ಬೆಂಗಳೂರು: ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಇತ್ತೀಚೆಗೆ ಅಪಹರಿಸಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರೇಯಸಿ ಸೇರಿ 7 ಮಂದಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಮೋನಿಕಾ (26), ಹರೀಶ್ (30), ಹರಿಕೃಷ್ಣ (40), ನರಸಿಂಹ (38), ರಾಜು (40), ಆಂಜಿನಪ್ಪ (38) ಮತ್ತು ನರೇಂದ್ರ ಬಂಧಿತರು.
ಆರೋಪಿಗಳು ನ.17ರಂದು ಆಂಧ್ರಪ್ರದೇಶದ ನೆಲ್ಲೂರು ಮೂಲದ ಉದ್ಯಮಿ ಪೋತುಲ ಶಿವ (31) ಎಂಬುವರನ್ನು ಪೆನುಗೊಂಡದಲ್ಲಿ ಅಪಹರಿಸಿ, ಪಾವಗಡಕ್ಕೆ ಕರೆತಂದು ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆಗೈದು ಚಿನ್ನಾಭರಣ ಸುಲಿಗೆ ಮಾಡಿದ್ದರು. ಈ ಸಂಬಂಧ ಅಪಹರಣಕ್ಕೊಳಗಾದ ಪೋತುಲ ಶಿವ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆತನ ಗೆಳತಿ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ನೆಲ್ಲೂರು ಮೂಲದ ಉದ್ಯಮಿ ಪೋತುಲ ಶಿವ ಮತ್ತು ಮೋನಿಕಾ ಸ್ನೇಹಿತರಾಗಿದ್ದರು. ನ.17ರಂದು ಮೋನಿಕಾ, ಪೋತುಲ ಶಿವನಿಗೆ ಕರೆ ಮಾಡಿ ಪೆನುಗೊಂಡಕ್ಕೆ ಕರೆಸಿಕೊಂಡಿದ್ದಳು. ಬಳಿಕ ಪಾವಗಡಕ್ಕೆ ಕರೆದೊಯ್ದಿದ್ದಾಳೆ. ಪಾವಗಡದ ಹೈ ವೇ ಬಳಿ ನಡೆದುಕೊಂಡು ಹೋಗುವಾಗ, ಕಾರೊಂದರಲ್ಲಿ ಬಂದ ಇತರೆ ಆರೋಪಿಗಳು ತಾವು ಪೊಲೀಸರೆಂದು ಪರಿಚಯಿಸಿಕೊಂಡು ಬಳಿಕ ಪೋತುಲ ಶಿವ ಮತ್ತು ಮೋನಿಕಾಳನ್ನು ಕಾರಿನಲ್ಲಿ ಅಪಹರಿಸಿ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಬಳಿಕ ಆರೋಪಿಗಳು ಪೋತುಲ ಶಿವನ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಬಳಿಕ ಮೋನಿಕಾಳನ್ನು ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ.
ನಂತರ ಪೋತುಲ ಶಿವನಿಗೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬಳಿಕ 5 ಲಕ್ಷ ರೂ. ನೀಡಲು ಪೋತುಲ ಶಿವ ಒಪ್ಪಿಕೊಂಡಿದ್ದಾರೆ. ಬಳಿಕ ಪೋತುಲ ಶಿವ ಬೆಂಗಳೂರಿನಲ್ಲಿರುವ ಕೆಲವು ಸ್ನೇಹಿತರನ್ನು ಮೊಬೈಲ್ನಲ್ಲಿ ಸಂಪರ್ಕಿಸಿ ತುರ್ತಾಗಿ ಹಣ ಕೊಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಆರೋಪಿಗಳು ನ.20ರಂದು ಶಿವನನ್ನು ಮೆಜೆಸ್ಟಿಕ್ಗೆ ಕರೆತಂದಿದ್ದಾರೆ. ಅಪಹರಣದ ವಿಚಾರ ತಿಳಿಯದ ಇಬ್ಬರು ಸ್ನೇಹಿತರು ಮೆಜೆಸ್ಟಿಕ್ಗೆ ಬಂದು ಎಟಿಎಂ ಕಾರ್ಡ್ ನೀಡಿದ್ದರೆ. ಬಳಿಕ ಆರೋಪಿಗಳು ಪೋತುಲ ಶಿವನನ್ನು ನಗರದ ವಿವಿಧೆಡೆ ಕಾರಿನಲ್ಲಿ ಸುತ್ತಾಡಿಸಿ ನ.21ರ ಮಧ್ಯಾಹ್ನ ಕೋರಮಂಗಲದ ಫೋರಂ ಮಾಲ್ ಬಳಿಯ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಬಂದಿದ್ದಾರೆ.
ಈ ವೇಳೆ ಪೋತುಲ ಶಿವ ಹಾಗೂ ಇಬ್ಬರು ಆರೋಪಿಗಳು ಎಟಿಎಂ ಕೇಂದ್ರದೊಳಗೆ ಜಗಳ ಶುರ ಮಾಡಿದ್ದಾರೆ. ಇದೇ ಸಮಯಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಪಿಎಸ್ಐ ಮಾದೇಶ್ ಈ ಜಗಳ ಗಮನಿಸಿದ್ದಾರೆ. ಬಳಿಕ ಸಿಬ್ಬಂದಿ ಜತೆಗೆ ಎಟಿಎಂ ಕೇಂದ್ರದ ಬಳಿಗೆ ಬಂದಿದ್ದಾರೆ. ಪೊಲೀಸರನ್ನು ನೋಡಿದ ಆರೋಪಿಗಳು ಭಯಗೊಂಡು ಓಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಪೋತುಲ ಶಿವ ಪೊಲೀಸರ ಬಳಿ ತನ್ನ ಅಪಹರಣ ಬಗ್ಗೆ ಹೇಳಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ವೇಳೆ ಪ್ರೇಯಸಿ ಮೋನಿಕಾಳೇ ಮಾಸ್ಟರ್ ಮೈಂಡ್ ಎಂದು ಗೊತ್ತಾಗಿದೆ.