ಬೆಂಗಳೂರು: ಬಿಸಿಲಿನ ಬೇಗೆಯಿಂದ ಸೌತೆಕಾಯಿ ಉತ್ಪಾದನೆ ಕುಂಠಿತವಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಾರಾಟ ಮಹಾಮಂಡಲ ನಿಯಮಿತ (ಹಾಪ್‌ಕಾಮ್ಸ್) ಸೇರಿ ಮಾರುಕಟ್ಟೆಗಳಲ್ಲಿ ಸೌತೆಕಾಯಿ ಬೆಲೆ ಕೆ.ಜಿ.ಗೆ 60 ರೂ. ಆಸುಪಾಸಿನಲ್ಲಿದೆ.
ಬಿಸಿಲು ಹೆಚ್ಚಿರುವ ಕಾರಣ ಸೌತೆಕಾಯಿ ಬಳ್ಳಿ ಬೆಳೆಯುತ್ತಿಲ್ಲ. ಹೂ ಬಿಟ್ಟರೂ ಮೊಗ್ಗು ಬಾರದೆ ಒಣಗಿ ಹೋಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ತಕ್ಕಷ್ಟು ಸೌತೆಕಾಯಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಬೆಲೆಯಲ್ಲಿ ಏರಿಕೆ ಆಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಅನೇಕಲ್, ಸರ್ಜಾಪುರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೇರಳವಾಗಿ ಸೌತೆಕಾಯಿ ಪೂರೈಕೆ ಆಗುತ್ತಿತ್ತು. ಆದರೆ, ಈಗ ಕಡಿಮೆ ಆಗಿದೆ ಎನ್ನುತ್ತಾರೆ ಹೋಲ್‌ಸೇಲ್ ವ್ಯಾಪಾರಿಗಳು.
ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. 62 ರೂ.: ಹಾಪ್‌ಕಾಮ್ಸ್‌ನಲ್ಲಿ ಉತ್ತಮ ಗುಣಮಟ್ಟದ ಸೌತೆಕಾಯಿ ಪ್ರತಿ ಕೆ.ಜಿ.ಗೆ 62 ರೂ. ಇದೆ. ಕಳೆದ ಕೆಲವು ದಿನಗಳಿಂದ ಸೌತೆಕಾಯಿ ಬೆಲೆಯಲ್ಲಿ ಏರಿಕೆ, ಇಳಿಕೆ ನಡೆಯುತ್ತಲೇ ಇದೆ. ಗೃಹ ಪ್ರವೇಶ, ವಿವಾಹ ಮತ್ತಿತರ ಶುಭ ಸಮಾರಂಭಗಳ ಸೀಜನ್ ಆಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲದೆ, ಬೇಸಿಗೆಯ ನೀರಡಿಕೆ(ಬಾಯಾರಿಕೆ)ಯನ್ನೂ ತಡೆಯುವ ಗುಣ ಹೊಂದಿರುವುದರಿಂದ ಸೌತೆ ಸವಿಯಲು ಜನರೂ ಕಾತರರಾಗಿದ್ದಾರೆ. ಆದರೆ, ಬೇಡಿಕೆಯಿರುವಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಸೌತೆಕಾಯಿ ಬೆಲೆ ಏರಿಕೆಯಾಗಿದೆ ಎಂದು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಸೌತೆಕಾಯಿ ಮಾರಾಟ ಉತ್ತಮವಾಗಿದೆ. ಪ್ರತಿದಿನ 2 ಟನ್ ಮಾರಾ ಟವಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಬೆಳೆಯುವ ರೈತರಿಂದ ಸೌತೆಕಾಯಿ ಖರೀದಿಸ ಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಕಡಿಮೆ ಆಗಿದೆ. ಮಳೆ ಸುರಿದರೆ ಬೆಲೆ ಇಳಿಯುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಹೇಳುತ್ತಾರೆ.
ರಾಜಧಾನಿ ಬೆಂಗಳೂರಿಗೆ 3 ಸಾವಿರ ಮೂಟೆ: ಮೂರು ನಾಲ್ಕು ದಿನಗಳ ಹಿಂದಷ್ಟೇ ಕಲಾಸಿಪಾಳ್ಯ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ 50 ಕೆ.ಜಿ. ಸೌತೆ ಕಾಯಿ ಮೂಟೆಗೆ 2 ಸಾವಿರ ರೂ. ಇತ್ತು. ಆದರೆ, ಈಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಾರೆ ಹೋಲ್‌ಸೇಲ್ ವ್ಯಾಪಾರಿ ರವಿರಾಜ್. ಒಂದು ತಿಂಗಳ ಹಿಂದೆ ಪ್ರತಿ ಕೆಜಿ.ಗೆ 25 ರೂ. ಮಾರಾಟವಾಗು ತ್ತಿದ್ದ ಸೌತೆಕಾಯಿ ಈಗ 60 ರೂ.ಗೂ ಅಧಿಕ ಬೆಲೆಗೆ ಖರೀದಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕೆಲವು ದಿನಗಳಿಂದ ಬೇಡಿಕೆಯಿರುವಷ್ಟು ಸೌತೆಕಾಯಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ. ಬೆಂಗಳೂರಿನ ಸುತ್ತಮುತ್ತ ಮಳೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುವ ಸಾಧ್ಯತೆ ಇದೆ. ಹಾಪ್‌ಕಾಮ್ಸ್ ನಲ್ಲಿ ನಿತ್ಯ 2 ಟನ್ ಸೌತೆಕಾಯಿ ಮಾರಾಟವಾಗುತ್ತಿದೆ.
-ಉಮೇಶ್ ಮಿರ್ಜಿ, ವ್ಯವಸ್ಥಾಪಕರು ಹಾಪ್‌ಕಾಮ್ಸ್.
– ದೇವೇಶ ಸೂರಗುಪ್ಪ