Advertisement
ಬೇಸಿಗೆ ಬಂತೆಂದರೆ ಬೆಳಗಾವಿ ಸೇರಿದಂತೆ ಸುತ್ತಲಿನ ಹಲವಾರು ಪ್ರದೇಶಗಳಲ್ಲಿ ನೀರಿಗೆ ಬರ ಬರುವುದು ಸಹಜ. ಇದ್ದಿದ್ದರಲ್ಲಿಯೇ ನೀರು ವ್ಯರ್ಥ ಆಗದಂತೆ ಬಳಸುವುದು ಜಾಣ್ಮೆ. ಈ ದಿಸೆಯಲ್ಲಿ ಬೆಳಗಾವಿಯ ಬೆಲಗಮ್ ಫುಡೀಸ್ ಎಂಬ ಫೇಸ್‌ಬುಕ್ ಪುಟ ನೀರು ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆ ಬಗ್ಗೆ ಅಭಿಯಾನ ಶುರು ಮಾಡಿದೆ. ಹೋಟೆಲ್, ಕ್ಯಾಂಟಿನ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಅರ್ಧ ಗ್ಲಾಸ್ ನೀರು ಕೊಡುವಂತೆ ಜಾಗೃತಿ ಮೂಡಿಸುತ್ತಿದೆ.
Related Articles
Advertisement
ಬೆಲಗಮ್ ಫುಡೀಸ್ ವತಿಯಿಂದ ನಗರದ ಬಹುತೇಕ ಹೋಟೆಲ್, ಕ್ಯಾಂಟಿನ್‌ಗಳಲ್ಲಿ ಅರ್ಧ ಗ್ಲಾಸ್ ನೀರಿನ ಬಗ್ಗೆ ಪೋಸ್ಟರ್ ಹಾಗೂ ಸ್ಟಿಕರ್‌ಗಳನ್ನು ಅಂಟಿಸಲಾಗಿದೆ. ಬೆಲಗಮ್ ಫುಡೀಸ್ ಫೇಸ್‌ಬುಕ್ ಪುಟದ ಸಂಸ್ಥಾಪಕ ಮಂದಾರ ಕೊಲ್ಹಾಪುರೆ ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದು, ಪುಣೆಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಎಂಜಿಯರ್ ಆಗಿ ನೌಕರಿ ಮಾಡುತ್ತಿದ್ದಾರೆ.
ಲಾಕ್ ಡೌನ್‌ದಿಂದಾಗಿ ಸದ್ಯ ಬೆಳಗಾವಿಯಲ್ಲಿ ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದಾರೆ. ಮೊದಲಿನಿಂದಲೂ ಆಹಾರ, ಉಪಾಹಾರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮಂದಾರ, ಬೆಳಗಾವಿಯ ಆಹಾರ, ತಿನಿಸು ಪರಿಚಯಿಸುವ ಬೆಲಗಮ್ ಫುಡೀಸ್ ಎಂಬ ಆನ್‌ಲೆ„ನ್ ಪುಟ ಆರಂಭಿಸಿದ್ದಾರೆ.
ಜನರ ಮನಸ್ಥಿತಿ ಬದಲಿಸುವ ಉದ್ದೇಶ: ನಗರದ ಕಾಲೇಜು, ಕ್ಯಾಂಟಿನ್, ಬಸ್ ನಿಲ್ದಾಣ, ಬೀದಿ ಬದಿ ಅಂಗಡಿಗಳು, ಗೂಡಂಗಡಿಗಳಲ್ಲಿ ಅಂಗಡಿಕಾರರಿಗೆ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅರ್ಧ ಗ್ಲಾಸು ನೀರು ಎಂದರೆ ಇದರಿಂದ ಎಷ್ಟು ನೀರು ಉಳಿತಾಯ ಆಗಬಹುದು ಎಂದು ಯೋಚಿಸುವವರೇ ಜಾಸ್ತಿ. ಆದರೆ ನೀರು ಅರ್ಧದಷ್ಟು ಉಳಿಯುವುದರ ಜೊತೆಗೆ ಸಾರ್ವಜನಿಕರ ಮನಸ್ಥಿತಿ ಬದಲಾಯಿಸುವ ಉದ್ದೇಶ ಈ ಅಭಿಯಾನ ಹೊಂದಿದೆ ಎನ್ನುತ್ತಾರೆ ಮಂದಾರ ಕೊಲ್ಹಾಪುರೆ. ಭಾರತ ಸರ್ಕಾರ ಬೆಲಗಮ್ ಫುಡೀಸ್ ನ ಹೊಸ ಪರಿಕಲ್ಪನೆಯ ಕಟಿಂಗ್ ಪಾನಿ ಎಂಬ ಅಭಿಯಾನವನ್ನು ಮೆಚ್ಚಿ ವಾಟರ್ ಹಿರೋಸ್ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ನೀರು ವ್ಯರ್ಥ ಆಗುವುದನ್ನು ತಡೆಯಲು ಕಟಿಂಗ್ ಪಾನಿ(ಅರ್ಧ ಗ್ಲಾಸ್ ನೀರು) ಬಗ್ಗೆ ಕ್ಯಾಂಟಿನ್, ಹೋಟೆಲ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅರ್ಧಕ್ಕಿಂತ ಹೆಚ್ಚು ಗ್ಲಾಸ್ ನೀರು ಕೊಟ್ಟರೆ ಸಾಮಾನ್ಯವಾಗಿ ವ್ಯರ್ಥವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಈ ಅಭಿಯಾನ ದೇಶವ್ಯಾಪಿ ಪ್ರಚಾರ ಪಡೆದು ನೀರು ಉಳಿತಾಯದ ಬಗ್ಗೆ ಜನರ ಮನಸ್ಥಿತಿ ಬದಲಿಸುವ ಏಕೈಕ ಉದ್ದೇಶ ಹೊಂದಲಾಗಿದೆ. –ಮಂದಾರ ಕೊಲ್ಹಾಪುರೆ, ಬೆಲಗಮ್ ಫುಡೀಸ್ ಸಂಸ್ಥಾಪಕ
ಬೆಳಗಾವಿ ನಗರದಲ್ಲಿ ಬೇಸಿಗೆಯಲ್ಲಿ ನೀರಿಗೆಹಾಹಾಕಾರ ಇರುವುದು ಸಹಜ. ಇಂಥದರಲ್ಲಿ ನೀರು ವ್ಯರ್ಥ ಆಗುವುಕ್ಕೆ ಲಗಾಮು ಹಾಕಲು ಕಟಿಂಗ್ ಪಾನಿ ಅಭಿಯಾನ ಆರಂಭಿಸಲಾಗಿದೆ. ಬೆಳಗಾವಿಗರು ಈ ಅಭಿಯಾಯನಕ್ಕೆ ಕೈಜೋಡಿಸಿದರೆ ಅಪಾರ ಪ್ರಮಾಣದಲ್ಲಿ ನೀರು ಉಳಿಸಬಹುದಾಗಿದೆ. -ಡಾ| ಶಂಕರ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ
-ಭೈರೋಬಾ ಕಾಂಬಳೆ