Advertisement

ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರು ಅನಾಥ: ಧ್ರುವನಾರಾಯಣ್‌ ಆರೋಪ

06:23 PM Jul 12, 2022 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ದಲಿತರು ಅನಾಥ ಶಿಶುಗಳಂತಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪರಿಷತ್‌ ಮಾಜಿ ಸದಸ್ಯ ಧರ್ಮಸೇನ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಆಗುತ್ತಿದ್ದರೂ ಬಿಜೆಪಿಯ ದಲಿತ ನಾಯಕರು ಈ ಅನ್ಯಾಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರು, ಪರಿಶಿಷ್ಟರ ಹಿತಸಕ್ತಿ ಬಗ್ಗೆ ಗಮನವಹಿಸದೇ ನಿರ್ಲಕ್ಷ ವಹಿಸಿದೆ. ಆ ಮೂಲಕ ಈ ವರ್ಗದವರನ್ನು ಅನಾಥ ಶಿಶುಗಳಾಗಿ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ನಾಯಕರು, ಶಾಸಕರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾ, ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಇರಬೇಕು. ಸ್ವಾಭಿಮಾನ ಇಲ್ಲದವನ ಬದುಕು ಶೂನ್ಯ ಎಂದು ಅಂಬೇಡ್ಕರ್‌ ಅವರು ಹೇಳುತ್ತಾರೆ. ಈ ರೀತಿ ಬಿಜೆಪಿಯ ದಲಿತ ನಾಯಕರು ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಛಲವಾದಿ ನಾರಾಯಣ ಸ್ವಾಮಿ ಅವರ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ. ಅವರಿಗೆ ದಲಿತರು, ಶೋಷಿತರ ಬಗ್ಗೆ ಕಾಳಜಿ ಇದ್ದರೆ ಈ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಡಬೇಕಿತ್ತು ಎಂದರು.

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಜನಸಂಖ್ಯೆ ಅನುಗುಣವಾಗಿ ಅನುದಾನ ನೀಡಲು ಎಸ್‌ ಸಿ ಪಿ ಟಿಸ್‌ ಪಿ ಕಾಯ್ದೆ ತಂದರು. ಬಿಜೆಪಿ ಸರ್ಕಾರ 2012-13ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟರ ಕಲ್ಯಾಣಕ್ಕೆ 7200ಕೋಟಿ ರೂ. ಮಾತ್ರ ಅನುದಾನ ನೀಡಿತ್ತು. 2013-14ನೇ ಸಾಲಿನ ಬಜೆಟ್‌ ನಲ್ಲಿ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 8616 ಕೋಟಿ ರೂ. ನೀಡಿತು. ಈ ಕಾಯ್ದೆ ಜಾರಿಯಾದ ನಂತರ 2014-15ನೇ ಸಾಲಿನಲ್ಲಿ 15,834 ಕೋಟಿ ರೂ. ಕೊಟ್ಟರೆ, 2015-16ನೇ ಸಾಲಿನಲ್ಲಿ 16,356 ಕೋಟಿ ರೂ., 2016-17ನೇ ಸಾಲಿನಲ್ಲಿ 19,884 ಕೋಟಿ ರೂ., 2017-18ನೇ ಸಾಲಿನಲ್ಲಿ 27,840 ಕೋಟಿ ರೂ., 2018-19ನೇ ಸಾಲಿನಲ್ಲಿ 29,691 ಕೋಟಿ ರೂ. ಅನುದಾನವನ್ನು ನೀಡಿತ್ತು. ಹೀಗೆ ಕಾಂಗ್ರೆಸ್‌ ಸರ್ಕಾರ ಪ್ರತಿ ವರ್ಷ ಬಜೆಟ್‌ ಗಾತ್ರ ಹೆಚ್ಚಾದಂತೆ ಪರಿಶಿಷ್ಟರ ಕಲ್ಯಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡಿತ್ತು.

