Advertisement

D.K., DC ಅಡ್ಡೂರು ಸೇತುವೆ ಪರಿಶೀಲನೆ; ಸೇತುವೆ ಪರಿಶೀಲನೆ ವರದಿ ಬಳಿಕ ಮುಂದಿನ ತೀರ್ಮಾನ

12:01 AM Aug 24, 2024 | Team Udayavani |

ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಗುಣಮಟ್ಟ ಪರಿಶೀಲನೆಗೆ ಮುಂದಿನ ವಾರ (ಆ. 26ರ ಬಳಿಕ) ಬೆಂಗಳೂರಿನಿಂದ ಸೇತುವೆ ಪರಿಶೀಲನೆ ಯಂತ್ರ ಬರುತ್ತಿದ್ದು, ಅದರ ವರದಿ ಆಧಾರದಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಲಘು ವಾಹನ ಹೊರತುಪಡಿಸಿ ಯಾವುದೇ ಹೆಚ್ಚುವರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.

Advertisement

ಅವರು ಶುಕ್ರವಾರ ಅಡ್ಡೂರಿಗೆ ಭೇಟಿ ನೀಡಿ ಸ್ಥಳೀಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಸೇತುವೆಯಲ್ಲಿ ಏಕಾಏಕಿ ಘನ ವಾಹನ ಸಂಚಾರ ನಿಷೇಧಿಸಿ ಗಾರ್ಡ್‌ ಅಳವಡಿಸಿರುವುದರಿಂದ ಶಾಲಾ ವಾಹನಗಳು, ಬಸ್ಸುಗಳು ಸಂಚರಿಸಲಾಗದೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆಯಾಗಿದ್ದು, ಶೀಘ್ರ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸ್ಥಳೀಯರು ಬೇಡಿಕೆಯನ್ನು ಸಲ್ಲಿಸಿದರು.

ಮುಂದಿನ ದಿನಗಳಲ್ಲಿ ಸೇತುವೆಯ ಅಡ್ಡೂರು ಭಾಗದಲ್ಲಿ ಮಂಗಳೂರು ಕಮಿಷನರೇಟ್‌, ಪೊಳಲಿ ಭಾಗದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮೂಲಕ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಸೇತುವೆ ಸುತ್ತ ಯಾವುದೇ ಚಟುವಟಿಕೆಗಳು ನಡೆಯದಂತೆ ನಿಗಾ ಇರಿಸಲಾಗುತ್ತದೆ. ಜತೆಗೆ ವಾಹನ ಸಂಚಾರದ ಮೇಲೂ ಗಮನ ಹರಿಸಲಾಗುತ್ತದೆ.ಮರಳುಗಾರಿಕೆಗೆ ನೀಡಿರುವ ಅನುಮತಿಯನ್ನು ಅಮಾನತಿನಲ್ಲಿ ಇರಿಸಲಾಗುವುದು ಎಂದರು.

ಮಂಗಳೂರು ಸಹಾಯಕ ಕಮಿಷನರ್‌ ಹರ್ಷವರ್ಧನ ಪಿ.ಜೆ, ಬಂಟ್ವಾಳ ತಹಶೀಲ್ದಾರ್‌ ಅರ್ಚನಾ ಡಿ. ಭಟ್‌, ಪೊಲೀಸ್‌, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next