ಧಾರವಾಡ: ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ನಮ್ಮವರಿಂದಲೇ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಈ ಕಾರಣದಿಂದಲೇ ರಾಮ, ಕೃಷ್ಣರು ಬುದ್ಧಿಜೀವಿಗಳಿಂದ ಅಪಹಾಸ್ಯಕ್ಕೆ ಈಡಾಗುವಂತಾಗಿದೆ ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ಅಖಿಲ ಭಾರತ ಮಧ್ವ ಮಹಾ ಮಂಡಳ, ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನ, ಪ್ರಹ್ಲಾದ ವಿದ್ಯಾರ್ಥಿ ನಿಲಯ ಹಿಂದಿನ ವಿದ್ಯಾರ್ಥಿಗಳ ಸಂಘ, ನಿಲಯ ಫೌಂಡೇಶನ್ ಸಹಯೋಗದಲ್ಲಿ ನಗರದ ಮಾಳಮಡ್ಡಿಯ ಶ್ರೀ ವನವಾಸಿ ರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಹ್ಲಾದ ವಿದ್ಯಾರ್ಥಿ ನಿಲಯದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆರ್ಶೀವಚನ ನೀಡಿದ ಅವರು, ನಮ್ಮ ಸಂಸ್ಕೃತಿಯನ್ನು ನಾವು ಕಾಪಾಡುವ ಮೂಲಕ ಯುವ ಪೀಳಿಗೆಗೆ ನೀಡುವ ಕೆಲಸ ಮಾಡಬೇಕು ಎಂದರು.
ನಾವು ಕಟ್ಟಿದ ಸಂಸ್ಥೆಯ 60ನೇ ವರ್ಷದ ಹಬ್ಬದ ದಿನವನ್ನು ಸಂಭ್ರಮಿಸುವ ಭಾಗ್ಯವನ್ನು ದೇವರು ನೀಡಿದ್ದಾನೆ. ಎಲ್ಲರ ಸಹಕಾರದಿಂದ ಈ ಸಂಸ್ಥೆ ಉತ್ತಮ ಶಿಕ್ಷಣ ಹಾಗೂ ಧಾರ್ಮಿಕ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ಸಂಸ್ಥೆ ಆರಂಭಿಸುವ ಉದ್ದೇಶ ಹೊಂದಿದ್ದು, ಅಲ್ಲಿ ಭಕ್ತಿ, ಅಧ್ಯಾತ್ಮ, ಸುಸಂಸ್ಕೃತ ಶಿಕ್ಷಣ ನೀಡಲಾಗುವುದು. ನಾವು ಇಂಗ್ಲಿಷ್ ವಿರೋಧಿಯಾಗಿದ್ದರೂ ನಮ್ಮ ಸಂಸ್ಥೆಯಲ್ಲಿ ಇಂಗ್ಲಿಷ್ ಶಿಕ್ಷಣ ನೀಡಲಾಗುವುದು ಎಂದರು.
ಕಿರಿಯಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಆಚಾರ, ವಿಚಾರಗಳು ನಮ್ಮ ಬದುಕಿಗೆ ಅರ್ಥ ಕೊಡುತ್ತವೆ. ಅಂತಹ ಆಚಾರ, ವಿಚಾರಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಗಳು ಈ ಸಂಸ್ಥೆ ಪ್ರಾರಂಭಿಸಿದ್ದಾರೆ. ಹಿರಿಯರು ನೀಡಿದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು. ಶಿಕ್ಷಣ ತಜ್ಞ ಡಾ|ಗುರುರಾಜ ಕರ್ಜಗಿ ಮಾತನಾಡಿ, ಸಮಾಜದಲ್ಲಿ ಹಣ ಹಾಗೂ ಅ ಧಿಕಾರ ಹೊಂದುವ ಬಹುತೇಕ ಸಂಸ್ಥೆಗಳಿವೆ. ಆದರೆ, ಮನುಷ್ಯನಿಗೆ ಸಂಸ್ಕಾರ ಕಲಿಸಲು ಕೆಲವೇ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳಲ್ಲಿ ಪ್ರಹ್ಲಾದ ವಿದ್ಯಾರ್ಥಿ ನಿಲಯವೂ ಒಂದಾಗಿದೆ ಎಂದರು.
