Advertisement
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಕಾಂಗ್ರೆಸ್‌ನಲ್ಲಿರುವ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಗಳಲ್ಲಿ ಪಂಜಾಬ್ ವಿದ್ಯಮಾನದ ನಂತರ ಆಸೆ ಚಿಗುರೊಡೆದಿದ್ದು ಕರ್ನಾಟಕದಲ್ಲೂ ಯಾಕೆ ಆ ಪ್ರಯೋಗ ನಡೆಯಬಾರದು ಎಂಬ ಚರ್ಚೆಯೂ ಆರಂಭವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷವು ಚುನಾವಣೆ ಸಾಮೂಹಿಕ ನೇತೃತ್ವದಲ್ಲಿಯೇ ಎದುರಿಸಿ ಅವಕಾಶ ಸಿಕ್ಕರೆ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬೇಡಿಕೆ ಜೀವಂತ ಇಟ್ಟು ಕೊಳ್ಳುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
Related Articles
Advertisement
ಅವಕಾಶ ಸಿಗಬೇಕು: 2023ರ ವಿಧಾನಸಭೆ ಚುನಾವಣೆ ಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯಕ್ಕೆ ಅವಕಾಶ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಪರಿಸ್ಥಿತಿ ಮತ್ತು ಸಂದರ್ಭವೂ ಒದಗಿಬರಬೇಕಾಗುತ್ತದೆ. ಜತೆಗೆ, ಅಂತಹ ಸಮಯ ದಲ್ಲಿ ಒಗ್ಗಟ್ಟು ಮುಖ್ಯ, ಪಕ್ಷದ ಇತರೆ ನಾಯಕರು ದೊಡ್ಡ ಮನಸ್ಸು ಮಾಡಬೇಕಾಗುತ್ತದೆ ಎಂದು ತಿಳಿಸುತ್ತಾರೆ.
ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ಮುಂಚೂ ಣಿ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಅವರ ಹೆಸರು ಕೇಳಿಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರಂತೂ ದಲಿತ ಸಮುದಾಯ ಎಂದು ಅವಕಾಶ ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯದ ನಾಯಕ ಎಂದು ಪರಿಗಣಿಸಿ ಅವಕಾಶ ಕೊಡಿ ಎಂದು ಹಲವಾರು ಬಾರಿ ಹೇಳಿದ್ದಾರೆ. ಡಾ.ಜಿ. ಪರಮೇಶ್ವರ್ ಅವರು ಸಹ, ಯಾಕೆ ಅವಕಾಶ ಸಿಗುವು ದಿಲ್ಲ ಎಂಬ ನೋವು ಪದೇಪದೆ ಕಾಡಿದ್ದುಂಟು ಎಂದು ಹಲವು ಸಮಾರಂಭಗಳಲ್ಲಿ ಹೇಳಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಬೇಡಿಕೆ ಜೀವಂತ ಇಟ್ಟುಕೊಂಡು ವಿಧಾನಸಭೆ ಚುನಾವಣೆ ವೇಳೆಯೂ ಆ ನಿಟ್ಟಿನಲ್ಲಿ ಪಕ್ಷ ಹಾಗೂ ನಾಯಕರ ಮೇಲೆ ಒತ್ತಡ ಹಾಕುವ ಬಗ್ಗೆ ತೆರೆಮರೆಯ ಸಿದ್ಧತೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ನಮ್ಮ ಹೈಕಮಾಂಡ್ ಬೇರೆ ಬೇರೆ ರಾಜ್ಯಗಳಲ್ಲಿ ಹಂತ ಹಂತವಾಗಿ ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದೆ. ಪಂಜಾಬ್‌ನ ತೀರ್ಮಾನ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಸಂದರ್ಭ ನೋಡಿಕೊಂಡು ತೀರ್ಮಾನ ಕೈಗೊಳ್ಳಲಿದೆ. ಹಲವು ವರ್ಷಗಳಿಂದಲೂ ದಲಿತ ಸಿಎಂ ಬೇಡಿಕೆ ಇದೆ. ಇಡೀ ದಲಿತ ಸಮುದಾಯವೂ ಎದುರು ನೋಡುತ್ತಿದೆ. ಇಲ್ಲಿ ಪರಮೇಶ್ವರ್ ಅಪ್ರಸ್ತುತ, ಸಮುದಾಯ ಪ್ರಸ್ತುತ. 2023ಕ್ಕೆ ನಾವು ಅಧಿಕಾರಕ್ಕೆ ಬರಬೇಕಾಗಿದೆ.-ಡಾ.ಜಿ.ಪರಮೇಶ್ವರ್, ಮಾಜಿ ಉಪ ಮುಖ್ಯಮಂತ್ರಿ -ಎಸ್. ಲಕ್ಷ್ಮಿನಾರಾಯಣ