ಬೆಂಗಳೂರು: ಕೇಟರಿಂಗ್ ಪಾಲುದಾರನ ಕಿರುಕುಳ ದಿಂದ ಬೇಸತ್ತಿದ್ದ ಉದ್ಯಮಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬೇಗೂರಿನ ಅಕ್ಷಯ್ ನಗರದ ನಿವಾಸಿ ಕಲೋಲ್ ದತ್ತಾ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಕೇಟರಿಂಗ್ ಪಾಲುದಾರ ಮರಿಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಕಲೋಲ್ ದತ್ತಾ ಖಾಸಗಿ ಆಸ್ಪತ್ರೆಯ ಆಹಾರ ಮತ್ತು ಸುರಕ್ಷತಾ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಕ್ಯಾಟರಿಂಗ್ ಗುತ್ತಿಗೆ ಪಡೆದಿದ್ದ ಎ.ಜೆ.ಮರಿಸ್ವಾಮಿ, ಬೆಳ್ಳಂದೂರಿನ ಮತ್ತೂಂದು ಖಾಸಗಿ ಆಸ್ಪತ್ರೆಯ ಕೇಟರಿಂಗ್ ಗುತ್ತಿಗೆಯನ್ನು ಪಡೆದುಕೊಂಡಿದ್ದರು. ಕಲೋಲ್ ದತ್ತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗೆ ಪತಿಯ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ, ಅವರ ಕೆಲಸಕ್ಕೆ ರಾಜೀನಾಮೆ ಸಲ್ಲಿಸುವಂತೆ ಮಾಡಿದ್ದರು ಎಂದು ಮೃತ ಕುಲಾಲ್ ದತ್ತಾ ಪತ್ನಿ ಆರ್.ಸಜಿನಿ ದತ್ತಾ ನೀಡಿರುವ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಪಾಲುದಾರಿಕೆ ವ್ಯವಹಾರ: 2018ರಲ್ಲಿ ಮರಿಸ್ವಾಮಿ ಜತೆ ಸೇರಿಕೊಂಡು ಪತಿ ಸಾಯಿ ಹಾಸ್ಪಿಟಾಲಿಟಿ ಸರ್ವಿಸ್ ಹೆಸರಿನಲ್ಲಿ ಕೇಟರಿಂಗ್ ಆರಂಭಿಸಿದ್ದರು. ವಿವಿಧ ಆಸ್ಪತ್ರೆಗೆ ಕೇಟರಿಂಗ್ ಸೇವೆ ನೀಡುತ್ತಿದ್ದರು. ಅದರಿಂದ ಬಂದ ಲಾಭಾಂಶದಲ್ಲಿ ಪತಿಗೆ ಶೇ.40 ಹಾಗೂ ಮರಿಸ್ವಾಮಿ ಶೇ.60ರಷ್ಟು ಪಡೆದುಕೊಳ್ಳುತ್ತಿ ದ್ದರು ಎಂದು ಸಜನಿ ದತ್ತಾ ದೂರಿನಲ್ಲಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉದ್ಯಮ ನಷ್ಟವಾಗಿದೆ ಎಂದು ಹೇಳಿ ನನ್ನ ಪತಿಗೆ ನಿಂದನೆ ಮಾಡುತ್ತಿದ್ದರು. ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಉದ್ಯಮಕ್ಕೆ ಸಂಬಂಧಿಸಿದಂತೆ ಮರಿಸ್ವಾಮಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿರಲಿಲ್ಲ. ಪತಿಯೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ನಿರ್ವಹಣೆ ಮಾಡುತ್ತಿದ್ದರು. ಉದ್ಯಮಕ್ಕೆ ಸಮಸ್ಯೆ ಆಗಬಾರದೆಂದು, ನನ್ನ ಚಿನ್ನಾಭರಣ ಹಾಗೂ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡು ಉದ್ಯಮಕ್ಕೆ ವ್ಯಯಿಸಲಾಗಿತ್ತು ಎಂದು ಉಲ್ಲೇಖೀಸಿದ್ದಾರೆ.
ಮರಿಸ್ವಾಮಿ ಹಣವನ್ನು ವ್ಯಯಿಸದೆ ಆಸ್ಪತ್ರೆಯ ಕೇಟರಿಂಗ್‌ನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದರು. ಬಿಟ್ಟು ಕೊಡದೆ ಇದ್ದರೆ ಕಂಪನಿಯಿಂದ ಹೊರಕ್ಕೆ ಹೋಗುವಂತೆ ಹೇಳಿದ್ದರು. 10 ದಿನಗಳ ಹಿಂದೆ ಪತಿಗೆ ಕರೆ ಮಾಡಿ ನಿಂದಿಸಿದ್ದರು. ಮರಿಸ್ವಾಮಿ ಕಿರುಕುಳದಿಂದ ಪತಿ ನೊಂದಿದ್ದರು. ಹೀಗಾಗಿ ಮರಿಸ್ವಾಮಿಯ ಕಿರುಕುಳದಿಂದಲೇ ಬೇಸತ್ತು ಅರಕೆರೆಯ ಬಿಎನ್‌ಎಸ್ ಕಂಪರ್ಟ್ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸಜಿನಿ ದತ್ತಾ ಉಲ್ಲೇಖೀಸಿದ್ದಾರೆ.