Advertisement
ಐಪಿಎಲ್‌ನ ಹಿಂದಿನೆರಡೂ ಪಂದ್ಯ ಗಳಲ್ಲಿ ಧೋನಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಆದರೆ ಡೆಲ್ಲಿ ವಿರುದ್ಧ 8ನೇ ಕ್ರಮಾಂಕದಲ್ಲಿ ಆಡಲಿಳಿದು ತಾನಿನ್ನೂ ಹಳೆಯ ಧೋನಿಯೇ ಆಗುಳಿದಿದ್ದೇನೆ ಎಂಬುದನ್ನು ಸಾರಿದರು. ಆಗಲೇ ಪಂದ್ಯ ಚೆನ್ನೈ ಕೈಯಿಂದ ಜಾರಿತ್ತು. ಆದರೆ ಅಭಿಮಾನಿಗಳಿಗೆ ಧೋನಿ ಬ್ಯಾಟಿಂಗನ್ನು ಕಣ್ತುಂಬಿಸಿಕೊಳ್ಳುವ ಕಾತರ. 17ನೇ ಓವರ್‌ನಲ್ಲಿ ಧೋನಿ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಭಿ ಮಾನಿಗಳ ಭೋರ್ಗರೆತ ಮುಗಿಲು ಮುಟ್ಟಿತು. ಬಳಿಕ ತಾನೆದುರಿಸಿದ ಮುಕೇಶ್ ಕುಮಾರ್ ಅವರ ಮೊದಲ ಎಸೆತವನ್ನೇ ಬೌಂಡರಿಗೆ ರವಾನಿಸಿ ದಾಗಲಂತೂ ಸ್ಟೇಡಿಯಂನಲ್ಲಿ ಮಿಂಚಿನ ಸಂಚಾರ. ಮುಕೇಶ್ ಅವರ ಅದೇ ಓವರ್‌ನಲ್ಲಿ ಮತ್ತೆರಡು ಬೌಂಡರಿ ಬಾರಿಸಿ ದಾಗಲಂತೂ ಧೋನಿಗೆ ಧೋನಿಯೇ ಸಾಟಿ ಎಂಬುದು ಸಾಬೀತಾಯಿತು.
ಪಂದ್ಯದ ಅಂತಿಮ ಓವರ್‌ನಲ್ಲಿ ಧೋನಿ ಬ್ಯಾಟಿಂಗ್ ಇನ್ನಷ್ಟು ಕಳೆಗಟ್ಟಿತು. ಆ್ಯನ್ರಿಚ್ ನೋರ್ಜೆ ಎಸೆದ ಈ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಬಡಿದಟ್ಟಿದ ಧೋನಿ, 2ನೇ ಎಸೆತವನ್ನು ಒಂದೇ ಕೈಯಲ್ಲಿ ಮಿಡ್ ವಿಕೆಟ್ ಮೇಲಿಂದ ಸಿಕ್ಸರ್‌ಗೆ ರವಾನಿಸಿದಾಗ ವೀಕ್ಷಕರಿಗೆ, ಟಿವಿ ಮುಂದೆ ಕುಳಿತವರಿಗೆ ದಿಗ್ಭ್ರಮೆ! ಗತಕಾಲದ ಧೋನಿ ಮತ್ತೆ ಪ್ರತ್ಯಕ್ಷರಾಗಿದ್ದರು! ಒಟ್ಟು 16 ಎಸೆತ ಎದುರಿಸಿದ ಧೋನಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಬ್ಯಾಟಿಂಗ್ ಅಬ್ಬರ ಕಂಡ ಅಭಿಮಾನಿಗಳಿಗೆ, ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಡ್ತಿ ಪಡೆದು ಬರಬಾರದಿತ್ತೇ ಎನಿಸಿದ್ದು ಸುಳ್ಳಲ್ಲ.
Related Articles
Advertisement
ಡೆಲ್ಲಿಯ 5ಕ್ಕೆ 191 ರನ್ನುಗಳ ದೊಡ್ಡ ಮೊತ್ತಕ್ಕೆ ಜವಾಬು ನೀಡಿದ ಚೆನ್ನೈ 6 ವಿಕೆಟಿಗೆ 171 ರನ್ ಮಾಡಿತು. ಧೋನಿ ಬ್ಯಾಟಿಂಗ್ ಪರಾಕ್ರಮದಿಂದ ಸೋಲಿನ ಅಂತರ ತಗ್ಗಿತು.
ಧೋನಿ ದಾಖಲೆಗಳುಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಸ್ಥಾಪಿಸಿದ ದಾಖಲೆಗಳು…
·350 ಬೌಂಡರಿ
ಐಪಿಎಲ್‌ನಲ್ಲಿ 350 ಬೌಂಡರಿ ಬಾರಿಸಿದರು. ಅವರು ಈ ಯಾದಿಯಲ್ಲಿ ಕಾಣಿಸಿಕೊಂಡ 17ನೇ ಆಟಗಾರ.
·ಕೀಪಿಂಗ್ ದಾಖಲೆ
ಟಿ20 ಪಂದ್ಯಗಳಲ್ಲಿ 300 ವಿಕೆಟ್ ಪತನಕ್ಕೆ (213 ಕ್ಯಾಚ್/87 ಸ್ಟಂಪಿಂಗ್) ಕಾರಣರಾದ ವಿಶ್ವದ ಮೊದಲ ವಿಕೆಟ್ ಕೀಪರ್. ಪೃಥ್ವಿ ಶಾ ಕ್ಯಾಚ್ ಪಡೆದ ಸಂದರ್ಭದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು.
·ಅಂತಿಮ ಓವರ್ ಸಿಕ್ಸರ್
ಐಪಿಎಲ್ ಪಂದ್ಯದ ಅಂತಿಮ ಓವರ್‌ನಲ್ಲಿ ಅತ್ಯಧಿಕ 61 ಸಿಕ್ಸರ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ಧೋನಿ ಒಟ್ಟು 303 ಎಸೆತಗಳನ್ನು ನಿಭಾಯಿಸಿದ್ದಾರೆ.
·7 ಸಾವಿರ ರನ್
ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ ವಿಶ್ವದ 3ನೇ ಹಾಗೂ ಏಷ್ಯಾದ ಮೊದಲ ಕೀಪರ್ (7,036). ಉಳಿದಿಬ್ಬರೆಂದರೆ ಕ್ವಿಂಟನ್ ಡಿ ಕಾಕ್ (8,578) ಮತ್ತು ಜಾಸ್ ಬಟ್ಲರ್ (7,721).
·ಅಜೇಯ ಆಟ
ಚೇಸಿಂಗ್ ವೇಳೆ ಚೆನ್ನೈ ಸೋತ ಸಂದರ್ಭದಲ್ಲಿ 8ನೇ ಸಲ ಔಟಾಗದೆ ಉಳಿದರು.