Advertisement

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

10:50 AM Jan 02, 2025 | Team Udayavani |

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋ ದರಿ ಸೋಗಿನಲ್ಲಿ ಮಹಿಳೆಗೆ 3.25 ಕೋಟಿ ರೂ. ವಂಚಿಸಿದ ಪ್ರಕರಣದ ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ಬರೋಬ್ಬರಿ 29 ಕೆ.ಜಿ. ಬೆಳ್ಳಿ ವಸ್ತುಗಳು ಸಿಕ್ಕಿದ್ದು, ಪೊಲೀಸರೇ ಶಾಕ್‌ ಆಗಿದ್ದಾರೆ.

Advertisement

ಮತ್ತೂಂದೆಡೆ ದೂರುದಾರೆ ಶಿಲ್ಪಾಗೌಡಗೆ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಹಾಗೂ ದಾಖಲೆಗಳನ್ನು 2 ದಿನಗಳ ಒಳಗೆ ಒದಗಿಸುವಂತೆ ನೋಟಿಸ್‌ ನೀಡಿದ್ದಾರೆ. ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಬುಧವಾರ ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೂ ಇಡೀ ಮನೆ ಯನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ 29 ಕೆ.ಜಿ. ಬೆಳ್ಳಿಯ ವಸ್ತುಗಳು ಹಾಗೂ 100 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಜತೆಗೆ ಕೆಲವೊಂದು ದಾಖಲೆಗಳು ಸಿಕ್ಕಿದ್ದು, ಎಲ್ಲವನ್ನು ಜಪ್ತಿ ಮಾಡಲಾಗಿದೆ. ಮತ್ತೂಂದೆಡೆ ಸಾಕಷ್ಟು ಚಿನ್ನಾಭರಣಗಳನ್ನು ಈ ಮೊದಲೇ ಈಕೆ ಬೇರೆಡೆ ಸ್ಥಳಾಂತರಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೂರುದಾರೆ ಶಿಲ್ಪಾಗೌಡ ನೀಡಿದ ದೂರಿನ ಮೇರೆಗೆ ಎಫ್ಐಆರ್‌ ದಾಖಲಿಸಿಕೊಂಡು, ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆಯಲಾಗಿತ್ತು. ಹೀಗಾಗಿ ಬುಧವಾರ ಆಕೆಯ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಐಶ್ವರ್ಯಗೌಡ ಮನೆಯಲ್ಲಿ ಇರಲಿಲ್ಲ. ಆಕೆಯ ಪತಿ ಹರೀಶ್‌ ಮನೆಯಲ್ಲಿದ್ದ. ಆತನ ಸಮ್ಮುಖದಲ್ಲೇ ಶೋಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ದೂರುದಾರೆಗೆ ನೋಟಿಸ್‌: ಆರ್‌.ಆರ್‌.ನಗರ ನಿವಾಸಿ ದೂರುದಾರ ಮಹಿಳೆ ಶಿಲ್ಪಾಗೌಡಗೆ ಆರ್‌. ಆರ್‌.ನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ. ವಂಚನೆ ಎಸಗಿದ ಸ್ಥಳ ತೋರಿಸಿ ಪಂಚನಾಮೆಗೆ ಸಹಕಾರ ನೀಡಬೇಕು. ಸಾಕ್ಷಿದಾರರನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಇನ್ನೆ ರಡು ದಿನದೊಳಗೆ ಬಂದು ಹಾಜರುಪಡಿಸಬೇಕೆಂದು ಪೊಲೀಸರು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

ವಾರಾಹಿ ಜ್ಯೂವೆಲ್ಲರಿ ಶಾಪ್‌ ಮಾಲೀಕಿ ವನಿತಾ ಎಸ್‌. ಐತಾಳ್‌ಗೆ 9.82 ಕೋಟಿ ರೂ. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಚಂದ್ರಾ ಲೇಔಟ್‌ ಪೊಲೀಸರು ಐಶ್ವರ್ಯಗೌಡ ಪತಿ ಕೆ.ಎನ್‌. ಹರೀಶ್‌ನನ್ನು ಬಂಧಿಸಿದ್ದರು. ಬಂಧನ ಪ್ರಶ್ನಿಸಿ ಐಶ್ವರ್ಯ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಮಂಗಳವಾರ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಕೂಡಲೇ ಆರೋಪಿತರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಬೆನ್ನಲೇ ಆರ್‌.ಆರ್‌.ನಗರ ಪೊಲೀಸರು ಆರೋಪಿತ ದಂಪತಿ ಮನೆ ಶೋಧ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ: ಡಿ.ಕೆ.ಸುರೇಶ್‌ ಸಹೋದರಿ ಸೋಗಿನಲ್ಲಿ ಚಿನ್ನ ವ್ಯಾಪಾರ, ಚಿಟ್‌ ಫ‌ಂಡ್ಸ್‌ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ತಮ್ಮ ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದು. ಅಲ್ಲದೆ, ತಮ್ಮ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಐಶ್ವರ್ಯಗೌಡ ಆಮಿಷವೊಡ್ಡಿದ್ದಳು. ಇದನ್ನು ನಂಬಿ 2022ರಿಂದ 2024ರವರೆಗೆ ಹಂತ ಹಂತವಾಗಿ 3.25 ಕೋಟಿ ರೂ. ನಗದು ಹಾಗೂ 430 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ಬಳಿಕ ವಾಪಸ್‌ ನೀಡದೆ ವಂಚಿಸಿದ್ದಾಳೆ ಎಂದು ಶಿಲ್ಪಾಗೌಡ ದೂರು ನೀಡಿದ್ದರು.

ಚುನಾವಣೆಗೆ ಕೋಟಿಗಟ್ಟಲೇ ಹಣ ಫ‌ಂಡಿಂಗ್‌?: ಜ್ಯುವೆಲ್ಲರಿ ಮಾಲಿಕರು ಹಾಗೂ ಪರಿಚಯಸ್ಥರಿಗೆ ಕೋಟ್ಯಂತರ ರೂ. ವಂಚಿಸಿದ ಐಶ್ವರ್ಯಗೌಡ ದಂಪತಿ ರಾಜಕೀಯ ವ್ಯಕ್ತಿಗಳ ಚುನಾವಣೆಗೆ ಕೋಟಿಗಟ್ಟಲೇ ಖರ್ಚು ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next