Advertisement

ಧೋನಿ ಪಡೆಗೆ ಕೊಹ್ಲಿ ಬಳಗದ ಸವಾಲು

09:54 PM Sep 23, 2021 | Team Udayavani |

ಶಾರ್ಜಾ: ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಮಹತ್ವದ ಐಪಿಎಲ್‌ ಪಂದ್ಯ ಶುಕ್ರವಾರ ನಡೆಯಲಿದೆ.

Advertisement

ಇದು ಯುಎಇಯ ಮೂರನೇ ಮುಖ್ಯ ಮೈದಾನವಾದ ಶಾರ್ಜಾದಲ್ಲಿ ನಡೆಯಲಿದೆ. ಈಗಾಗಲೇ ಯುಎಇ ಚರಣದ ಮೊದಲ ಪಂದ್ಯವನ್ನು ಗೆದ್ದ ಖುಷಿಯಲ್ಲಿರುವ ಚೆನ್ನೈ ಇದೆ. ಆರ್‌ಸಿಬಿ ಯುಎಇ ಚರಣದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೇಸರದಲ್ಲಿದೆ.

ಮೇಲ್ನೋಟಕ್ಕೆ ಚೆನ್ನೈ ಈ ಪಂದ್ಯದ ನೆಚ್ಚಿನ ತಂಡ. ಭಾನುವಾರದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈಯನ್ನು ಮಣಿಸುವ ಮೂಲಕ ಧೋನಿ ಪಡೆ ಶುಭಾರಂಭ ಮಾಡಿದೆ. ಇತ್ತ ಆರ್‌ಸಿಬಿ ಈ ಬಾರಿ ಐಪಿಎಲ್‌ನ ಮೊದಲಭಾಗದಲ್ಲಿ ಬಲಿಷ್ಠ ಶಕ್ತಿಯಾಗಿ ಪುನರ್‌ ಸಂಘಟನೆಗೊಂಡಿದ್ದರೂ, ಯುಎಇ ಚರಣದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುವಲ್ಲಿ ಎಡವಿದೆ.

ಅಸ್ಥಿರ ಪ್ರದರ್ಶನ: ಕಳೆದ ಪಂದ್ಯದಲ್ಲಿ ಕೋಲ್ಕತ ವಿರುದ್ಧ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿ ಶೋಚನೀಯ ಸೋಲು ಕಂಡಿರುವ ಆರ್‌ಸಿಬಿಗೆ ಇದೊಂದು ದೊಡ್ಡ ಅಗ್ನಿಪರೀಕ್ಷೆ. ತಾರಾ ಆಟಗಾರರನ್ನು ಹೊಂದಿಯೂ ಈವರೆಗೆ ಕಪ್‌ ಎತ್ತಲು ವಿಫ‌ಲವಾಗಿರುವ ಆರ್‌ಸಿಬಿ ಪ್ರತೀ ಕೂಟದಲ್ಲೂ ಅಚ್ಚರಿಯ ಹಾಗೂ ಕಳಪೆ ಪ್ರದರ್ಶನ ನೀಡುವುದು ಮಾಮೂಲು. ಒಮ್ಮೆ ಇನ್ನೂರರ ಗಡಿ ದಾಟುತ್ತದೆ, ಇನ್ನೊಮ್ಮೆ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಒಟ್ಟಾರೆ ಅಸ್ಥಿರ ಪ್ರದರ್ಶನವೇ ತಂಡಕ್ಕೆ ಮುಳುವಾಗುತ್ತಿರುವುದು ವಿಪರ್ಯಾಸ.

ಬೆಂಗಳೂರಿಗೆ ಬ್ಯಾಟಿಂಗ್‌ ಬಲವೇ ಆಸ್ತಿ. ಪಡಿಕ್ಕಲ್‌, ಕೊಹ್ಲಿ, ಎಬಿಡಿ, ಮ್ಯಾಕ್ಸ್‌ವೆಲ್‌, ಸಿಡಿದು ನಿಂತರೆ ದೊಡ್ಡ ಮೊತ್ತಕ್ಕೇನೂ ಕೊರತೆ ಇಲ್ಲ. ಆದರೆ ಕೆಲವೊಮ್ಮೆ ಸಾಮೂಹಿಕ ಕುಸಿತ ಕಾಣುವ ಮೂಲಕ ಆಘಾತ ಹುಟ್ಟಿಸುತ್ತದೆ. ಇದಕ್ಕೆ ಕೋಲ್ಕತ ಎದುರಿನ ಪ್ರದರ್ಶನವೇ ಆತ್ಯುತ್ತಮ ನಿದರ್ಶನ.

