Advertisement

ಕಾರ್ಕಳ: ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನ ಬಂಧನ

12:11 AM Aug 23, 2022 | Team Udayavani |

ಕಾರ್ಕಳ: ಕಾರ್ಕಳ ಬೈಪಾಸ್‌ ರಸ್ತೆ ಯಲ್ಲಿರುವ ಟಿಎಂಎ ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡ್‌ವೇರ್‌ ಅಂಗಡಿಯಿಂದ 1.45 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ, ಹಾಸನ ಜಿಲ್ಲೆ ವಿಜಯನಗರ ನಿವಾಸಿ ಮಹಮ್ಮದ್‌ ಇಕ್ಬಾಲ್ (54)ನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಮಡಿಕೇರಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

Advertisement

ಆತನನ್ನು ವಿಚಾರಣೆಗೊಳಪಡಿಸಿದಾಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಾರ್ಗಲ್‌ನ ನಿವಾಸಿಗಳಾದ ಸಂಬಂಧಿ ಇಬ್ರಾಹಿಂ ಹಾಗೂ ಮಾವ ನೂರ ಅವರ ಜತೆ ಸೇರಿ 2022ರ ಜೂನ್‌ ತಿಂಗಳಲ್ಲಿ ಕಳ್ಳತನ ನಡೆಸಿದ್ದು ನಿಜ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಈಗಾಗಲೇ ಕಾರ್ಗಲ್‌ನ ನೂರ ಎಂಬಾತನನ್ನು ದಸ್ತಗಿರಿ ಮಾಡಿದ್ದು ಆತನು ಉಡುಪಿ ಕಾರಾಗೃಹದಲ್ಲಿದ್ದಾನೆ. ಇನ್ನೋರ್ವ ಆರೋಪಿ ಇಬ್ರಾಹಿಂ ಕಾರ್ಗಲ್‌ ತಲೆಮರೆಸಿಕೊಂಡಿದ್ದಾನೆ.

ಆರೋಪಿ ಇಕ್ಬಾಲ್‌ ಕುಖ್ಯಾತ ಕಳ್ಳನಾಗಿದ್ದು ಈತನ ಮೇಲೆ ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್‌ ಠಾಣೆ, ಉತ್ತರ ಕನ್ನಡ ಜಿಲ್ಲೆ ಯ ಶಿರಸಿ ನಗರ, ಮಾರ್ಕೆಟ್‌, ಬನವಾಸಿ ಪೊಲೀಸ್‌ ಠಾಣೆ, ಹುಬ್ಬಳ್ಳಿ ಎಪಿಎಂಸಿ ಪೊಲೀಸ್‌ ಠಾಣೆ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ ಪೊಲೀಸ್‌ ಠಾಣೆ, ಹಾಸನ ಜಿಲ್ಲೆಯ ಕೋಣನೂರು ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬಾಳೆಹೊನ್ನೂರು ಠಾಣೆ, ಮೈಸೂರು ನಗರ ದಕ್ಷಿಣ ಠಾಣೆ, ಚಿತ್ರದುರ್ಗ ಜಿಲ್ಲೆಯ ನಗರ ಠಾಣೆ, ಬೆಂಗ ಳೂರು ನಗರ ಚಿಕ್ಕಪೇಟೆ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next