Advertisement

ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್‌ ಗಾತ್ರ ಹೆಚ್ಚಾದರೂ ಅನುದಾನ ಮಾತ್ರ ಹೆಚ್ಚಾಗಲಿಲ್ಲ. ಬದಲಿಗೆ ಕಡಿಮೆಯಾಗಿದೆ. 2019-20ನೇ ಸಾಲಿನಲ್ಲಿ 27,558 ಕೋಟಿ ರೂ. 2020-21ನೇ ಸಾಲಿನಲ್ಲಿ 25,378 ಕೋಟಿ ರೂ. ಹಾಗೂ 2021-22ನೇ ಸಾಲಿನಲ್ಲಿ 26,695 ಕೋಟಿ ರೂ. ಮಾತ್ರ ನೀಡಿದೆ ಎಂದು ಆರೋಪಿಸಿದರು.

2008-2013ರವರೆಗೆ ಬಿಜೆಪಿ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 22261 ಕೋಟಿ ರೂ. ನೀಡಿದರೆ 2013-2018ರ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕೆ 88,395 ಕೋಟಿ ರೂ. ಅನುದಾನ ಕೊಟ್ಟಿದೆ. ಇನ್ನು ಸಮಾಜ ಕಲ್ಯಾಣ ಇಲಾಖೆಗೆ ಬಿಜೆಪಿ ಸರ್ಕಾರ 2008 ರಿಂದ 2013ರವರೆಗೆ 9,541 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್‌ ಸರ್ಕಾರ 2013ರಿಂದ 2018ರವರೆಗೆ 23,798 ಕೋಟಿ ರೂ. ನೀಡಿದೆ. ಇಷ್ಟೆಲ್ಲಾ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿಯ ದಲಿತ ಮಂತ್ರಿ ಹಾಗೂ ಶಾಸಕರಿಗೆ ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದಲ್ಲಿ ಅಧ್ಯಕ್ಷರಾದ ಶಿವಕುಮಾರ್‌ ಅವರು ಸಂಘಟನಾ ಚತುರರು, ಮತ್ತೊಬ್ಬರು ಸಿದ್ಧರಾಮಯ್ಯ ಅವರು ಉತ್ತಮ ಆಡಳಿತಗಾರ, ಇನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಸಾಗುತ್ತಿದೆ. ಪಕ್ಷದ ಪ್ರದರ್ಷನ ಉತ್ತಮವಾಗಿದೆ. ಬಿಜೆಪಿಯವರಿಗೆ ಅಸೂಯೆ ಭಯ. ಅವರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರನ್ನು ಕಂಡರೆ ಭಯ, ಇತ್ತೀಚೆಗೆ ನಡೆದ ಪರಿಷತ್‌ ಚುನಾವಣೆ ಫಲಿತಾಂಶವನ್ನೇ ನೋಡಿ ಮೈಸೂರಿನ ಇತಿಹಾಸದಲ್ಲಿ ಕಾಂಗ್ರೆಸ್‌ ಗೆದ್ದಿರಲಿಲ್ಲ, ಬೆಳಗಾವಿಯಲ್ಲೂ ಗೆದ್ದಿರಲಿಲ್ಲ. ಪ್ರಜ್ಞಾವಂತ ಪದವಿದಾರರು ನಮಗೆ ಮತ ಹಾಕಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಜನ್ಮದಿನ ಕಾರ್ಯಕ್ರಮ ಆಯೋಜಿಸಲು ಒಂದು ಸಮಿತಿಯನ್ನು ಮಾಡಿದ್ದು, ಈ ಸಮಿತಿಯಲ್ಲಿ ಇರುವವರೆಲ್ಲರೂ ಕಾಂಗ್ರೆಸ್‌ ನಾಯಕರೇ ಆಗಿದ್ದಾರೆ. ಈ ಸಮಿತಿಯು ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ನಾವೆಲ್ಲರೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಸಿದ್ದರಾಮಯ್ಯ ಅವರು ನಮ್ಮ ಪ್ರಬಲ ನಾಯಕರಾಗಿದ್ದು. ಅವರ 75ನೇ ಜನ್ಮದಿನವನ್ನು ನಾವೆಲ್ಲರೂ ಸಂತೋಷವಾಗಿ ಆಚರಿಸುತ್ತಿದ್ದೇವೆ.
-ಧ್ರುವನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next