Advertisement

Crime: ಮಗನನ್ನು ಕೊಂದಿದ್ದ ರೌಡಿಯನ್ನು ಹತ್ಯೆಗೈದ ತಂದೆ; ನಾಲ್ವರ ಬಂಧನ

11:34 AM Aug 07, 2024 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಹಳೇ ದ್ವೇಷಕ್ಕೆ ರೌಡಿಶೀಟರ್‌ ಅಜಿತ್‌ ಎಂಬಾತನನ್ನು ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶೇಷಾದ್ರಿಪುರ ನಿವಾಸಿಗಳಾದ ಅರುಣ್‌ (28), ಅಜಯ್‌ (28), ನರಸಿಂಹನ್‌ (48) ಮತ್ತು ಪ್ರಕಾಶ್‌ (30) ಬಂಧಿತರು. ಆರೋಪಿಗಳು ಆ.1ರಂದು ಸಂಜೆ 4.15ರ ಸುಮಾರಿಗೆ ರಸಲ್ದಾರ್‌ ಸ್ಟ್ರೀಟ್‌ನಲ್ಲಿ ರೌಡಿ ಶೀಟರ್‌ ಅಜಿತ್‌ ಎಂಬಾತನ ಮೇಲೆ ಮಾರ ಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಳನ್ನು ಬಂಧಿಸಲಾಗಿದೆ.ಇದೇ ವೇಳೆ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಹಳೇ ದ್ವೇಷಕ್ಕೆ ಕೊಲೆ: ಆರೋಪಿಗಳ ಪೈಕಿ ನರಸಿಂಹನ್‌ನ ಪುತ್ರ ಗಣೇಶ್‌ ಹಾಗೂ ಕೊಲೆಯಾದ ರೌಡಿಶೀಟರ್‌ ಅಜಿತ್‌ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿತ್ತು. ಇದೇ ದ್ವೇಷಕ್ಕೆ 2022ರಲ್ಲಿ ಅಜಿತ್‌ ಮತ್ತು ತಂಡ ಗಣೇಶ್‌ನನ್ನು ಕೊಲೆ ಮಾಡಿತ್ತು. ಈ ಸಂಬಂಧ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದ ಅಜಿತ್‌, ಏರಿಯಾದಲ್ಲೇ ತಾನೇ ಡಾನ್‌ ಆಗಬೇಕೆಂದು ಪ್ರಾಬಲ್ಯ ಸಾಧಿಸಲು ಮುಂದಾಗಿದ್ದ. ಅಲ್ಲದೆ, ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದ. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಈತನ ವಿರುದ್ಧ ರೌಡಿಪಟ್ಟಿ ತೆರೆದಿದ್ದರು. ಅಲ್ಲದೆ, ಗಣೇಶ್‌ ಕುಟುಂಬ ಸದಸ್ಯರಿಗೆ ಆಗಾಗ್ಗೆ ಅವಮಾನ ಮಾಡುತ್ತಿದ್ದ. ಅದರಿಂದ ಬೇಸತ್ತಿದ್ದ ಗಣೇಶ್‌ ತಂದೆ ನರಸಿಂಹನ್‌ ಅಜಿತ್‌ ಹತ್ಯೆಗೆ ತಂಡ ಕಟ್ಟಿಕೊಂಡಿದ್ದ. ಈ ಬೆನ್ನಲ್ಲೇ ಆ.1ರಂದು ಸಂಜೆ 4.15ರ ಸುಮಾರಿಗೆ ಮನೆಯಿಂದ ಹೊರಗಡೆ ಬಂದು, ಸುಮಾರು 500 ಮೀಟರ್‌ ನಡೆದುಕೊಂಡು ಹೋಗುತ್ತಿದ್ದ ಅಜಿತ್‌ ಮೇಲೆ ಎರಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಹಂತಕರು, ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಮನಸೋಇಚ್ಛೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next