Advertisement

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

01:18 AM Sep 10, 2024 | Team Udayavani |

ಮಂಗಳೂರು: ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀ. ಪ್ರದೇಶವನ್ನು ಪರಿಸರ ಸಂರಕ್ಷಣ ಕಾಯ್ದೆ 1986ರ ಪ್ರಕಾರ “ನಿಶ್ಶಬ್ದ ವಲಯ (ಸೈಲೆಂಟ್‌ ಝೋನ್‌) ಎಂದು ಘೋಷಿಸುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ಜೈವಿಕ ಉದ್ಯಾನವನದ ನಿರ್ದೇಶಕರು ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಪಿಲಿಕುಳದಲ್ಲಿ ನ.17 ಮತ್ತು 18ರಂದು ಎರಡು ದಿನಗಳ ಕಂಬಳ, ಕೆಸರು ಗದ್ದೆ ಕ್ರೀಡೆ, ಕೃಷಿ ಜಾನುವಾರು ಮೇಳ ಸಹಿತ ವಿವಿಧ ಕಾರ್ಯಕ್ರಮಗಳೊಂದಿಗೆ ಪಿಲಿಕುಳ್ಳೋತ್ಸವ ಆಯೋಜಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಇದರ ನಡುವೆಯೇ “ಸೈಲೆಂಟ್‌ ಝೋನ್‌’ ಘೋಷಣೆಗೆ ಮನವಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪತ್ರದಲ್ಲಿ ಏನಿದೆ?
ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಅಳಿವಿನಂಚಿನಲ್ಲಿರುವ ವನ್ಯಜೀವ ಪ್ರಭೇದಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ಸುಮಾರು 1,250 ವನ್ಯ ಜೀವಿಗಳನ್ನು ಪಿಲಿಕುಳ ಜೈವಿಕ ಉದ್ಯಾನವನದಲ್ಲಿದೆ. ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ (ಗಾಳಿ, ಶಬ್ದ, ನೀರು, ಭೂಮಿ) ಪರಿಸರವನ್ನು ಒದಗಿಸುವುದು ಪ್ರಾಧಿಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಸಂರಕ್ಷಣೆಯಲ್ಲಿರುವ ವನ್ಯ ಜೀವಿಗಳಿಗೆ ಶಬ್ದ ಮಾಲಿನ್ಯ ಮುಕ್ತ ಪರಿಸರವನ್ನು ಒದಗಿಸುವುದು ಕೂಡ ಜವಾಬ್ದಾರಿಯಾಗಿದೆ. ಆದ್ದರಿಂದ ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀ. ಪ್ರದೇಶವನ್ನು “ನಿಶ್ಶಬ್ದ ವಲಯ’ ಎಂದು ಘೋಷಿಸಬೇಕು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ಪತ್ರದಲ್ಲಿ ಕೋರಿದ್ದಾರೆ.

11ರಂದು ಬೆಂಗಳೂರಿನಲ್ಲಿ ಸಭೆ
ಈ ನಡುವೆ “ಪಿಲಿಕುಳ್ಳೋತ್ಸವ’ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸುವ ಬಗ್ಗೆ ಸೆ.11ರಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.