್ಟರ್‌ ವೇಗೂ ಹಸಿರು ನಿಶಾನೆ 
ಬಾವಿಕೆರೆಯಲ್ಲಿ ಅಣೆಕಟ್ಟು ನಿರ್ಮಾಣದೊಂದಿಗೆ ಟ್ರ್ಯಾಕ್ಟರ್‌  ವೇ ನಿರ್ಮಾಣಕ್ಕೂ ಹಸಿರು ನಿಶಾನೆ ತೋರಿಸಲಾಗಿದೆ. ಟ್ರ್ಯಾಕ್ಟರ್‌ ವೇ ನಿರ್ಮಾಣದ ಪ್ರಥಮ ಹಂತವಾಗಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಸ್ಥಳೀಯರ ಬೇಡಿಕೆ ನ್ಯಾಯಯುತವಾಗಿದೆ. ಟ್ರ್ಯಾಕ್ಟರ್‌ ವೇ ನಿರ್ಮಾಣದ ಮೂಲಕ ಸ್ಥಳೀಯರಿಗೆ ಸಾಕಷ್ಟು ಪ್ರಯೋಜನವಾಗಲಿದೆ.
– ಕೆ. ಕೃಷ್ಣನ್‌ ಕುಟ್ಟಿ, ಜಲಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next