ಮಕ್ಕಳಲ್ಲಿ ಜ್ಞಾನ, ಕರುಣಿ, ವಿಶ್ವಾಸ ತುಂಬುವ ಕೆಲಸವನ್ನು 60 ವರ್ಷಗಳಿಗೆ ಪ್ರಹ್ಲಾದ ವಿದ್ಯಾರ್ಥಿ ನಿಲಯ ಮಾಡುತ್ತಿದೆ. ಈ ನಿಲಯದಲ್ಲಿ ಜ್ಞಾನ ಪಡೆದು ಹೋದರೆ ಸಾಲದು, ಪಡೆದ ಜ್ಞಾನವನ್ನು ಇನಷ್ಟು ಜನರಿಗೆ ತಲುಪಿಸಬೇಕು. ಭಿನ್ನಾಭಿಪ್ರಾಯ ಇದ್ದಾಗ ತಾಳ್ಮೆ, ಸಹಮತ ಇದ್ದಾಗ ಸಂಪೂರ್ಣ ಸಹಕಾರದಿಂದ ಪಡೆದ ಜ್ಞಾನ ಸಮಾಜದ ಅಭ್ಯುದಯಕ್ಕೆ ಉಪಯೋಗಿಸಬೇಕು ಎಂದರು. ವಿದ್ಯಾವಾಚಸ್ಪತಿ ಡಾ| ಪ್ರಭಂಜನಾಚಾರ್ಯ ವ್ಯಾಸನಕೆರೆ ಮಾತನಾಡಿ, ದೇಶದಲ್ಲಿ ಬಡವರು ಆತ್ಮಹತ್ಯೆ ಶರಣಾಗುತ್ತಿದ್ದಾರೆ ಎಂಬುದು ತಪ್ಪು. ಸಂಸ್ಕಾರಯುತ ವಾತಾವರಣದಲ್ಲಿ ಬೆಳೆದ ವ್ಯಕ್ತಿ ಆತ್ಮಹತ್ಯೆ ಬಗ್ಗೆ ಚಿಂತಿಸಲ್ಲ. ಸಮಸ್ಯೆ ಎದುರಿಸುತ್ತಾನೆ. ಲಕ್ಷ-ಲಕ್ಷ ಸಂಬಳ ಪಡೆಯುವ ಸಂಸ್ಕಾರ ಇಲ್ಲದ ಶ್ರೀಮಂತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪ್ರಹ್ಲಾದ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಲೌಕಿಕ ಜ್ಞಾನ ನೀಡುವ ಕೆಲಸ ಮಾಡುತ್ತಿದೆ. ಇಂಥ ಸಂಸ್ಥೆಗಳನ್ನು ಹುಟ್ಟು ಹಾಕುವ ಮಟ್ಟಿಗೆ ನಿಲಯದ ವಿದ್ಯಾರ್ಥಿಗಳು ಬೆಳೆಯಬೇಕು. ಅಂದಾಗ ನಿಲಯದ ಶ್ರಮ ಸಾರ್ಥಕ ಆಗಲಿದೆ ಎಂದರು. ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ನಿಲಯದ ಅಧ್ಯಕ್ಷ ಎಸ್.ಆರ್. ಕೌಲಗುಡ್ಡ ಮಾತನಾಡಿದರು. ಹಳೇ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಇದಕ್ಕೂ ಮುನ್ನ ಪ್ರಹ್ಲಾದ ವಿದ್ಯಾರ್ಥಿ ನಿಲಯದಿಂದ ವನವಾಸಿ ರಾಮಮಂದಿರದವರೆಗೆ ಪೇಜಾವರ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಿತು. ಬೆಳಗ್ಗೆ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಪೇಜಾವರ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಭಕ್ತರು ಕಿರಿಯ ಶ್ರೀಗಳ ತುಲಾಭಾರ ನೆರವೇರಿಸಿದರು. ವಿದ್ಯಾಸಾಗರ ದೀಕ್ಷಿತ ಸ್ವಾಗತಿಸಿದರು. ಗುರುರಾವ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಹ.ವೆಂ. ಕಾಖಂಡಕಿ ನಿರೂಪಿಸಿದರು. ಆರ್.ವೈ. ಕಟ್ಟಿ ವಂದಿಸಿದರು.
ನಮ್ಮ ಹಿರಿಯರು ನಮಗೆ ಕೊಟ್ಟ ಆಸ್ತಿ ಅಂದರೆ ಕೇವಲ ಸಂಸ್ಕೃತಿ. ಈ ಸಂಸ್ಕೃತಿ ಕಲಿಸುವ ಕೆಲಸ ಸದಾ ಆಗಬೇಕು. ಯುವ ಪೀಳಿಗೆಗೆ ಈ ಸಂಸ್ಕೃತಿ ನೀಡಿದರೆ ಮಾತ್ರ ಸಮಾಜದ ಉನ್ನತಿ ಸಾಧ್ಯವಿದೆ.
ವಿಶ್ವೇಶತೀರ್ಥ ಶ್ರೀಪಾದರು
ಇಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಮಾರ್ಗದರ್ಶನ ಮಾಡಬೇಕು. ಜೀವನದ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು.
ಡಾ| ಗುರುರಾಜ ಕರ್ಜಗಿ