Advertisement

ಬೆಳೆ ಹಾನಿಗೆ ಜುಜುಬಿ ಪರಿಹಾರ! ಭತ್ತ 1 ಗುಂಟೆಗೆ 60 ರೂ.!

01:42 AM Dec 16, 2021 | Team Udayavani |

ಮಂಗಳೂರು: ಬಾಳೆ ಗಿಡಕ್ಕೆ 20 ಪೈಸೆ, ಅಡಿಕೆ ಮರಕ್ಕೆ 3 ರೂ., ತೆಂಗಿನ ಮರಕ್ಕೆ 90 ರೂ., ಭತ್ತ ಒಂದು ಗುಂಟೆ (ಎರಡೂವರೆ ಸೆಂಟ್ಸ್‌)ಗೆ 60 ರೂ..!

Advertisement

ಇದು ಯಾವುದೇ ಹರಾಜಿನ ಮೊತ್ತವಲ್ಲ; ಬೆಳೆ ಹಾನಿಗೆ ಸಂಬಂಧಿಸಿ ಸರ ಕಾರ ರೈತರಿಗೆ ನೀಡುವ ಜುಜುಬಿ ಪರಿ ಹಾರ ಧನ. 25ರಿಂದ 30 ವರ್ಷಗಳ ಹಿಂದಿನ ಲೆಕ್ಕಾಚಾರ ಇದಾಗಿದ್ದು, ಆ ಬಳಿಕ ಪರಿಷ್ಕರಣೆಗೊಂಡಿಲ್ಲ. ಮೊತ್ತವನ್ನು ಪರಿಷ್ಕರಿಸುವಂತೆ ರೈತರು ಹಲವು ವರ್ಷಗಳಿಂದ ಬೇಡಿಕೆ ಮಂಡಿಸುತ್ತಿದ್ದಾರಾದರೂ ಈಡೇ ರಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳೂ ಇದು ನಿಕೃಷ್ಟ ಮೊತ್ತ ಎಂದು ಒಪ್ಪಿಕೊಳ್ಳು ತ್ತಾರೆ. ಆದರೆ ಸರಕಾರ ಮಾತ್ರ ಇದನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ.

ಈ ವರ್ಷ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಬಂದರೂ ಕಟಾವಿನ ಸಂದರ್ಭ ಸುರಿದ ವ್ಯಾಪಕ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿತ್ತು. ಕಟಾವಿಗೆ ಸಿದ್ಧವಾಗಿದ್ದ ಗದ್ದೆಗಳಲ್ಲಿ ಮಳೆ/ನೆರೆ ನೀರು ನಿಂತು ಪೈರು ಮಾತ್ರವಲ್ಲ ಬೈಹುಲ್ಲು ಕೂಡ ಕೊಳೆತು ನಷ್ಟವಾಗಿತ್ತು.

ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ಮೊತ್ತವನ್ನು ನಿಗದಿ ಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿದೆ ಎಂದು ಕಂದಾಯ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

ಮಂಗಳೂರು ತಾಲೂಕಿನಲ್ಲಿ ಇತರ ಎಲ್ಲ ತಾಲೂಕುಗಳಿಗಿಂತ ಅಧಿಕ ಅಂದರೆ 95.77 ಎಕರೆ ಭತ್ತದ ಕೃಷಿಗೆ ಹಾನಿಯಾಗಿದೆ. 21 ಮಂದಿ ರೈತರಿಗೆ ರಾಷ್ಟ್ರೀಯ ವಿಪತ್ತ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗ ಸೂಚಿಯನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಯಿಂದ 2,60,480.8 ರೂ. ಬಿಡುಗಡೆಯಾಗಿದೆ.

Advertisement

ಇದನ್ನೂ ಓದಿ:ವಿದ್ಯಾರ್ಥಿಗಳ ಹಾಸ್ಟೆಲ್‌ ಸಮಸ್ಯೆಗೆ ಶಾಶ್ವತ ಪರಿಹಾರ: ಸಿಎಂ

217 ಹೆಕ್ಟೇರ್‌ಗೂ ಅಧಿಕ ಭತ್ತದ
ಫ‌ಸಲು ನಷ್ಟ
ಕೃಷಿ ಇಲಾಖೆಯ ಅಂಕಿ- ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ನವೆಂಬರ್‌ ತನಕ ಒಟ್ಟು 85.096 ಹೆಕ್ಟೇರ್‌ ಭತ್ತದ ಬೆಳೆ ಹಾನಿಯಾಗಿದೆ. ಅಂತೆಯೇ ಉಡುಪಿ ಜಿಲ್ಲೆಯಲ್ಲಿ 257 ರೈತರ 132.61 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ.

ಹಳೆಯ ಮಾನದಂಡದ ಪ್ರಕಾರ ಪರಿಹಾರ ನೀಡಲಾಗುತ್ತದೆ. ರಾಜ್ಯ ಸರಕಾರದಿಂದ ಪ್ರತ್ಯೇಕ ಪರಿಹಾರ ಸಿಗುವ ಸಾಧ್ಯತೆ ಇದ್ದು, ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ತೀರ್ಮಾನವಾಗುತ್ತದೆ.
– ಗುರುಪ್ರಸಾದ್‌,
ತಹಶೀಲ್ದಾರ್‌, ಮಂಗಳೂರು

ಎನ್‌ಡಿಆರ್‌ಎಫ್‌/ ಎಸ್‌ಡಿಆರ್‌ಎಫ್‌ನಲ್ಲಿ ನಿಕೃಷ್ಟ ಪರಿಹಾರ ನೀಡಲಾಗುತ್ತಿದ್ದು, ಅದನ್ನು ಪ್ರಸ್ತುತ ಮಾರುಕಟ್ಟೆ ಧಾರಣೆ ಮತ್ತು ಖರ್ಚುಗಳ ಆಧಾರದಲ್ಲಿ ಹೆಚ್ಚಿಸಬೇಕು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಭತ್ತದ ಬೆಳೆಗೆ ಕರಾವಳಿ ವಿಶೇಷ ಪ್ಯಾಕೇಜ್‌ ನೀಡಿದ್ದು, ಬಳಿಕ ಬಂದ ಬಿ.ಎಸ್‌. ಯಡಿಯೂರಪ್ಪ ಸರಕಾರ ರದ್ದುಪಡಿಸಿದೆ. ತತ್‌ಕ್ಷಣ ಪುನರಾರಂಭಿಸ ಬೇಕು.
– ರವಿಕಿರಣ್‌ ಪುಣಚ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ‌

 

Advertisement

Udayavani is now on Telegram. Click here to join our channel and stay updated with the latest news.

Next