ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‌ವೇಯಲ್ಲಿ ಕೆಲಸ ನಡೆಯುತ್ತಿದೆ. ಆಷಾಡ ಮಾಸದ ಗಾಳಿಗೆ ಮಣ್ಣಿನ ಧೂಳಿನ ಕಣಗಳು ಗ್ರಾಮಗಳು ಹಾಗೂ ಬೆಳೆದಿರುವ ಬೆಳೆಗಳ ಮೇಲೆ ಬೀಳುತ್ತಿರುವುದರಿಂದ ಬೆಳೆಗೆ ಹಾನಿಯಾಗುತ್ತಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಧೂಳು ಹಾರದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಟ್ಟಕೋಟೆ ಗ್ರಾಪಂ ಆವರಣದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಆರೋಗ್ಯ, ಬೆಳೆಗೆ ಹಾನಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಯಿಂದ ಆಷಾಢ ಮಾಸದ ಗಾಳಿಗೆ ಮಣ್ಣಿನ ಧೂಳು ಗ್ರಾಮಗಳತ್ತ ಬರುತ್ತಿರುವುದರಿಂದ ರೇಷ್ಮೆ ಹಾಗೂ ತರಕಾರಿ ಬೆಳೆಗಳಿಗೆ ಹಾಗೂ ಸುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶ್ವಾಸಕೋಶ ಸಂಬಂಧಿತ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಸಭೆ ಕರೆದು ಪರಿಹಾರದ ಚರ್ಚೆ: ಧೂಳು ಹಾರುತ್ತಿರುವುದಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರ, ಮಂಗಳವಾರ ರೈತರ ಸಭೆ ಕರೆದು ಚರ್ಚಿಸಲಾಗುವುದು. ಸಭೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರೈತರಿಗೆ ಬಹಳ ನಷ್ಟವಾಗಿದ್ದು, ನಾವು ಸಹ ರೈತರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದು ತಹಶೀಲ್ದಾರ್ ಕೇಶವಮೂರ್ತಿ ತಿಳಿಸಿದರು.
ಶಾಶ್ವತ ಪರಿಹಾರ ಒದಗಿಸಲು ಆಗ್ರಹ: ರೈತ ಮುನಿಶಾಮಪ್ಪ ಮಾತನಾಡಿ, ಕಳೆದ ಎರಡು ವರ್ಷದಿಂದ ಆಷಾಢ ಮಾಸದಲ್ಲಿ ಗಾಳಿ ಹೆಚ್ಚಾಗಿರುವುದರಿಂದ ಮಣ್ಣಿನ ಧೂಳಿನ ಕಣಗಳು ಬೆಳಗಳ ಮೇಲೆ ನೇರವಾಗಿ ಬೀಳುತ್ತಿರುವುದರಿಂದ ನಮಗೆ ಹೆಚ್ಚಿನ ನಷ್ಟ ಅನುಭವಿಸುವಂತೆ ಆಗಿದೆ. ಈ ಭಾಗದ ಬೆಟ್ಟಕೋಟೆ, ದೊಡ್ಡಹೊಸಹಳ್ಳಿ, ಬಾಲದಿಂಬನಹಳ್ಳಿ, ಚನ್ನಹಳ್ಳಿ ಗ್ರಾಮಗಳಲ್ಲಿ ರೇಷ್ಮೆ ಬೆಳೆಗಾರರಿದ್ದು, ಹಿಪ್ಪನೇರಳೆ ಸೊಪ್ಪಿನ ಮೇಲೆ ಮಣ್ಣು ಧೂಳೂ ಇದ್ದರೆ ಅದನ್ನು ರೇಷ್ಮೆ ಹುಳುಗಳಿಗೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ನಷ್ಟ ಉಂಟಾಗುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಾಪಂ ಇಒ ಮುರುಡಯ್ಯ, ಗ್ರಾಪಂ ಪಿಡಿಒ ಸೋಮಮೂರ್ತಿ, ಚನ್ನರಾಯಪಟ್ಟಣ ಪಿಎಸ್‌ಐ ಹಾಗೂ ಪೋಲಿಸ್ ಸಿಬ್ಬಂದಿ ಪ್ರತಿಭಟನಾಕರರಿಗೆ ಸಾಂತ್ವನ ಹೇಳಿದರು.