Advertisement

ಪರ್ಕಳ ಅಪಘಾತ ವೇಳೆ ಘರ್ಷಣೆ: ಮಣಿಪಾಲ ಠಾಣೆಗೆ ಮುತ್ತಿಗೆ ಹಾಕಿದ ಸಂಘಟನೆಗಳು

09:26 PM Nov 28, 2021 | Team Udayavani |

ಉಡುಪಿ: ಪರ್ಕಳ ಪೇಟೆಯ ಬಾಬುರಾಯ ಸರ್ಕಲ್‌ ಬಳಿ ನಡೆದ ಅಪಘಾತ ಹಾಗೂ ಘರ್ಷಣೆ ಅನಂತರ ರಾಜಿಸಂಧಾನದ ಮೂಲಕ ಇತ್ಯರ್ಥ ಕಂಡ ಘಟನೆ ರವಿವಾರ ನಡೆದಿದೆ.

Advertisement

ಪರ್ಕಳದ ರಾ.ಹೆ.ಯಲ್ಲಿ ಆತ್ರಾಡಿಯ ಮುಸ್ಲಿಂ ಯುವಕನೊಬ್ಬ ತನ್ನ ಹೊಸ ಬಲೆನೋ ಕಾರನ್ನು ಚಲಾಯಿಸಿಕೊಂಡು ಬಂದು ಬೇರೊಂದು ವಾಹನಕ್ಕೆ ಢಿಕ್ಕಿಹೊಡೆದಿದ್ದಾನೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ವಡಬಂಡೇಶ್ವರ ಭಾಗದ ನಗರಸಭೆ ಕೌನ್ಸಿಲರ್‌ ಯೋಗೀಶ್‌ ಸಾಲ್ಯಾನ್‌ ಅವರು ಸಂಧಾನಕ್ಕೆ ತೆರಳಿದ್ದಾರೆ. ಈ ವೇಳೆ ಪರಸ್ಪರ ಮಾತುಕತೆ ನಡೆದಿದೆ.

ಅನಂತರ ಯೋಗೀಶ್‌ ಸಾಲ್ಯಾನ್‌ ಅವರು ಅಲ್ಲಿಂದ ತೆರಳಿದ್ದಾರೆ. ಈ ವೇಳೆ ಮುಸ್ಲಿಂ ಯುವಕ ತನ್ನ ಸ್ನೇಹಿತರಿಗೆ ಕರೆ ಮಾಡಿ ಈ ಘಟನೆ ಬಗ್ಗೆ ತಿಳಿಸಿದ್ದ. ಈ ವೇಳೆ ಸುಮಾರು 25ರಿಂದ 30 ಮಂದಿಯ ಯುವಕರ ತಂಡ ಮಣಿಪಾಲ ಠಾಣೆಗೆ ದೂರು ನೀಡಲು ಬಂದಿದ್ದಾರೆ.

ತನ್ನ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದಾರೆ ಎಂದು ತಿಳಿದ ಯೋಗೀಶ್‌ ಸಾಲ್ಯಾನ್‌ ಅವರು ಬಬ್ಬುಸ್ವಾಮಿ ದೈವಸ್ಥಾನದ ಬಳಿ ಬಂದು ಮಣಿಪಾಲ ಠಾಣೆಗೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಪೊಲೀಸರು ಎರಡೂ ತಂಡಗಳನ್ನು ಠಾಣೆಗೆ ಕರೆಯಿಸಿಕೊಂಡು 1 ಗಂಟೆಗೂ ಅಧಿಕ ಕಾಲ ವಿಚಾರಣೆ ಮಾಡಿದ್ದಾರೆ.

ಠಾಣೆ ಎದುರು ಜನಸ್ತೋಮ
ಮಣಿಪಾಲ ಪೊಲೀಸ್‌ ಠಾಣೆಯ ಎದುರು ಭಾಗದಲ್ಲಿ ಹಿಂದೂ ಹಾಗೂ ಮುಸ್ಲಿಂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸರು ಎರಡೂ ತಂಡಗಳಿಗೂ ಎಚ್ಚರಿಕೆ ನೀಡಿದ್ದಾರೆ. ಹಾಗೂ ಸಮಯಾವಕಾಶ ನೀಡಿ ರಾಜಿ ಸಂಧಾನದ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಸಂಜೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಸಂದೇಶ ರವಾನೆಯಾಗಿ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದರು. ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ಠಾಣೆಗೆ ಬಂದಿದ್ದ ಮುಸ್ಲಿಂ ಯುವಕರು ಅಲ್ಲಿಂದ ತೆರಳಿದ್ದಾರೆ. ಘಟನೆ ಬಗ್ಗೆ ಎರಡೂ ತಂಡಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಇದು ಯಾವುದೇ ಪೂರ್ವಪರ ದ್ವೇಷದ ಕೃತ್ಯ ಅಲ್ಲ ಎಂದು ತಿಳಿದುಬಂದಿದೆ.


ಪರ್ಕಳ ಪೇಟೆಯಲ್ಲಿ ಟ್ರಾಫಿಕ್‌ ಜಾಮ್‌
ಪರ್ಕಳ ಬಾಬುರಾಯ ಸರ್ಕಲ್‌ ಬಳಿ ಈ ಘಟನೆ ನಡೆದಿದ್ದು, ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಟ್ರಾಫಿಕ್‌ ದಟ್ಟನೆ ಉಂಟಾಗಿತ್ತು. ರಾ.ಹೆ.ಯ ಅಪೂರ್ಣ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ನಡೆದು ಚಾಲಕರ ನಡುವೆ ಮಾತುಕತೆಗಳು ನಡೆಯುತ್ತಿವೆ. ರವಿವಾರವೂ ಇದೇ ರೀತಿ ಘಟನೆ ನಡೆದಿದ್ದು, ಅತಿರೇಕಕ್ಕೆ ಹೋಗಿದೆ. ಅನಂತರ ಕೋಮುಬಣ್ಣ ಪಡೆದುಕೊಂಡು ರಾಜಿ ಸಂಧಾನದ ಮೂಲಕ ಇತ್ಯರ್ಥ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next