Advertisement
ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂರು ಕಂತಿನ ತುಟ್ಟಿ ಭತ್ತೆಯನ್ನು ಪುನಃ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗದ ಅನ್ವಯ ತುಟ್ಟಿ ಭತ್ತೆ ಹೆಚ್ಚಿಸಲಾಗಿದೆ. ಸದ್ಯ ಶೇ. 17ರಷ್ಟು ಇದ್ದು ಶೇ. 28ರಷ್ಟಕ್ಕೆ ಏರಿಸಲಾಗಿದೆ.
2020ರ ಜ. 1ರಿಂದಲೇ ಡಿಎ ಏರಿಕೆಯಾಗಿಲ್ಲ. ಜು. 1ರಂದು ವರ್ಷದ ಮೊದಲ ಕಂತು ಸೇರಿ ಶೇ. 4ರಷ್ಟು ಏರಿಕೆಗೆ ಕೇಂದ್ರ ನಿರ್ಧರಿಸಿತ್ತು. ಬಳಿಕ 2020ರ ಜುಲೈಯಲ್ಲಿ ಶೇ. 3 ಮತ್ತು 2021ರ ಜನವರಿಯಲ್ಲಿ ಶೇ. 4ರಷ್ಟು ಏರಿಕೆಗೆ ನಿರ್ಧಾರ ಮಾಡಲಾಗಿತ್ತು. ಕೊರೊನಾದಿಂದಾಗಿ ಜಾರಿ ಮಾಡಿಲ್ಲ. ಈಗ ಜು. 1ರಿಂದ ಅನ್ವಯವಾಗುವಂತೆ ಶೇ. 11ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಕಳೆದ ಮೂರು ಕಂತುಗಳಲ್ಲಿ ಏರಿಕೆ ಮಾಡಬೇಕಾದುದನ್ನು ಒಂದೇ ಬಾರಿಗೆ ಏರಿಸಿ ಆದೇಶ ಹೊರಡಿಸಲಾಗಿದೆ. ಆದರೆ ಇದಕ್ಕೆ ಅನ್ವಯವಾಗುವಂತೆ ಅರಿಯರ್ಸ್ ನೀಡುವುದಿಲ್ಲ. ಭತ್ತೆ ಹೆಚ್ಚಳದಿಂದಾಗಿ ನೌಕರರು ಮತ್ತು ಪಿಂಚಣಿದಾರರ ಟೇಕ್ ಹೋಂ ವೇತನ ಹೆಚ್ಚಳವಾಗಲಿದೆ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಲೆಕ್ಕಾಚಾರ ಹೇಗೆ ?
ಈಗಷ್ಟೇ ಕೇಂದ್ರ ಸರಕಾರಿ ಹುದ್ದೆಗೆ ಸೇರಿರುವ ನೌಕರನೊಬ್ಬನ ಮೂಲ ವೇತನ 18 ಸಾವಿರ ರೂ. ಇದ್ದರೆ ಹೊಸ ತುಟ್ಟಿಭತ್ತೆ ಅನ್ವಯ 2 ಸಾವಿರ ರೂ. ಹೆಚ್ಚಾಗಿ ಸಿಗಲಿದೆ. ಇದರ ಜತೆ ಹಳೆಯ ಶೇ. 17 ಭತ್ತೆ ಸೇರಿಸಿದರೆ ಮೂಲ ವೇತನ 18 ಸಾವಿರ ರೂ. ಇರುವಾತ ಇನ್ನು 5,040 ಡಿಎ ಪಡೆಯಲು ಅರ್ಹನಾಗುತ್ತಾನೆ. ವರ್ಷಕ್ಕೆ 24 ಸಾವಿರ ರೂ. ಹೆಚ್ಚುವರಿ ಭತ್ತೆ ಪಡೆಯುತ್ತಾನೆ.