Advertisement

ರಾರಾಜಿಸಿದ ಕಟೌಟ್‌; ಕಾರ್ಯಕ್ರಮವೇ ರದ್ದು

04:02 PM Mar 22, 2022 | Team Udayavani |

ಮಸ್ಕಿ: ರಾಜ್ಯಾದ್ಯಂತ ಸದ್ದು ಮಾಡಿದ್ದ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಕಾಲು ಇಡದಾಗಿದ್ದ ದೇವದುರ್ಗ ಶಾಸಕ ಎನ್‌. ಶಿವನಗೌಡ ನಾಯಕ ಸೋಮವಾರ ಮಸ್ಕಿಗೆ ಆಗಮಿಸಲಿದ್ದಾರೆ ಎನ್ನುವ ಬ್ಯಾನರ್‌, ಕಟೌಟ್‌ಗಳು ಎಲ್ಲೆಡೆ ರಾರಾಜಿಸಿದ್ದವು. ಆದರೆ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮವೇ ರದ್ದಾದ ಪ್ರಸಂಗ ನಡೆಯಿತು.

Advertisement

ಕೆಆರ್‌ಡಿಐಎಲ್‌ ಸಂಸ್ಥೆ ಅಧ್ಯಕ್ಷರು ಆಗಿರುವ ಶಾಸಕ ಕೆ. ಶಿವನಗೌಡ ನಾಯಕ ಹೆಸರಲ್ಲಿ ಪಟ್ಟಣದಲ್ಲಿ ಮೂರು ಕಡೆ ಕುಡಿವ ನೀರಿನ ಅರವಟಿಗೆ ಹಾಗೂ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಯಾತ್ರಾತ್ರಿಗಳಿಗೆ ಅನ್ನ ದಾಸೋಹ ಹಮ್ಮಿಕೊಳ್ಳಲಾಗಿದೆ. ಈ ಸ್ಥಳಗಳಿಗೆ ಎನ್‌. ಶಿವನಗೌಡ ನಾಯಕ ಭೇಟಿ ನೀಡಿ ಅಭಿಮಾನಿಗಳ ಜತೆ ಸಮಾಗಮಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಪ ಚುನಾವಣೆ ವೇಳೆ ಸಿಎಂ ಸೇರಿ ಸಂಪುಟದ ಡಜನ್‌ಗೂ ಹೆಚ್ಚು ಸಚಿವರು, ಶಾಸಕರು ಬಂದು ಹೋದರೂ ದೇವದುರ್ಗ ಶಾಸಕ ಎನ್‌. ಶಿವನಗೌಡ ನಾಯಕ ಮಾತ್ರ ಇಲ್ಲಿಗೆ ಕಾಲಿಟ್ಟಿರಲಿಲ್ಲ. ಆದರೆ ಮಾ.21ರಂದು ಕೆ. ಶಿವನಗೌಡ ನಾಯಕ ಅಭಿಮಾನಿಯೂ ಆಗಿರುವ ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಮುಖಂಡ ಸಂದೀಪ್‌ ಪಾಟೀಲ್‌ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಎಲ್ಲೆಡೆಯೂ ಭಾರೀ ಪ್ರಮಾಣದಲ್ಲಿ ಕಟೌಟ್‌ಗಳನ್ನು ಹಾಕಲಾಗಿತ್ತು.

ಸೆಡ್ಡು ಹೊಡೆದ ಗ್ಯಾಂಗ್‌

ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ಕಳೆದು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಆರ್‌. ಬಸನಗೌಡ ಪರವಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಇವರಂತೆ ಹಲವು ಯುವಕರು ಕೂಡ ಕೆಲಸ ಮಾಡಿದ್ದರು. ಈಗ ಅದೇ ಗುಂಪು ಬಿಜೆಪಿ ಚಿಹ್ನೆ ಇಲ್ಲದೇ ಶಿವನಗೌಡ ನಾಯಕ ಪರ ಅಭಿಮಾನ ಮೆರೆದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಎಂದೇ ಗುರುತಿಸಿಕೊಂಡಂತಾಗಿದೆ. ಅಲ್ಲದೇ ಯುಗಾದಿ ಪ್ರಯುಕ್ತ ಎನ್‌. ಶಿವನಗೌಡ ನಾಯಕ ಹೆಸರಲ್ಲಿ ಗ್ರೀಟಿಂಗ್ಸ್‌ಗಳನ್ನು ಕ್ಷೇತ್ರದ ಪ್ರಮುಖ ಮುಖಂಡರು, ಸಂಘ-ಸಂಸ್ಥೆಗಳಿಗೂ ಹಂಚಿಕೆ ಮಾಡಲಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ನಡೆದ ಇಂತಹ ಚಟುವಟಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

Advertisement

ಶಾಸಕ ಶಿವನಗೌಡ ನಾಯಕ ಅನುಮತಿ ಪಡೆದುಕೊಂಡೇ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ದೇವದುರ್ಗ ಸೇರಿ ಇತರೆಡೆ ಬಿಡುವಿಲ್ಲದ ಕಾರ್ಯಕ್ರಮಗಳಿದ್ದ ಕಾರಣ ಈ ಬಾರಿ ಬರಲು ಆಗಲ್ಲ ಎಂದಿದ್ದಾರೆ. ಕೆಲ ದಿನ ಬಿಟ್ಟು ನಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. -ಶಿವಣ್ಣ ನಾಯಕ, ತಾಪಂ ಮಾಜಿ ಅಧ್ಯಕ್ಷ, ಮಸ್ಕಿ

Advertisement

Udayavani is now on Telegram. Click here to join our channel and stay updated with the latest news.

Next