Advertisement
ಕೆಲವು ದಿನಗಳ ಹಿಂದೆ ಬಾಯಾರು ಸಮೀಪದ ಬಳ್ಳೂರು ನಿವಾಸಿ ಜನಾರ್ದನ ಆಚಾರಿ ಅವರ ಅಂತ್ಯ ಸಂಸ್ಕಾರ ಭಾಗವಾದ ದೇಹ ದಹನಕ್ಕೆ ಬಹಳ ದೂರ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತ್ಯ ಸಂಸ್ಕಾರಕ್ಕೆ ಒಂದಿಂಚು ಸ್ಥಳವೂ ಈ ಪರಿಸರದಲ್ಲಿರದೆ, ದೂರದ ಕರ್ನಾಟಕ ರಾಜ್ಯದ ಬಂಟ್ವಾಳ ತಾಲೂಕಿನ ವಿಟ್ಲ ಸರಕಾರಿ ಆಸ್ಪತ್ರೆಯ ಸಮೀಪದಲ್ಲಿರುವ ಹಿಂದು ರುದ್ರಭೂಮಿಗೆ ಕೊಂಡೊಯ್ಯಬೇಕಾದ ದುಃಸ್ಥಿತಿ ಇವರ ಮನೆ ಮಂದಿಗೆ ಒದಗಿಬಂತು. ಸೂಕ್ತ ಶ್ಮಶಾನ ಸೌಕರ್ಯವಿಲ್ಲದ ಕಾರಣ ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವ ಹಲವು ಗಡಿನಾಡ ಮಂದಿ ಹೆಣ ಸುಡಲು ಕರ್ನಾಟಕದತ್ತ ಮುಖಮಾಡುತ್ತಿದ್ದಾರೆ ಎಂದರೆ ಸಮಸ್ಯೆಯ ಬಗ್ಗೆ ಯಾರಿಗೂ ಅರಿವಾಗದಿರದು.
Related Articles
Advertisement
ಪಂಚಾಯತ್‌ಗೆ ಸಂಬಂಧಿಸಿದ ಕಡತದಲ್ಲಿ ಕೆಲವು ಮೀಸಲು ಜಾಗ ಗಳು ಶ್ಮಶಾನಗಳಿಗಾಗಿ ವರ್ಷಗಳ ಹಿಂದೆಯೇ ನಮೂದಿಸಲ್ಪಟ್ಟಿದ್ದರೂ ಅವುಗಳಲ್ಲಿ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗ ದಿರುವುದು ಇಲ್ಲಿನ ದುರವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ. 20 ಸೆಂಟ್ಸ್ ಸ್ಥಳದಲ್ಲಿ ಸಮರ್ಪಕ ಗೋಡೆ ಆವರಣವುಳ್ಳ ಶ್ಮಶಾನ ನಿರ್ಮಿಸಿ, ಅಗತ್ಯವಿರುವ ಶವಾಗಾರ ಶೆಡ್, ಶವ ಪೆಟ್ಟಿಗೆ, ಸುಡುಯಂತ್ರ, ನೀರು ಸಹಿತ ವಿದ್ಯುತ್ ಸಂಪರ್ಕ ನೀಡಬೇಕೆನ್ನುವುದು ನಿಬಂಧನೆಯಾಗಿದೆ. ಆದರೆ ಇಂತಹ ಮೂಲಭೂತ ಸೌಕರ್ಯಗಳನ್ನು ಪೂರೈಸದಿರುವ ಸ್ಥಳೀಯಾಡಳಿತ ಸಂಸ್ಥೆಯು ಜನರ ಮೊರೆಗೆ ಸ್ಪಂದಿಸದೆ, ದೇಹ ಸುಡಲೂ ಜಾಗ ನೀಡದೆ, ಅಗಲಿದ ಆತ್ಮಕ್ಕೆ ಮೋಕ್ಷ ಕೊಡದೆ, ಜನಸಾಮಾನ್ಯರ ನೋವನ್ನು ಅರಿಯುವ ಗೋಜಿಗೂ ಹೋಗದೇ ನಿರ್ಲಕ್ಷ್ಯ ವಹಿಸುತ್ತಿದೆ.
ಗಾಳಿಯಡ್ಕ ಸಮೀಪದ ಕ್ವಾರ್ಟರ್ಸ್ ವೊಂದರಲ್ಲಿ ವಾಸವಾಗಿದ್ದ ವ್ಯಕ್ತಿ ಅಗಲಿದಾಗ, ಮೂರು ಸೆಂಟ್ಸ್ ಜಾಗವಿರುವ ಇಲ್ಲಿನ ಅಂಗಳದಲ್ಲಿ ಸುಡಲಾಗಲಿಲ್ಲ. ಕಾರಣ ಸಮೀಪ ದಲ್ಲಿಯೇ ಇರುವ ಮತ್ತೂಂದು ಮನೆಯ ಹಿತ್ತಿಲು ಹಾಗೂ ಚಾವಣಿ ಅಂಗಳಕ್ಕೆ ತಾಗಿಕೊಂಡಿತ್ತು. ಹೀಗೆ ಜನಸಾಮಾನ್ಯರು ಸತ್ತರೂ ತೊಂದರೆ ಅದರಲ್ಲೂ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ವ್ಯಕ್ತಿಗಳು ಸತ್ತರಂತೂ ದೇಹ ಸುಡಲೂ ಅಥವಾ ಹೂಳಲು ಒಂದಿಂಚೂ ಜಾಗ ಸಿಗದ ದುಃಸ್ಥಿತಿ ಮಂಜೇಶ್ವರ ತಾಲೂಕಿನ ವಿವಿಧ ಪಂಚಾಯತ್‌ಗಳಲ್ಲಿದೆ.
ವ್ಯವಸ್ಥೆಗಳಿಲ್ಲದ ಶ್ಮಶಾನಗಳುಪೈವಳಿಕೆ ಗ್ರಾಮ ಪಂಚಾಯತ್‌ನ ಅಟ್ಟೆಗೋಳಿ, ಕೊಮ್ಮಂಗಳ, ಸರ್ಕುತ್ತಿ, ಕುಡಾಲುಮೇರ್ಕಳ, ಚೇವಾರು, ಪೆರ್ವೋಡಿಕಟ್ಟೆ, ಬೋಳಂಗಳ, ಕನಿಯಾಲತ್ತಡ್ಕ, ಗಾಳಿಯಡ್ಕ, ಬಾಯಾರು ಕ್ಯಾಂಪ್ಕೋ ಸಮೀಪ ಹೀಗೆ ಹಲವು ಸ್ಥಳಗಳನ್ನು ಶ್ಮಶಾನದ ಮೀಸಲು ಸ್ಥಳಗಳೆಂದು ಪಂಚಾಯತ್‌ನ ಅಸೆಟ್ ಪುಸ್ತಕದಲ್ಲಿ ನಮೂದಿಸಲಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೇ ಮತ್ತು ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಶ್ಮಶಾನದ ಪರಿ ಯಾವುದೆಂದು ಅರಿಯದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮಾತ್ರವಲ್ಲದೆ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಪ್ರದೇಶಗಳ ಮನೆಗಳಲ್ಲಿ ಯಾರಾದರೂ ಸತ್ತರೆ ಇದು ತಮಗೆ ತಗಲಿದ ಶಾಪವೆಂದೇ ಭ್ರಮಿಸುವ ಮಟ್ಟಿಗೆ ಜನರು ಯೋಚಿಸುವಂತಾಗಿದೆ.