ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಸ್ವತ್ಛಂದವಾಗಿ ಯಾವುದರ ಬಗ್ಗೆಯೂ ಚಿಂತೆಯಿಲ್ಲದೆ ಕಲಿಕೆಯಲ್ಲಿ ಮಗ್ನನಾಗಿದ್ದೆ. ಮುಂದಾಲೋಚನೆ ಇಲ್ಲದೇ ಇದ್ದ ನನಗೆ ಪರೀಕ್ಷೆ ಬರೆದು ಮುಗಿಸಿ ಮನೆಗೆ ಬಂದ ಕೂಡಲೇ ಹಲವು ಸಮಸ್ಯೆಗಳು ಕಾಡಲಾರಂಭಿಸಿದವು. ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿದ್ದೇನೆ, ಸ್ನಾತಕೋತ್ತರ ಪದವಿಯನ್ನೂ ಮುಗಿಸಿದ್ದೇನೆ ಇನ್ನೇನು ಮಾಡುವುದು. ಬಿ.ಎಡ್ ಮಾಡಿದರೆ ಮುಂದೆ ಶಿಕ್ಷಕನಾಗಬಹುದು ಎಂದು ಅದೆಷ್ಟೋ ಬಾರಿ ಗುರುಗಳು ಹೇಳಿದ್ದರೂ ನನ್ನ ಮನಸ್ಸು ಮಾತ್ರ ಮತ್ತೇನನ್ನೋ ಬಯಸುತ್ತಿತ್ತು.
ಕಾನೂನಿನ ಅರಿವು ನನಗಿರಬೇಕು, ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವ ವರನ್ನು ನಾನು ಪ್ರಶ್ನಿಸಬೇಕು. ಇದೆಲ್ಲ ಸಾಧ್ಯವಾಗಬೇಕೆಂದರೆ ನಾನು ಕಾನೂನಿನ ಪದವಿ ಪಡೆಯಬೇಕು. ಮುಂದೆ ಉತ್ತಮ ವಕೀಲನಾಗಬೇಕು ಎನ್ನುವ ಆಸಕ್ತಿ ಯಿಂದ ಬಿಸಿಲ ನಗರಿ ರಾಯಚೂರಿನ ಕೆ. ಹೊಸಳ್ಳಿ ಎನ್ನುವ ಪುಟ್ಟ ಗ್ರಾಮದಿಂದ ಹೊರಟ ನನ್ನ ಪಯಣ ಕೊಪ್ಪಳದ ಡಿ.ಬಿ.ಎಚ್.ಪಿ.ಎಸ್. ಕಾನೂನು ಕಾಲೇಜಿನಲ್ಲಿ ಮೂರು ವರ್ಷದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿ, ಅಲ್ಲಿಂದ ಗದಗ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು ಎಲ್ಲ ನಗರಗಳಲ್ಲೂ ಒಂದೊಂದು ಅರ್ಜಿಯನ್ನು ಸಲ್ಲಿಸಿ ಕೊನೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿಗೆ ಬಂದು ತಲುಪಿದೆ.
ಮಂಗಳೂರು ಎಂದರೆ ನನಗೆ ಮಾತೃಭೂಮಿಗೆ ಬಂದಷ್ಟೇ ಸಮಾಧಾನ. ಅಲ್ಲಿ ಎಲ್ಲರ ಜತೆಗಿನ ಒಡನಾಟ ಶಿಕ್ಷಣದ ಮಹತ್ವ, ಹಲವು ಭಾಷೆ ಧರ್ಮಗಳ ಸೊಗಡು ಎಲ್ಲವೂ ಒಂದು ವಿಶಿಷ್ಟ ಅನುಭವ ನೀಡುತ್ತಿದ್ದ ನನ್ನ ಪಾಲಿನ ಸ್ವರ್ಗ ತಾಣವೇ ಈ ನಮ್ಮ ಕುಡ್ಲ ಎಂದರೆ ತಪ್ಪಾಗಲಾರದು.
ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಎನ್ನುವ ಜಿ. ಎಸ್. ಶಿವರುದ್ರಪ್ಪ ರವರ ಎಲ್ಲ ಊರನು ಸುತ್ತಿದ ಮೇಲೆ ನನಗೆ ಮೊದಲಿನಿಂದಲೂ ಶಿಕ್ಷಣ ನೀಡುತ್ತಿರುವ ನಮ್ಮ ಕುಡ್ಲವೇ ನನಗೆ ಶ್ರೇಷ್ಠ ಎಂದು ಈ ಕಾಲೇಜಿಗೂ ಅರ್ಜಿ ಸಲ್ಲಿಸಿದೆ.
ಎಲ್ಲ ಕಾಲೇಜಿನಲ್ಲೂ ಅರ್ಜಿಗಳನ್ನು ಸಲ್ಲಿಸಿದ್ದೇನೆ ಯಾವುದಾದರೂ ಒಂದು ಕಾಲೇಜಿನಲ್ಲಿ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಾ ಕುಳಿತುಕೊಂಡೆ. ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾಗ ಎಲ್ಲರೂ ನನ್ನನ್ನು ಉತ್ತಮ ಮಾತುಗಾರ ಹಾಗೆ ಹೀಗೆ ಎಂದು ಹೊಗಳುತ್ತಿದ್ದರು. ಈ ಎಲ್ಲ ಸಂದರ್ಭಗಳಲ್ಲಿ ನನಗನಿಸುತ್ತಿದ್ದದ್ದು ನನ್ನ ಮಾತುಗಳೇ ನನ್ನ ಬಂಡವಾಳವಾಗಬೇಕು, ನನ್ನ ಜ್ಞಾನವೇ ನನ್ನ ಬದುಕು ನಡೆಸಲು ಬೇಕಾಗುವ ಹಣವಾಗಬೇಕು ಎಂದುಕೊಂಡು ಕಾನೂನು ಪದವಿ ಪಡೆಯಲು ನಿರ್ಧರಿಸಿದೆ.
ಬಯಲುಸೀಮೆ, ಮಲೆನಾಡು, ಮಂಡ್ಯ, ಮೈಸೂರು, ಹಾಸನ, ಕರ್ನಾಟಕದಾದ್ಯಂತ ಒಂದು ವಾರಗಳ ಪ್ರಯಾಣ ಬೆಳೆಸಿದ ನನಗನಿಸಿದ್ದು ಎಲ್ಲೆಲ್ಲೋ ಸುತ್ತಿ ಪರಿಚಯವಿಲ್ಲದ ಊರುಗಳಲ್ಲಿ ನೆಲೆ
ಕಂಡುಕೊಳ್ಳುವುದಕ್ಕಿಂತ ಕರಾವಳಿಯಲ್ಲಿ ನನಗೆ ಅತ್ಯಂತ ಪ್ರೀತಿ ಮತ್ತು ಶಿಕ್ಷಣವನ್ನು ನೀಡಿ ಬೆಳೆಸಿದ ಮಂಗಳೂರಿ ನಲ್ಲಿ ಕಲಿಯುವುದು ಉತ್ತಮವೆಂದು. ಈಗ ಏನನ್ನಾ ದರೂ ಕಲಿಯಬೇಕು ಕಲಿತು ಸಾಧಿಸಬೇಕು ಸಾಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ.
- ಶಂಕರ್ ಓಬಳಬಂಡಿ
ಮಂಗಳೂರು ವಿವಿ