Advertisement

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

10:12 AM Jul 25, 2024 | Team Udayavani |

ಬೆಂಗಳೂರು: ಮಹಿಳಾ ಪೇಯಿಂಗ್‌ ಗೆಸ್ಟ್‌ಗೆ ನುಗ್ಗಿದ ದುಷ್ಕರ್ಮಿಯೊಬ್ಬ ಪ್ರೇಯಸಿಯ ಸ್ನೇಹಿತೆಯ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಕೋರಮಂಗಲದ ವಿ.ಆರ್‌.ಲೇಔಟ್‌ನಲ್ಲಿ ನಡೆದಿದೆ.

Advertisement

ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾದ ಯುವತಿ. ಈಕೆಯ ಸ್ನೇಹಿತೆಯ ಪ್ರಿಯಕರನಿಂದಲೇ ಕೃತ್ಯ ನಡೆದಿದೆ. ಆತನ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ. ಮಂಗಳ ವಾರ ತಡರಾತ್ರಿ 11.30ರ ಸುಮಾರಿಗೆ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬಿಹಾರ ಮೂಲದ ಕೃತಿ ಕುಮಾರಿ, ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದು, ನಗರದ ಕಾಲೇಜೊಂದರಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಕೆಲ ತಿಂಗಳಿಂದ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಕಂಪನಿಯಲ್ಲಿ ಕೆಲ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಯುವತಿಯ ಪರಿಚಯವಾಗಿದೆ. ಬಳಿಕ ಇಬ್ಬರು ಕೆಲ ದಿನಗಳ ಹಿಂದಷ್ಟೇ ವಿ.ಆರ್‌.ಲೇಔಟ್‌ನಲ್ಲಿರುವ ಪಿಜಿಗೆ ಬಂದು ವಾಸವಾಗಿದ್ದರು. ಇಲ್ಲಿಂದಲೇ ಕೆಲಸಕ್ಕೆ ಹೋಗುತ್ತಿದ್ದರು.

ಮತ್ತೂಂದೆಡೆ ಮಧ್ಯಪ್ರದೇಶ ಮೂಲದ ಯುವತಿಯ ಪ್ರಿಯಕರ ಕೂಡ, ಯುವತಿಯರು ಪಿಜಿಗೆ ಸೇರುವಾಗ ಬಂದಿದ್ದಾನೆ. ಆದರೆ, ಪಿಜಿಯ ಮಹಿಳಾ ಸೆಕ್ಯೂರಿಟಿ ಗಾರ್ಡ್‌, ಯುವಕರಿಗೆ ಪಿಜಿಗೆ ಪ್ರವೇಶವಿಲ್ಲ ಎಂದು ತಡೆದಿದ್ದರು. ಆಗ ಆತನ ಪ್ರೇಯಸಿ, “ಆತ ನನಗೆ ಪರಿಚಯಸ್ಥ. ಲಗೇಜ್‌ ಒಳಗಡೆ ಇಟ್ಟು ಹೋಗುತ್ತಾನೆ. ಬೇಗನೆ ವಾಪಸ್‌ ಕಳುಹಿಸುತ್ತೇನೆ’ ಎಂದು ಹೇಳಿ ಒಳಗಡೆ ಕರೆಸಿಕೊಂಡಿದ್ದಳು. ಈ ದೃಶ್ಯಗಳು ಪಿಜಿಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಹೇಳಿದರು.

