Advertisement

Gujarat ನಲ್ಲಿ ಚಂಡಮಾರುತ ಪ್ರಭಾವ: ಕತ್ತಲಲ್ಲಿ ಗ್ರಾಮಗಳು- ಹಲವೆಡೆ ವಿದ್ಯುತ್‌ ಇಲ್ಲ

12:04 AM Jun 17, 2023 | Team Udayavani |

ನವದೆಹಲಿ/ಅಹ್ಮದಾಬಾದ್‌: ಗುಜರಾತ್‌ನ ಕಛ್‌-ಸೌರಾಷ್ಟ್ರ ಪ್ರದೇಶಗಳಲ್ಲಿ ಅಪ್ಪಳಿಸಿದ ಬೈಪರ್‌ಜಾಯ್‌ ಚಂಡಮಾರುತವು ಭಾರೀ ಪ್ರಮಾಣದ ಹಾನಿ ಮಾಡಿ ಮುಂದೆ ಸಾಗಿದೆ. ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಇಬ್ಬರು ಸಾವನ್ನಪ್ಪಿರುವುದು ಬಿಟ್ಟರೆ, ಬಳಿಕ ಯಾವುದೇ ಸಾವು-ನೋವು ಉಂಟಾಗಿಲ್ಲ. ಆದರೆ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

Advertisement

ಚಂಡಮಾರುತದ ಪರಿಣಾಮವೆಂಬಂತೆ ಬೀಸಿದ ಬಿರುಗಾಳಿ, ಸುರಿದ ಧಾರಾಕಾರ ಮಳೆಯಿಂದ 5,120 ವಿದ್ಯುತ್‌ ಕಂಬಗಳು ಧರೆಗುರುಳಿದರೆ, ವಿದ್ಯುತ್‌ ವ್ಯತ್ಯಯದಿಂದಾಗಿ 4,600ರಷ್ಟು ಗ್ರಾಮಗಳಲ್ಲಿ ಕತ್ತಲಲ್ಲಿ ಮುಳುಗಿದ್ದವು. ಸರಕಾರದ ಹೇಳಿಕೆ ಪ್ರಕಾರ 3,580 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಪುನಸ್ಥಾಪಿಸಲಾಗಿದೆ. ಇನ್ನೂ 1 ಸಾವಿರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.  800ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ಮೂರು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಹಲವಾರು ಮನೆಗಳಿಗೆ ಹಾನಿಯಾಗಿವೆ. 23 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಚಂಡಮಾರುತ ಅಪ್ಪಳಿಸುವ ವೇಳೆ ಗಂಟೆಗೆ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸಿತ್ತು. ಸಮುದ್ರದ ನೀರಿನ ಅಬ್ಬರ ಹೇಗಿತ್ತೆಂದರೆ, ತಗ್ಗು ಪ್ರದೇಶಗಳಲ್ಲಿದ್ದ ಹಲವು ಗ್ರಾಮಗಳಿಗೆ ಸಮುದ್ರದ ನೀರು ನುಗ್ಗಿತ್ತು. ಇದಕ್ಕೂ ಮೊದಲೇ ಮುನ್ನೆಚ್ಚರಿಕೆ ಕ್ರಮವೆಂಬಂತೆ, ಸುಮಾರು ಒಂದು ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.

200 ತಂಡಗಳ ನಿಯೋಜನೆ:  ಬೈಪರ್‌ಜಾಯ್‌ ಚಂಡಮಾರುತದಿಂದ ಉಂಟಾಗುವ ಭೂಕುಸಿತದಿಂದ ಸಿಂಹಗಳು ಮತ್ತು ಇತರೆ ಕಾಡು ಪ್ರಾಣಿಗಳನ್ನು ರಕ್ಷಿಸಲು ಗುಜರಾತ್‌ ಸರಕಾರ200ಕ್ಕೂ ಹೆಚ್ಚು ತಂಡಗಳನ್ನು ಗಿರ್‌ ಅರಣ್ಯ ಮತ್ತು ಕಛ… ಜಿಲ್ಲೆಯಲ್ಲಿ ನೇಮಿಸಿದೆ. ಗುರುವಾರ ಸಂಜೆ ಗಿರಿ ಪೂರ್ವ ವಿಭಾಗದ ಜಸಧಾರ್‌ ವ್ಯಾಪ್ತಿಯಲ್ಲಿ ತೆರೆದ ಬಾವಿಗೆ ಬಿದ್ದಿದ್ದ ಎರಡು ಸಿಂಹದ ಮರಿಗಳನ್ನು ಒಂದು ತಂಡ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾಕಾರ ಮಳೆ

Advertisement

ಗುಜರಾತ್‌ ಬಳಿಕ ಚಂಡಮಾರುತವು ರಾಜಸ್ಥಾನ ಕರಾವಳಿಯತ್ತ ಸಂಚರಿಸಿದ್ದು, ಇಲ್ಲಿನ ಜಲೋರ್‌ ಮತ್ತು ಬಾರ್ಮರ್‌ ಜಿಲ್ಲೆಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಗುರುವಾರ ರಾತ್ರಿಯೇ ಕೆಲವು ಪ್ರದೇಶಗಳಲ್ಲಿ 60-70ಮಿ.ಮೀ. ಮಳೆಯಾಗಿದೆ. ಶುಕ್ರವಾರವೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಲೋರ್‌ ಮತ್ತು ಬಾರ್ಮರ್‌ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದಲ್ಲಿ ಚಂಡಮಾರುತದಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗುವ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಾಜಸ್ಥಾನಕ್ಕೆ ಧಾವಿಸಿದೆ.

ಪಾಕಿಸ್ಥಾನ ಬಚಾವ್‌

ಗುಜರಾತ್‌ ಕರಾವಳಿಗೆ ಅಪ್ಪಳಿಸಿದ ಬಳಿಕ ಚಂಡಮಾರುತದ ತೀವ್ರತೆ ಸ್ವಲ್ಪಮಟ್ಟಿಗೆ ತಗ್ಗಿದ ಕಾರಣ, ಪಾಕಿಸ್ಥಾನದ ಆತಂಕವೂ ತಗ್ಗಿದೆ.

ಬೈಪರ್‌ಜಾಯ್‌ ಚಂಡಮಾರುತದಿಂದ ಗುಜರಾತ್‌ನಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದು ರಾಜ್ಯದ ಅತಿದೊಡ್ಡ ಸಾಧನೆ. ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಯಿತು.

ಅಲೋಕ್‌ ಕುಮಾರ್‌ ಪಾಂಡೆ, ರಾಜ್ಯ ಪರಿಹಾರ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next