Advertisement

Bengaluru: ಕ್ಯಾಂಟರ್‌ ಹರಿದು ಇಬ್ಬರು ಸೋದರರ ದೇಹ ಛಿದ್ರ!

11:46 AM Aug 18, 2024 | Team Udayavani |

ಬೆಂಗಳೂರು: ಕ್ಯಾಂಟರ್‌ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

Advertisement

ಬ್ಯಾಟರಾಯನಪುರದ ಹೊಸಗುಡ್ಡದಹಳ್ಳಿ ನಿವಾಸಿ ಗಳಾದ ಶಾಹಿಬ್‌ ರಝಾ (21) ಮತ್ತು ರೆಹಾನ್‌ ರಝಾ (14) ಮೃತ ಸಹೋದರರು. ಕೃತ್ಯಕ್ಕೆ ಕಾರಣವಾದ ಕ್ಯಾಂಟರ್‌ ಚಾಲಕ ಸುರೇಶ್‌ ಎಂಬಾತನನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಸಗುಡ್ಡದಹಳ್ಳಿಯಲ್ಲಿ ದುರ್ಘ‌ಟನೆ ನಡೆದಿದೆ.

ಉತ್ತರ ಪ್ರದೇಶದ ವಾರಾಣಸಿಯ ಬನಾರಸ್‌ ಮೂಲದ ಸಹೋದರರು ಪೋಷಕರೊಂದಿಗೆ ಹೊಸಗುಡ್ಡದಹಳ್ಳಿಯಲ್ಲಿ ವಾಸವಾಗಿದ್ದಾರೆ. ಶಾಬಿಬ್‌ ರಿಝಾ ಸೀರೆ ನೇಯುವ ಕೆಲಸ ಮಾಡುತ್ತಿದ್ದರೆ, ರೆಹಾನ್‌ ರಝಾ ಸಮೀಪದ ಶಾಲೆಯಲ್ಲಿ 9 ತರಗತಿ ವ್ಯಾಸಂಗ ಮಾಡುತ್ತಿದ್ದ.  ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕ್ಯಾಂಟರ್‌ ಚಾಲಕ ಸುರೇಶ್‌, ನಿರ್ಮಾಣ ಹಂತದ ಕಟ್ಟಡಕ್ಕೆ ಬೇಕಾದ ಹಾಲೋಬ್ರಿಕ್ಸ್‌ ತುಂಬಿಕೊಂಡು ಹೊಸಗುಡ್ಡದಹಳ್ಳಿಗೆ ಬಂದಿದ್ದು, ಇಳಿಜಾರು ಪ್ರದೇಶದ ರಸ್ತೆ ಬದಿ ವಾಹನ ನಿಲುಗಡೆ ಮಾಡಿದ್ದಾನೆ. ಆದರೆ, ಹ್ಯಾಂಡ್‌ ಬ್ರೇಕ್‌ ಹಾಕಿರಲಿಲ್ಲ. ಅದೇ ವೇಳೆ ಮುಂಭಾಗದಿಂದ ಸಹೋದರರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಕ್ಯಾಂಟರ್‌ ವಾಹನದಲ್ಲಿ ಹಾಲೋಬ್ರಿಕ್ಸ್‌ ತುಂಬಿದ್ದರಿಂದ ಏಕಾಏಕಿ ವಾಹನ ಮುಂದೆ ಸಾಗಿದೆ. ಆಗ ಚಾಲಕ ಸುರೇಶ್‌  ಓಡಿ ಹೋಗಿ ಕ್ಯಾಂಟರ್‌ ಮೇಲೆ ಹತ್ತಿ, ಬ್ರೇಕ್‌ ಹಾಕಲು ಯತ್ನಿಸಿದ್ದಾನೆ. ಆದರೆ, ಇಳಿಜಾರು ಪ್ರದೇಶವಾದರಿಂದ ಕ್ಯಾಂಟರ್‌ ವೇಗವಾಗಿ ಚಲಿಸಿದೆ. ಅದೇ ವೇಳೆ ಎದುರು ಬರುತ್ತಿದ್ದ ಸಹೋದರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಕೆಳಗೆ ಬಿದ್ದಿದ್ದು, ಅವರ ಮೇಲೆಯೇ ಕ್ಯಾಂಟರ್‌ನ ಚಕ್ರಗಳು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದು, 2 ದೇಹಗಳು ಛಿದ್ರವಾಗಿವೆ. ಇಡೀ ರಸ್ತೆ ರಕ್ತಮಯವಾಗಿತ್ತು.

ಅಲ್ಲದೆ, ಎರಡು ಮೃತದೇಹಗಳನ್ನು ಕ್ಯಾಂಟರ್‌ 150ರಿಂದ 200 ಮೀಟರ್‌ ದೂರಕ್ಕೆ ಎಳೆದೊಯ್ದಿದ್ದೆ. ಜತೆಗೆ ರಸ್ತೆ ಬದಿ ನಿಲುಗಡೆ ಮಾಡಿದ್ದ 7 ಬೈಕ್‌ಗಳು ಹಾಗೂ ಎರಡು ಕಾರುಗಳು ಸಂಪೂರ್ಣ ಜಖಂ ಗೊಂಡಿವೆ. ಒಂದು ವೇಳೆ ಕ್ಯಾಂಟರ್‌ ಮುಂಭಾಗದ ಚಕ್ರಕ್ಕೆ ದ್ವಿಚಕ್ರ ವಾಹನ ಸಿಲುಕದಿದ್ದರೆ, ಇನ್ನಷ್ಟು ಅನಾಹುತ ಸಂಭವಿಸುತ್ತಿತ್ತು. ಘಟನೆ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?:

  • ಹಾಲೋಬ್ರಿಕ್ಸ್‌ ತುಂಬುಕೊಂಡು ಬಂದಿದ್ದ ಕ್ಯಾಂಟರ್‌ ಚಾಲಕ
  • ಬ್ಯಾಟರಾಯನಪುರದ ಹೊಸಗುಡ್ಡದಹಳ್ಳಿಗೆ ಬಂದ ಕ್ಯಾಂಟರ್‌
  • ಹ್ಯಾಂಡ್‌ ಬ್ರೇಕ್‌ ಹಾಕದೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ
  • ಇದೇ ವೇಳೆ ಮುಂಭಾಗದಿಂದ ಬೈಕ್‌ನಲ್ಲಿ ಬರುತ್ತಿದ್ದ ಸೋದರರು
  • ಕ್ಯಾಂಟರ್‌ ಲೋಡ್‌ ಆಗಿದ್ದರಿಂದ ಏಕಾಏಕಿ ವೇಗವಾಗಿ ಚಾಲನೆ
  • ಇದೇ ವೇಳೆ ಬೈಕ್‌ಗೆ ಡಿಕ್ಕಿ: ಇಬ್ಬರು ಸಹೋದರರು ಸ್ಥಳದಲ್ಲೇ ಸಾವು
  • 200 ಮೀಟರ್‌ ದೂರಕ್ಕೆ ಮೃತದೇಹಗಳನ್ನು ಎಳೆದೊಯ್ದ ವಾಹನ
  • ಘಟನೆಯಲ್ಲಿ 7 ದ್ವಿಚಕ್ರವಾಹನ, 2 ಕಾರುಗಳು ಸಂಪೂರ್ಣ ಜಖಂ
Advertisement

 

Advertisement

Udayavani is now on Telegram. Click here to join our channel and stay updated with the latest news.

Next