Advertisement

ನಿತ್ಯ ಜೀವನಕ್ಕೆ ಸಾಹಿತ್ಯ ಪೂರಕವಾಗಲಿ

06:02 PM Jan 23, 2022 | Shwetha M |

ದೇವರಹಿಪ್ಪರಗಿ: ಕನ್ನಡ ಅನ್ನದ ಭಾಷೆ, ತಾಯಿ ಭಾಷೆ, ಕನ್ನಡತನ ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳುವ ಕಾಯಕ ನಮ್ಮಿದಾಗಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.

Advertisement

ಪಟ್ಟಣದ ಎ.ಬಿ. ಸಾಲಕ್ಕಿ ಪಪೂ ಕಾಲೇಜಿನಲ್ಲಿ ವಿಶ್ವಚೇತನ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ನಿಂತ ನೀರಾಗಬಾರದು. ದಿನನಿತ್ಯದ ಜೀವನಕ್ಕೆ ಪೂರಕವಾಗಿರಬೇಕು. ವಿದ್ಯಾದಾಹಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಬೇಕು. ಸಮಾಜದಲ್ಲಿ ಕಟ್ಟಕಡೆ ವ್ಯಕ್ತಿಯೂ ಸಾಹಿತ್ಯ ಮೆಚ್ಚುವಂತಾಗಬೇಕು. ಉಳ್ಳವರು ಹಣ ಗಳಿಕೆಗೆ ಮಹತ್ವ ನೀಡಿದರೆ ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಸಾಹಿತ್ಯ ರಚನೆಯಲ್ಲಿ ತೊಡಗಿ ಸಮೃದ್ಧ ಸಾಹಿತ್ಯದೊಂದಿಗೆ ಉತ್ಕೃಷ್ಟ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಸಾಹಿತ್ಯಿಕ ರೂಪದಲ್ಲಿ ಕಟ್ಟಿಕೊಟ್ಟು ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವುದರ ಮೂಲಕ ಸದೃಢ ಸಮಾಜಕ್ಕೆ ನಾಂದಿ ಹಾಡಬೇಕು ಎಂದರು.

ಶಿಕ್ಷಕ ಸಾಹಿತಿ ಎಸ್‌.ಎಸ್‌. ಸಾತಿಹಾಳ ಅವರ ಹಕ್ಕಿಯ ಹಾಡು ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ಹ.ಮ. ಪೂಜಾರ ಅವರ ನಮಸ್ಕಾರ ಪುನಃ ಬನ್ನಿ ಎಂಬ ಕೃತಿಗಳ ಪರಿಚಯ ಮಾಡಿದ ಸಾಹಿತಿಗಳಾದ ಪ.ಗು. ಸಿದ್ದಾಪುರ ಹಾಗೂ ರಾ.ಶಿ. ವಾಡೇದ ಮಾತನಾಡಿ, ಇರ್ವರ ಉತ್ತಮ ಸಾಹಿತ್ಯ ಮಕ್ಕಳಲ್ಲಿ ಹೊಸತನ ಮೂಡಿಸಿ ಸಾಹಿತ್ಯದ ಕಡೆಗೆ ಒಲವು ಹೊಂದಲು ಸಹಕಾರಿಯಾಗಲಿದೆ ಎಂದರು.

Advertisement

ಎಂ.ಆರ್‌. ಹೆಗ್ಗಣದೊಡ್ಡಿ, ಎಸ್‌.ಎನ್‌. ಬಸವರೆಡ್ಡಿ ಮಾತನಾಡಿದರು. ಪ್ರಾಚಾರ್ಯ ವಿ.ಜಿ. ಹೂವಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೇವರಹಿಪ್ಪರಗಿ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್‌. ವಾಲೀಕಾರ, ಸಿಂದಗಿ ಅಧ್ಯಕ್ಷ ಆನಂದ ಭೂಸನೂರ, ನೌಕರರ ಸಂಘದ ಅಧ್ಯಕ್ಷ ಎಂ.ಜಿ. ಯಂಕಂಚಿ, ಕಬೂಲ್‌ ಕೊಕಟನೂರ, ಎಸ್‌.ಜಿ. ತಾವರಖೇಡ, ಗೊಲ್ಲಾಳಪ್ಪ ಬಿರಾದಾರ, ಜಿ.ಪಿ. ಬಿರಾದಾರ, ಬಿ.ಆರ್‌. ಕಟೆ, ಸಂಜೀವ ರಾಠೊಡ, ಹೊಸಗೌಡರ, ಬಿ.ಸಿ. ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next