ಬೆಂಗಳೂರು: ಟೆಕಿ ಅತುಲ್ ಆತ್ಮಹತ್ಯೆ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ರುವ ಅವರ ಪತ್ನಿ ನಿಖೀತಾ ಜಾಮೀನು ಅರ್ಜಿಯನ್ನು ಜ.4ರಂದೇ ಇತ್ಯರ್ಥಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸೂಕ್ತ ಕಾರಣ ನೀಡದೆ ಬಂಧಿ ಸಿದ್ದು ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ನಿಖೀತಾ ಮತ್ತವರ ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರಲ್ಲಿ ಒಬ್ಬರಾದ ನಿಖೀತಾಗೆ ಸಣ್ಣ ಮಗುವಿದೆ. ಮಗುವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಮಗುವಿನ ಅಜ್ಜ( ಅತುಲ್ ತಂದೆ) ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನಿಖೀತಾಗೆ ನೋಟಿಸ್ ಜಾರಿಯಾಗಿದೆ. ಆದರೆ, ಆ ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸ ಬೇಕಾಗಿದೆ. ಆದರೆ, ಪ್ರಸ್ತುತ ಅರ್ಜಿದಾರರು ನ್ಯಾಯಾಂಗ ಬಂಧನಲ್ಲಿದ್ದು, ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರನ್ನು ಬಂಧಿಸುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದಕ್ಕೆ ವಿವರಣೆ ನೀಡಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದರು.
ಸರ್ಕಾರದ ಪರ ವಕೀಲರು, ತನಿಖಾಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಆದ್ದರಿಂದ ಜಾಮೀನು ನೀಡಬಾರದು ಎಂದರು.