ಉಡುಪಿ: ಜಿಲ್ಲೆಯ ಕಾರ್ಕಳದ (Karkala) ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಬಲವಂತ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಯುವತಿಗೆ ಅಮಲು ಬರಿಸುವ ಪಾನೀಯ ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶನಿವಾರ (ಆ.24) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ಪ್ರಮುಖ ಆರೋಪಿ ಅಲ್ತಾಫ್ ಮತ್ತು ಸಹಾಯ ಮಾಡಿದ್ದ ಸವೇರಾ ರಿಚರ್ಡ್ ಕಾರ್ಡೋಜಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಆಗಿದ್ದೇನು?
ಸಂತ್ರಸ್ಥ ಯುವತಿಗೆ ಆರೋಪಿ ಅಲ್ತಾಫ್ ಕಳೆದ 3-4 ತಿಂಗಳಿನಿಂದ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ಶುಕ್ರವಾರ (ಆ.23) ಯುವತಿಗೆ ಕರೆ ಮಾಡಿದ್ದ ಆರೋಪಿ ಒಂದು ಜಾಗಕ್ಕೆ ಬರಹೇಳಿದ್ದ. ಅಲ್ಲಿಂದ ಆಕೆಯನ್ನು ಅಪಹರಿಸಿದ್ದ. ಅಲ್ಲಿಗೆ ಸ್ನೇಹಿತ ಸವೇರಾ ರಿಚರ್ಡ್ ಎರಡು ಬಿಯರ್ ಬಾಟಲಿ ತಂದಿದ್ದು, ಬಿಯರ್ ಗೆ ಮತ್ತು ಬರಿಸುವ ಪದಾರ್ಥ ಸೇರಿಸಿ ಯುವತಿಗೆ ಕುಡಿಸಿದ್ದ.
ಬಳಿಕ ಅಲ್ತಾಫ್ ಮತ್ತು ಸ್ನೇಹಿತರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ರಂಗನಪಲ್ಕೆ ಎಂಬ ಸ್ಥಳಕ್ಕೆ ಕರೆದೊಯ್ದು ಹಾಡಿಯಲ್ಲಿ ಕೃತ್ಯ ಎಸಗಲಾಗಿದೆ. ಘಟನೆ ಬಳಿಕ ಸ್ವತಃ ಅಲ್ತಾಫ್ ಯುವತಿಯನ್ನು ಆಕೆಯ ಮನೆಮುಂದೆ ತಂದು ಬಿಟ್ಟಿದ್ದ ಎನ್ನಲಾಗಿದೆ.
ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ್ದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವತಿ ಜೇನುಕೃಷಿ ಮಾಡಿಕೊಂಡಿರುತ್ತಿದ್ದಳು. ಈಕೆಯ ಕುಟುಂಬ ಕೆಲವು ವರ್ಷಗಳ ಹಿಂದೆಯೇ ಕಾರ್ಕಳಕ್ಕೆ ಬಂದು ನೆಲೆಸಿತ್ತು ಎಂದು ತಿಳಿದುಬಂದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವತಿಯನ್ನು ಕಾರ್ಳಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಆರೋಪಿ ಬಂಧನಕ್ಕೆ ಆಗ್ರಹಿಸಿದ್ದಾರೆ.