ಎಚ್.ಡಿ.ಕೋಟೆ: ರಸ್ತೆ ಬದಿಗೆ ಚಾಚಿಕೊಂಡಿರುವ ಸ್ವಲ್ಪ ಗಾಳಿ ಬೀಸಿದರೂ ಮುರಿದು ಬೀಳುವ ಸ್ಥಿತಿಯಲ್ಲಿರುವ ಮರದ ಒಣ ಕೊಂಬೆಗಳನ್ನು ಕತ್ತರಿಸದಿದ್ದರೆ ಅನಾಹುತ ಸಂಭವಿಸಲಿದೆ ಎಂದು ಈ ಭಾಗದ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪಟ್ಟಣದ ಕಾಳಿದಾಸ ರಸ್ತೆಗೆ ಹೊಂದಿಕೊಂಡಂತಿರುವ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶತಮಾನ ಕಂಡಿರುವ ದೊಡ್ಡ ಗಾತ್ರದ ರೈನ್ ಟ್ರೀ ಮರವೊಂದಿದೆ. ಇದರ ಹಲವು ಕೊಂಬೆಗಳು ಸಂಪೂರ್ಣ ಒಣಗಿ ಮುರಿದು ಬೀಳುವ ಸ್ಥಿತಿಯಲ್ಲಿವೆ.
ಈ ಸ್ಥಳ ಯಾವಾಗಲೂ ಜನನಿಬಿಡ ಪ್ರದೇಶವಾಗಿದ್ದು, ನ್ಯಾಯಾಲಯದ ಜತೆಗೆ ಸಮೀಪದಲ್ಲೇ ವಕೀಲರ ಕಚೇರಿಗಳು, ವ್ಯಾಪಾರ ವಹಿವಾಟು, ಅಂಗಡಿ ಮುಂಗಟ್ಟು ಸೇರಿದಂತೆ ಮಂಜುನಾಥ ಚಿತ್ರಮಂದಿರ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕೂಡ ಇರುವುದರಿಂದ ಜನ ಸಂಚಾರದ ಜತೆಗೆ ವಾಹನಗಳ ಸಂಚಾರವೂ ಹೆಚ್ಚಾಗಿದೆ.
ಬೃಹತ್ ಗಾತ್ರದ ಮರಗಳ ಅಪಾಯಕಾರಿ ಒಣಗಿದ ಕೊಂಬೆಗಳು ಆಹುತಿಗೆ ಕಾದಿವೆ. ಹಾಗಾಗಿ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಒಣಗಿದ ಕೊಂಬೆರಂಬೆಗಳನ್ನು ಕತ್ತರಿಸಲು ಕ್ರಮ ವಹಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.
ನ್ಯಾಯಾಲಯದ ಆವರಣದಲ್ಲಿರುವ ರೈನ್ ಟ್ರೀ ಕೊಂಬೆಗಳು ಹೆಚ್ಚು ಜನ ಸಂಚಾರವಿರುವ ಕಾಳಿದಾಸ ರಸ್ತೆಗೆ ಬಾಗಿವೆ. ಅದರಲ್ಲಿ ಕೆಲವು ಕೊಂಬೆಗಳು ಸಂಪೂರ್ಣ ಒಣಗಿರುವುದು ನಮ್ಮ ಗಮನಕ್ಕೂ ಬಂದಿದೆ. ಒಣಗಿದ ಕೊಂಬೆಗಳನ್ನು ತೆರವುಗೊಳಿಸಲು ಪುರಸಭೆ ಕಿರಿಯ ಎಂಜಿನಿಯರ್ ಹರ್ಷ ಅವರಿಗೆ ಸೂಚಿಸುತ್ತೇನೆ.
-ರಮೇಶ್, ಮುಖ್ಯಾಧಿಕಾರಿ, ಪುರಸಭೆ