Advertisement

ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲೇ ಕ್ರಿಕೆಟ್ ಆಟ!

11:35 AM Feb 02, 2019 | Team Udayavani |

ಬೆಳಗಾವಿ: ನಗರದ ಮಹಾದ್ವಾರ ರಸ್ತೆಯಲ್ಲಿರುವ ಸಂಭಾಜಿ ಮೈದಾನದಲ್ಲಿ ಕ್ರಿಕೆಟ್ ಆಡಲು ಬಾಡಿಗೆ ವಿಧಿಸುತ್ತಿರುವುದನ್ನು ಖಂಡಿಸಿ ಯುವಕರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲೇ ಕ್ರಿಕೆಟ್ ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಸಂಭಾಜಿ ಮೈದಾನದಲ್ಲಿ ನಿತ್ಯ ಕ್ರಿಕೆಟ್ ಆಡುತ್ತಿದ್ದ ಯುವಕರು ಪಾಲಿಕೆಗೆ ಬಂದು ಶುಕ್ರವಾರ ಕ್ರಿಕೆಟ್ ಆಟ ಆಡಿ ಪ್ರತಿಭಟಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಆ ಮೈದಾನದಲ್ಲಿ ಕ್ರಿಕೆಟ್ ಆಡುತ್ತ ಬರಲಾಗಿದೆ. ಇಲ್ಲಿಯವರೆಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಈ ಭಾಗದ ಯುವಕರಿಗೆ ಒಂದೇ ಮೈದಾನವಾಗಿದ್ದು, ಕ್ರಿಕೆಟ್ ಆಡಲು ಬಂದರೆ ಪಾಲಿಕೆ ಸಿಬ್ಬಂದಿ ದಬಾಯಿಸುತ್ತಿದ್ದಾರೆ ಎಂದು ದೂರಿದರು.

ಪಾಲಿಕೆ ಸದಸ್ಯೆ ವೈಶಾಲಿ ಹುಲಜಿ ಮಾತನಾಡಿ, ಮೈದಾನಗಳಲ್ಲಿಯೇ ಕ್ರಿಕೆಟ್ ಆಡಬೇಕಾಗುತ್ತದೆ. ಬೇರೆ ಕಡೆ ಆಟ ಆಡಲು ಸಾಧ್ಯವೇ. ಈಗ ಪಾಲಿಕೆಯವರು ಆಟ ಆಡಲು ಕಡ್ಡಾಯವಾಗಿ ಶುಲ್ಕ ತುಂಬುವಂತೆ ಹೇಳುತ್ತಿದ್ದಾರೆ. ದಿನಕ್ಕೆ 2500 ರೂ. ಬಾಡಿಗೆ ನೀಡುವಂತೆ ಕೇಳುತ್ತಿದ್ದಾರೆ. ಇಂಥ ನಿಯಮ ಆಟಗಳಿಗೆ ಅನ್ವಯಿಸದಂತೆ ಮಾಡಬೇಕು. ಕ್ರಿಕೆಟ್ ಆಟಕ್ಕೆ ಅನುಮತಿ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಇತರ ಸಮಾರಂಭಗಳಿಗೆ ಬಾಡಿಗೆ ಕೇಳುವುದು ಸರಿ. ಆದರೆ ಆಟಗಳಿಗೆ ಬಾಡಿಗೆ ಕೇಳಿದರೆ ಮುಂದೆ ಆಟಗಾರರು ಸೃಷ್ಟಿಯಾಗಲು ಸಾಧ್ಯವೇ. ಇಂಥ ನಿಯಮ ಸಡಿಲಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಸುನೀಲ ಬಾಳೆಕುಂದ್ರಿ, ಅಭಿಜಿತ ಚವ್ಹಾಣ, ರಾಜು ಭಾತಖಾಂಡೆ, ರವೀಂದ್ರ ಹುಲಜಿ ಸೇರಿದಂತೆ ಇತರರು ಕ್ರಿಕಟ್ ಆಡಿ ಪ್ರತಿಭಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next