Advertisement

ಸೈಕಲ್‌ ರಿಪೇರಿ ಬದುಕಿನ ದಾರಿ

09:48 AM Dec 05, 2019 | Lakshmi GovindaRaju |

ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ ಸೆಡ್ಡು ಹೊಡೆದು ನಿಲ್ಲುತ್ತಾರೆ. ಸಲೀಮಾ ನದಾಫ್, ಎರಡನೇ ಗುಂಪಿಗೆ ಸೇರಿದವರು…

Advertisement

ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಎಂಥ ಕಷ್ಟದ ಕೆಲಸವನ್ನೂ ಮಾಡಬಲ್ಲಳು ಎಂಬ ಮಾತು ಆಗಾಗ್ಗೆ ಸಾಬೀತಾಗುತ್ತಲೇ ಇದೆ. ಅದರಲ್ಲೂ, ಬದುಕಿನ ಅನಿವಾರ್ಯಗಳು ಆಕೆಯನ್ನು ಬೆಂಕಿಗೆ ನೂಕಿದರೆ, ಅಲ್ಲಿಂದಲೂ ಮೇಲೆದ್ದು ಬರುವ ಶಕ್ತಿಯೂ ಹೆಣ್ಣಿಗಿದೆ. ಸಲೀಮಾ ನದಾಫ್ ಅವರು ಈ ಮಾತಿಗೆ ಉದಾಹರಣೆ. ಗಂಡನ ಸಾವಿನ ನಂತರ, ಸೈಕಲ್‌ ಪಂಕ್ಚರ್‌ ಅಂಗಡಿ ನಡೆಸುತ್ತಾ ಜೀವನ ನಡೆಸುತ್ತಿರುವ ಸಲೀಮಾ, ಬದುಕಿನ ದುರ್ಬರ ದಿನಗಳಲ್ಲೂ ಧೈರ್ಯಗುಂದಿದವರಲ್ಲ.

ಸಲೀಮಾ ನದಾಫ್ ಅವರು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕೆಸರಗೊಪ್ಪ ಗ್ರಾಮದ ನಿವಾಸಿ. ಆಕೆಯ ಪತಿ ಬಾಬುಸಾಬ, ಹಳ್ಳಿಯಲ್ಲಿ ಸೈಕಲ್‌ ಪಂಕ್ಚರ್‌ ಅಂಗಡಿ ಇಟ್ಟುಕೊಂಡಿದ್ದರು. ಅದರಿಂದ ಬಂದ ಆದಾಯವೇ, ಒಬ್ಬ ಮಗ ಹಾಗೂ ನಾಲ್ಕು ಹೆಣ್ಣು ಮಕ್ಕಳಿಂದ ಕೂಡಿದ್ದ ಸಂಸಾರದ ಮೂಲ ಆಧಾರವಾಗಿತ್ತು. ಸಾಲ ಸೋಲ ಮಾಡಿ ಹೆಣ್ಮಕ್ಕಳ ಮದುವೆ ಮಾಡಿದ್ದರು. ಇನ್ನಾದರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂದುಕೊಂಡಾಗಲೇ ಬಾಬುಸಾಬರು ತೀರಿಕೊಂಡರು. ಮಗನಿನ್ನೂ ಸಣ್ಣವನಾದ್ದರಿಂದ, ದುಡಿಯುವ ಅನಿವಾರ್ಯತೆ ಏಕಾಏಕಿ ಸಲೀಮಾರ ಹೆಗಲಿಗೆ ಬಿತ್ತು.

ಪಂಕ್ಚರ್‌ ಅಂಗಡೀಲಿ ಕುಳಿತರು
ಅಲ್ಲಿಯವರೆಗೂ ಮನೆ, ಮಕ್ಕಳು, ಸಂಸಾರ ಅಂತ ಬದುಕಿದ್ದ ಸಲೀಮಾ, ಹೆದರಲಿಲ್ಲ. ಬೀದಿ ಬದಿ ಇದ್ದ ಗಂಡನ ಸೈಕಲ್‌ ಪಂಕ್ಚರ್‌ ಅಂಗಡಿಯ ಬಾಗಿಲು ತೆರೆದರು! ಊರಿನವರೆಲ್ಲ ಆಗ ಅವರನ್ನು ವಿಚಿತ್ರವಾಗಿ ನೋಡಿದರು. “ಹೆಂಗಸರಿಗೆ ಇದೆಲ್ಲಾ ಕೆಲಸ ಮಾಡೋಕೆ ಆಗುತ್ತಾ?’ ಅಂತ ಹುಬ್ಬೇರಿಸಿದರು. ಸಲೀಮಾರ ಧೈರ್ಯವನ್ನು ನೋಡಿ ಆಡಿಕೊಂಡು ನಕ್ಕರು, ಅನುಕಂಪಪಟ್ಟರು. ಎಲ್ಲವನ್ನೂ ಸಮನಾಗಿ ಸ್ವೀಕರಿಸಿದ ಸಲೀಮಾ, ಹಠ ತೊಟ್ಟು ಕೆಲಸ ಕಲಿತೇಬಿಟ್ಟರು. ಮೊದಮೊದಲು ಕಷ್ಟವಾದರೂ ನಂತರ ಕೆಲಸ ಕೈ ಹಿಡಿಯಿತು. ಈಗ ದಿನವೊಂದಕ್ಕೆ 200-300 ರೂ. ದುಡಿಯುತ್ತಿರುವ ಇವರು, ಸೈಕಲ್‌ ಪಂಕ್ಚರ್‌ ಹಾಕುತ್ತಾರೆ. ಸಣ್ಣಪುಟ್ಟ ರಿಪೇರಿ ಕೆಲಸವೂ ಅವರಿಗೆ ಗೊತ್ತು. ಈಗ ಅದೇ ಹಣದಲ್ಲಿ ಮನೆ ಖರ್ಚನ್ನು ತೂಗಿಸುತ್ತಿದ್ದಾರೆ.

ಮಕ್ಕಳ ಮದುವೆ ಖರ್ಚು, ಅಂಗಡಿ ದುರಸ್ತಿಗೆ ಮಾಡಿರುವ ಸಾಲ, ಜಾಗದ ಬಾಡಿಗೆ ಹೀಗೆ ಆರ್ಥಿಕವಾಗಿ ಕುಗ್ಗಿದ್ದರೂ, ದುಡಿಯುವ ಸಾಮರ್ಥ್ಯ ಕುಗ್ಗಿಲ್ಲ. ಸದ್ಯ ಸಲೀಮಾಗೆ, ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಪುತ್ರನೊಬ್ಬನೇ ಬದುಕಿನ ಆಶಾಕಿರಣ. ಅವನನ್ನು ಚೆನ್ನಾಗಿ ಓದಿಸುವ ಕನಸು ಕಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಮಗನೂ ತಾಯಿಗೆ ಸಹಕರಿಸುತ್ತಿದ್ದಾನೆ.

Advertisement

-ಲಕ್ಷ್ಮಣ ಕಿಶೋರ

Advertisement

Udayavani is now on Telegram. Click here to join our channel and stay updated with the latest news.

Next