ಧಾರವಾಡ: ಪ್ರಸಕ್ತ ಸಾಲಿಗಾಗಿ ಉದ್ದು ಬೆಳೆ ಸಮೀಕ್ಷೆ (ಆನೆವಾರಿ)ಕಾರ್ಯ ಶನಿವಾರ ಅಮ್ಮಿನಬಾವಿ ಹೋಬಳಿಯ ಕಬ್ಬೇನೂರು ಗ್ರಾಮದಲ್ಲಿ ನಡೆಯಿತು. ಗ್ರಾಮದ ರೈತ ಶಂಕರಗೌಡ ಮುದಿಗೌಡ್ರ ಅವರು ಮೂರು ಎಕರೆ ಜಮೀನಿನಲ್ಲಿ ಬೆಳೆದ ಉದ್ದು ಬೆಳೆ ಕಟಾವು ಅಂದಾಜು ಸಮೀಕ್ಷೆಯಲ್ಲಿ ಜಿಲ್ಲಾಧಿಕಾರಿ ಎಂ. ದೀಪಾ ಪಾಲ್ಗೊಂಡು ಪರಿಶೀಲನೆ ನಡೆಸಿದರು.
ರೈತರ ಜಮೀನುಗಳಲ್ಲಿ ಬೆಳೆದ ಹೆಸರು, ಈರುಳ್ಳಿ ಬೆಳೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಬಳಿಕ ಸರ್ಕಾರದ ನಿಯಮಾವಳಿಯಂತೆ ಗ್ರಾಮದ ಬ್ಲಾಕ್ ನಂ:276ರ 3 ಎಕರೆ 33 ಗುಂಟೆ ಆಯ್ಕೆ ಮಾಡಿಕೊಂಡು ರೈತ ಶಂಕರಗೌಡ ಅವರ ಜಮೀನಿನಲ್ಲಿ ಮಳೆ ಆಶ್ರಿತವಾಗಿ ಬೆಳೆದ ಉದ್ದು ಬೆಳೆ ತೆಗೆದು ಅಳತೆ ಮಾಡಿದರು.
ಈ ವೇಳೆ ಮಾತನಾಡಿದ ರೈತ ಶಂಕರಗೌಡ, ಮೂರು ಎಕರೆ ಉದ್ದು ಬೆಳೆಯನ್ನು ಸ್ಥಾನಿಕ ಲಭ್ಯ ತಳಿಯ ಬೀಜಗಳನ್ನು ಬಳಸಿ ಬೆಳೆದಿದ್ದೇನೆ. ಸುಮಾರು ಮೂರು ಲೀಟರ್ ಕೀಟನಾಶಕ ಸಿಂಪಡಣೆ ಮಾಡಿದ್ದೆ. ಸರಿಯಾದ ಮಳೆ ಬಾರದ್ದರಿಂದ ಬೆಳೆ ಬಂದಿಲ್ಲ. ಕುರುಚಲು ಗಿಡ ಮತ್ತು ಅದರಲ್ಲಿ ಜೊಳ್ಳು ಕಾಳಿನ ಸಣ್ಣ ತೆನೆಗಳು ಮೂಡಿವೆ. ತೃಪ್ತಿಕರ ಇಳುವರಿ ಸಿಕ್ಕಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಪ್ರಸಕ್ತ ವರ್ಷ ಉದ್ದು ಬೆಳೆ ಸರಿಯಾಗಿ ಬಂದಿಲ್ಲ. ಕನಿಷ್ಠ ಉತ್ಪಾದನೆಯಾಗಿದೆ ಎಂದು ಹೇಳಿದರು. ಸಮೀಕ್ಷೆ ಕಟಾವು ಕಾರ್ಯದಲ್ಲಿ ಪ್ರೊಬೆಷನರಿ ಎಸಿಗಳಾದ ಜಿ.ಡಿ. ಶೇಖರ, ಪಾರ್ವತಿ ರೆಡ್ಡಿ, ತಹಶೀಲ್ದಾರ್ ಪ್ರಕಾಶ ಕುದರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿ ದೀಪಕ ಮಡಿವಾಳ, ಕೃಷಿ ವಿಮಾ ಕಂಪನಿ (ಎಐಸಿ)ಯ ಪ್ರತಿನಿಧಿ ಪೂಜಿತ ಆಲೂರ, ಪ್ರದೀಪ ಪಾಟೀಲ, ವಿನಾಯಕ ದೀಕ್ಷಿತ, ಅಲ್ಲಾಭಕ್ಷ ಪಿಂಜಾರ, ನಾಸಿರ ಅಮರಗೊಳ, ಕುಮಾರ ಪಡೆಪ್ಪನವರ, ರಾಮಚಂದ್ರ ನೆಮದಿ, ಭೀಮಪ್ಪ ಕುರುಬರ, ಮಹಾಂತೆಶ ಕಿತ್ತೂರ, ಉಷಾ ಕುನ್ನೂರ, ದೇವಕಿ ಬಾರ್ಕಿ, ಹಾರೋಬೆಳವಡಿ ಗ್ರಾಪಂ ಅಧ್ಯಕ್ಷ ಕಲ್ಲನಗೌಡ ಮುದಿಗೌಡ್ರ, ಬಸವರಾಜ ಬೂದಿಹಾಳ, ಈರಣ್ಣ ಹಸಬಿ, ಹಸನಸಾಬ ನಧಾಫ್ ಮುಂತಾದವರು ಉಪಸ್ಥಿತರಿದ್ದರು.