Advertisement

ಕೊಹ್ಲಿಗೆ ಹಲವು ಸವಾಲು: ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಎರಡಂಕಿಯ ಸ್ಕೋರ್‌ ದಾಖಲಿಸಲಿಕ್ಕೂ ಪರದಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಬ್ಯಾಟಿಂಗ್‌ ಫಾರ್ಮ್ಗೆ ಮರಳಬೇಕಾದ ಅನಿವಾರ್ಯತೆ ಕೊಹ್ಲಿ ಮುಂದಿದೆ. ಜತೆಗೆ ತಂಡದ ನಾಯಕನಾಗಿ ಇದು ತನ್ನ ಕೊನೆಯ ಋತು ಎಂಬುದಾಗಿ ಕೊಹ್ಲಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಆದರೆ ಇನ್ನೊಂದು ಪಂದ್ಯವನ್ನು ಸೋತರೂ ಕೊಹ್ಲಿ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂಬ ವದಂತಿಗಳೂ ಇವೆ! ಹೀಗಿರುವಾಗ ಕೊಹ್ಲಿ ಬ್ಯಾಟ್‌ ಮಾತಾಡಬೇಕು, ತಂಡ ಗೆಲುವಿನ ಹಳಿ ಏರಬೇಕು.

ಆರ್‌ಸಿಬಿ ಬೌಲಿಂಗ್‌ ಕೂಡ ಸುಧಾರಣೆ ಕಾಣಬೇಕಿದೆ. ಲಂಕಾ ಸ್ಪಿನ್ನರ್‌ ಹಸರಂಗ, ಕಿವೀಸ್‌ ವೇಗಿ ಕೈಲ್‌ ಜೇಮಿಸನ್‌, ಹರ್ಷಲ್‌ ಪಟೇಲ್‌, ಸಿರಾಜ್‌ ಅವರ ಬೌಲಿಂಗ್‌ ಹರಿತಗೊಳ್ಳಬೇಕಾಗಿದೆ.

ಚೆನ್ನೈ ಸಮರ್ಥ ಪಡೆ: ಚೆನ್ನೈ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ. ಇದಕ್ಕಿಂತ ಮಿಗಿಲಾಗಿ ಧೋನಿ ಅವರ ಜಾಣ್ಮೆಯ ನಾಯಕತ್ವವಿದೆ. ಇಲ್ಲಿ 8ನೇ ಕ್ರಮಾಂಕದವರೆಗೂ ಬ್ಯಾಟ್‌ ಬೀಸುವವರಿದ್ದಾರೆ. ಇವರಲ್ಲಿ ಅನೇಕರು ಆಲ್‌ರೌಂಡರ್ ಆಗಿರುವುದೊಂದು ಪ್ಲಸ್‌ ಪಾಯಿಂಟ್‌. ಋತುರಾಜ್‌ ಗಾಯಕ್ವಾಡ್‌, ಫಾ ಡು ಪ್ಲೆಸಿಸ್‌, ಮೊಯಿನ್‌ ಅಲಿ, ಅಂಬಾಟಿ ರಾಯುಡು, ಡ್ವೇನ್‌ ಬ್ರಾವೊ, ರವೀಂದ್ರ ಜಡೇಜ… ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಧೋನಿ ಮತ್ತು ಸುರೇಶ್‌ ರೈನಾ ಬ್ಯಾಟಿಂಗ್‌ ಲಯ ಹೊರಟು ಹೋಗಿದೆ.

ಬೌಲಿಂಗ್‌ ವಿಭಾಗದಲ್ಲಿ ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಸ್ಪಿನ್‌ ವಿಭಾಗವೂ ಅಪಾಯಕಾರಿ. ಜಡೇಜ ಮತ್ತು ಮೊಯಿನ್‌ ಅಲಿ ಉತ್ತಮ ಬ್ರೇಕ್‌ ಒದಗಿಸಬಲ್ಲರು.

ಕ್ವಾರಂಟೈನ್‌ ಸಮಸ್ಯೆಯಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಆಗ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಜಾಗ ಬಿಡಬೇಕಾಗಬಹುದು.

ಮುಖಾಮುಖಿ

ಒಟ್ಟು ಪಂದ್ಯ   27

ಬೆಂಗಳೂರು ಜಯ          09

ಚೆನ್ನೈ ಕಿಂಗ್ಸ್‌ ಜಯ         17

ಫ‌ಲಿತಾಂಶವಿಲ್ಲ              01

ಪಂದ್ಯಾರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next