ಬೆಂಗಳೂರು: ಕುಖ್ಯಾತ ರೌಡಿಶೀಟರ್ ರವಿ ಅಲಿಯಾಸ್ ಸೈಕಲ್ ರವಿ ಹಾಗೂ ಆತನ ಕುಟುಂಬ ಸದಸ್ಯರ ಹೆಸರಿನಲ್ಲಿದ್ದ 25 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ರೌಡಿಶೀಟರ್ ರವಿ ವಿರುದ್ಧ ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಆತ 25 ಲಕ್ಷ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು.
ಅಪರಾಧ ಕೃತ್ಯಗಳಿಂದಲೇ ಗಳಿಸಿದ ಹಣದಲ್ಲೇ ಸೈಕಲ್ ರವಿ ಕಾನೂನುಬಾಹಿರವಾಗಿ ಆಸ್ತಿ ಸಂಪಾದಿಸಿದ್ದ. ಯಶವಂತಪುರದ ಮಂಗನಹಳ್ಳಿ ಹಾಗೂ ಬಿ.ಎಂ ಕಾವಲ್‌ನಲ್ಲಿ ತನ್ನ ಪತ್ನಿ ರಮ್ಯಾ ಹೆಸರಿನಲ್ಲಿ ಮೂರು ಫ್ಲಾಟ್, ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿ ಒಂದು ನಿವೇಶನ ಹೊಂದಿದ್ದಾನೆ.
ಈ ಸ್ಥಿರಾಸ್ತಿಗಳ ಮೌಲ್ಯ 25 ಲಕ್ಷ ರೂ. ಎಂದು ಆಂದಾಜಿಸಲಾಗಿದೆ ಎಂದು ಜಾರಿನಿರ್ದೇಶನಾಲಯದ ಬೆಂಗಳೂರು ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಎಂಟು ಕೊಲೆ, ಕಿಡ್ನಾಪ್, ಸುಲಿಗೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಸೈಕಲ್ ರವಿ ಆರೋಪಿಯಾಗಿದ್ದಾನೆ.
ಈ ಪೈಕಿ ಹಲವು ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಕೆಲವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಇ.ಡಿ ತಿಳಿಸಿದೆ. ಅಪರಾಧ ಕೃತ್ಯಗಳಲ್ಲಿ ನಟೋರಿಯಸ್ ಎನಿಸಿಕೊಂಡಿದ್ದ ಸೈಕಲ್ ರವಿಯನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಆತನ ಕಾಲಿಗೆ ಗುಂಡು ಹೊಡೆದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಬಳಿಕ ತನಿಖೆಯಲ್ಲಿ ಆತ ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ್ದಾನೆ ಎಂದು ಖಚಿತಪಟ್ಟ ಮೇಲೆ ಇ.ಡಿ ಆಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದರು. ಈ ಹಿನ್ನೆಲೆಯಲ್ಲಿ ರವಿ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಇ.ಡಿ ಇದೀಗ ಆತನ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.