ಪ್ರೇಮಿಗಳ ನಡುವೆ ಜಗಳ: ಈ ಮಧ್ಯೆ ಆರೋಪಿ  ಹಾಗೂ ಆತನ ಪ್ರೇಯಸಿ ಕುಟುಂಬ ಸದಸ್ಯರಿಗೆ ಒಪ್ಪಿಸಿ ಮದುವೆ ಯಾಗಬೇಕೆಂದು ನಿರ್ಧರಿಸಿದ್ದರು. ಆದರೆ, ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ತನ್ನ ಪ್ರೇಯಸಿಯಿಂದಲೇ ಕೆಲವೊಮ್ಮೆ ಹಣ ಪಡೆಯುತ್ತಿದ್ದ. ಈ ನಡುವೆ ಕೆಲ ದಿನಗಳ ಹಿಂದೆ ಪಿಜಿ ಸಮೀಪದಲ್ಲೇ ಇಬ್ಬರಿಗೆ ಜಗಳವಾಗಿದೆ. ಈ ವೇಳೆ ಕೃತಿ ಕೂಡ ಸ್ಥಳದಲ್ಲಿದ್ದು, ಜಗಳ ಬಿಡಿಸಿದ್ದಾಳೆ. ಅಲ್ಲದೆ, ಕೃತಿ, ತನ್ನ ಸ್ನೇಹಿತೆಗೆ, ಈ ರೀತಿ ಅಸಭ್ಯ ವರ್ತನೆ ತೋರುವ ಯುವಕನ ಮದುವೆ ಆಗದಂತೆ ಸಲಹೆ ನೀಡಿದ್ದಳು. ಈ ವಿಚಾರ ತಿಳಿದ ಆರೋಪಿ, ಕೃತಿ ಕೊಲೆಗೈಯ್ಯಲು ನಿರ್ಧರಿಸಿದ್ದನು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

ಪಿಜಿಗೆ  ಬಂದು ಹತ್ಯೆ: ಮಂಗಳವಾರ ರಾತ್ರಿಪಾಳಿ ಯಲ್ಲಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್‌, ತಡರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆಂದು ಪಿಜಿಯ 2ನೇ ಮಹಡಿಯಲ್ಲಿರುವ ಅಡುಗೆ ಕೋಣೆಗೆ ಹೋಗಿದ್ದಾರೆ. ಅದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ, ಪಿಜಿಗೆ ನುಗ್ಗಿದ್ದಾನೆ. ನಂತರ ಸುಮಾರು 11.30ರ ಸುಮಾರಿಗೆ 3ನೇ ಮಹಡಿಯಲ್ಲಿರುವ ಕೃತಿ ಕೋಣೆಗೆ ಹೋಗಿ ಏಕಾಏಕಿ ಆಕೆಯ ಕತ್ತನ್ನು ಎರಡೂ¾ರು ಬಾರಿ ಕೊಯ್ದು ಹತ್ಯೆಗೈದು ಪರಾರಿಯಾಗಿದ್ದಾನೆ. ಈ ವೇಳೆ ಆರೋಪಿಯ ಪ್ರೇಯಸಿ ಪಿಜಿಯಲ್ಲಿ ಇರಲಿಲ್ಲ ಎಂಬುದು ಗೊತ್ತಾಗಿದೆ. ಸದ್ಯ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಮತ್ತೂಂದೆಡೆ ಆರೋಪಿ ಪಿಜಿಯೊಳಗೆ ನುಗ್ಗುವುದು ಮತ್ತು ಕೃತ್ಯ ಎಸಗಿ ವಾಪಸ್‌ ಗಾಬರಿಯಿಂದ ಪಿಜಿಯಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದರು.

ಘಟನೆ ಸ್ಥಳಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್‌ಗುಪ್ತಾ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ:

ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್‌ಗುಪ್ತಾ,  ಘಟನೆ ಮಂಗಳವಾರ ತಡರಾತ್ರಿ 11.10ರಿಂದ 11.30ರ ಸುಮಾರಿಗೆ ನಡೆದಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಯುವತಿ ಮೂಲತಃ ಬಿಹಾರದವರು ಎಂಬುದು ಗೊತ್ತಾಗಿದೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ಪತ್ತೆಯಾಗಬೇಕಿದೆ. ಅನುಮಾನಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿಯಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ. ಹಾಗೆಯೇ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಪಿಜಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next