Advertisement

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

03:49 PM Apr 23, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಿಹಾರದಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದಕ್ಕೆ ಸೋತರು. ಅನಂತ ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಅಂದಿದ್ದರು. ಸಂವಿಧಾನದಲ್ಲಿರುವ ಸಮಾನ ಅವಕಾಶ ಹಕ್ಕಿಗೆ ವಿರುದ್ಧ ಇರೋರು ಬಿಜೆಪಿಯವರು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ವಾಗ್ಧಾಳಿ ನಡೆಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತೆ ಅಂತ ಪ್ರಧಾನಿ ಮೋದಿಯವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ.

ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿಯಾಗಿ ಮಾತಾಡಿದರೆ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಬೇಕು ಎಂದರು.

ನರೇಂದ್ರ ಮೋದಿ ಹಾಗೆ ಮಾತಾಡೋಕೆ ಯಾವುದೋ ಪಂಚಾಯಿತಿ ಸದಸ್ಯ ಅಲ್ಲ, ಅವರು ಪ್ರಧಾನಮಂತ್ರಿ. ಎಲ್ಲ ನಾಗರಿಕರ ಜೀವ ಕಾಪಾಡೋ ಮೂಲಭೂತ ಜವಾಬ್ದಾರಿ ಅವರ ಮೇಲಿದೆ. ತೆರಿಗೆ ಕಟ್ಟಬೇಕಾದರೆ ಒಂದೇ ಧರ್ಮ, ಭಾಷೆಯವರು ತೆರಿಗೆ ಕಟ್ಟಿರಲ್ಲ. ತೆರಿಗೆಯನ್ನು ಸರ್ವರಿಗೂ ಸಮಪಾಲು, ಸಮಬಾಳು ಆಶಯದ ಮೇಲೆ ಹಂಚಬೇಕು ಎಂದರು.

ಬರೀ ಪಾಕಿಸ್ತಾನ, ಹಿಂದೂ-ಮುಸ್ಲಿಂ, ಪಾಳು ಬಿದ್ದಿರುವ ದೇವಸ್ಥಾನ, ಮಸೀದಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬದುಕೋದಕ್ಕೆ ಏನು ಮಾಡಬೇಕು ಅದನ್ನ ಮಾಡಿಲ್ಲ. ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡಿಲ್ಲ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದು, ಇದರಲ್ಲಿ ಕುಖ್ಯಾತಿ ಪಡೆದಿದ್ದಾರೆ. ಯಾರೋ ಒಬ್ಬ ಹತ್ಯೆ ಮಾಡಿದ್ದಕ್ಕೆ ಇಡೀ ಸಮುದಾಯ ದೂಷಿಸೋದು ಸರಿಯಲ್ಲ. ಆಪರೇಷನ್‌ ಕಮಲ ಮಾಡೋದ್ರಲ್ಲಿ ಇಡೀ ಪ್ರಪಂಚದಲ್ಲಿ ಇವರಷ್ಟು ಕುಖ್ಯಾತಿ ಪಡೆದವರಿಲ್ಲ. ಮುಂದೇನೂ ಆಪರೇಶನ್‌ ಕಮಲ ಮಾಡ್ತಾರೆ, ಆದರೆ ಅದು ಯಶಸ್ವಿ ಆಗಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ ಸೇರಿದಂತೆ ಇತರರಿದ್ದರು.

Advertisement

ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ
ನಕ್ಸಲ್‌ ದಾಳಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಹಿಂದೆ ನಡೆದ ನಕ್ಸಲ್‌ ದಾಳಿಯಲ್ಲಿ 27 ಕಾಂಗ್ರೆಸ್‌ ನಾಯಕರನ್ನು ಕಳೆದುಕೊಂಡಿದ್ದೀವಿ. ನಕ್ಸಲ್‌ ಹಾಗೂ ಬಿಜೆಪಿ ಸೂತ್ರಧಾರರ ನಡುವೆ ಒಳ್ಳೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ಮೋದಿಯವರು ಅಮೃತ ಕಾಲ ಎಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ. 10 ವರ್ಷ ಏನು ಮಾಡಿದ್ದಾರೆ ಎಂಬುದನ್ನು ಜಾಹೀರಾತಿನಲ್ಲಿ ಹೇಳಿಲ್ಲ. ಸಾಲ ಯಾರಿಗಾಗಿ ಮಾಡಿದ್ದಾರೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next